Advertisement
ಸ್ವಾತಂತ್ರ್ಯ ಸಂಗ್ರಾಮ ಸಂದರ್ಭದಲ್ಲಿ ಹಿರಿಯರಿಗೆ ದೇಶದ ಮುಂದಿನ ಜನಾಂಗ ಸ್ವಾಭಿಮಾನಿಗಳಾಗಿ ಇರಬೇಕೆಂಬ ಆಶಯವಿತ್ತು. ದೇಶದ ಅಖಂಡತೆ, ಸಾರ್ವಭೌಮತೆಯನ್ನು ಎತ್ತಿ ಹಿಡಿಯುವ ದಿಟ್ಟ ನಿರ್ಧಾರ ಕೈಗೊಳ್ಳಬೇಕೆಂಬ ಕಲ್ಪನೆಯಿತ್ತು. ಆದರೆ ದೇಶದಲ್ಲಿ ಕಾಂಗ್ರೆಸ್ ಆಡಳಿತ ಪ್ರಾರಂಭವಾದಾಗ ನಮ್ಮ ಹಿರಿಯ ಆಶೋತ್ತರ ಮರೆಯುವ ಕೆಲಸ ನಡೆಯಿತು ಎಂದು ಆಕ್ರೋಶ ವ್ಯಕ್ತಪಡಿಸಿದರು.
Related Articles
Advertisement
ಪಿಒಕೆ ಸಮೇತ ದೇಶದೊಳಗೆ ತರುವ ವಿಶ್ವಾಸ: ರಾಜ್ಯ ಬಿಜೆಪಿ ಅಧ್ಯಕ್ಷರಾದ ಸಂಸದ ನಳಿನ್ ಕುಮಾರ್ ಕಟೀಲ್, ಕಾಶ್ಮೀರಕ್ಕೆ ವಿಧಿಸಲಾಗಿದ್ದ 370 ಹಾಗೂ 35ಎ ವಿಧಿಯನ್ನು ರದ್ದುಪಡಿಸಿದ್ದನ್ನು ಯಾರೆಲ್ಲಾ ದೇಶಭಕ್ತರಿದ್ದಾರೋ ಅವರು ಸ್ವಾಗತಿ ಸಿದರೆ ಯಾರೆಲ್ಲಾ ರಾಷ್ಟ್ರ ವಿರೋಧಿಗಳಿದ್ದಾರೋ ಅವರು ವಿರೋಧಿಸಿದ್ದಾರೆ. ರಾಷ್ಟ್ರ ವಿರೋಧಿಗಳಿಗೆ ಒಂದು ಮಾತು ಹೇಳುತ್ತೇವೆ. ಪ್ರಧಾನಿ ನರೇಂದ್ರ ಮೋದಿಯವರು ಐದು ವರ್ಷದಲ್ಲಿ ಕಾಶ್ಮೀರ ಮಾತ್ರವಲ್ಲದೆ, ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ಸಮೇತ ಭಾರತದೊಳಗೆ ತರುವ ವಿಶ್ವಾಸವಿದೆ ಎಂದು ಹೇಳಿದರು.
ಕಾಶ್ಮೀರದ ಬಗ್ಗೆ ಶಂಕರಾಚಾರ್ಯರು ಉಲ್ಲೇಖೀಸಿದ್ದರು. ಶಾರದೆಯ ಪುರವಾಸಿನಿ ಕಾಶ್ಮೀರ. ಶಾರದೆಯ ನಾಡು, ಜ್ಞಾನವಂತರ ನಾಡು, ಪಂಡಿತರ ನಾಡು ಎಂದಿತ್ತು. ಆದರೆ 370ನೇ ವಿಧಿ ಕಾರಣಕ್ಕೆ ಪೆನ್ನಿನ ಮೂಲಕ ಜ್ಞಾನದ ಸಂಕೇತವಾಗಿದ್ದ ಕಾಶ್ಮೀರ ಗನ್‌ಗೆ ಆಡಳಿತ ಕೊಟ್ಟಿತ್ತು. ಜ್ಞಾನವಂತರು, ಪಂಡಿತರು ರೂಪುಗೊಳ್ಳಬೇಕಿದ್ದ ಕಾಶ್ಮೀರದಲ್ಲಿ ಭಯೋತ್ಪಾದಕರು ರೂಪುಗೊಂಡರು. ಆದರೆ ಈಚೆಗೆ ಬದಲಾವಣೆ ಶುರುವಾಗಿದೆ. ಮತ್ತೂಮ್ಮೆ ಶಾರದೆಯ ನಾಡಾಗಲಿದೆ. ಶಾರದೆ ಕುಣಿದಾಡಿದ ನಾಡಾಗಲಿದೆ. ಐದು ವರ್ಷಗಳಲ್ಲಿ ಪರಿವರ್ತನೆ ಯಾಗಲಿದೆ ಎಂದು ಹೇಳಿದರು.
ಕಾಶ್ಮೀರಕ್ಕೆ 370ನೇ ವಿಧಿ ಆಚರಣೆಗೆ ಬಂದಾಗ ಕಾಶ್ಮೀರದಲ್ಲಿ 3 ಕುಟುಂಬಗಳಿಗೆ ಸಂತೋಷವಾಯಿತು. ಆದರೆ ದೇಶದ 30 ಕೋಟಿ ಜನ ಕಣ್ಣೀರು ಹಾಕಿದ್ದರು. ಇತ್ತೀಚೆಗೆ ಪ್ರಧಾನಿ ಮೋದಿಯವರು 370ನೇ ವಿಧಿ ರದ್ದುಪಡಿಸಿದಾಗ ಮೂರು ಕುಟುಂಬಗಳು ಕಣ್ಣೀರು ಹಾಕಿದವು. ಆದರೆ ದೇಶದ 120 ಕೋಟಿ ಜನ ಅದಕ್ಕೆ ಬೆಂಗಾವಲಾಗಿ ನಿಂತರು. ದೇಶದ ಜನ ಸಂತೋಷದಲ್ಲಿದ್ದಾರೆ. ಕಾಶ್ಮೀರ ಇಂದು ಸ್ವತಂತ್ರವಾಗಿದೆ. ಐದು ವರ್ಷ ಅವಧಿಯ ವಿಧಾನಸಭೆ ಅಸ್ತಿತ್ವಕ್ಕೆ ಬರಲಿದೆ ಎಂದು ತಿಳಿಸಿದರು.
ಉದಯವಾಣಿ ಕಚೇರಿ ಭೇಟಿ ಪ್ರಸ್ತಾಪ: ಉದಯವಾಣಿಯ ಮಣಿಪಾಲ ಕಚೇರಿಗೆ ಶನಿವಾರ ಭೇಟಿ ನೀಡಿದ ಸಂದರ್ಭವನ್ನು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದರು. ಉದಯವಾಣಿ ಮಣಿಪಾಲ ಕಚೇರಿಗೆ ತೆರಳಿದ್ದಾಗ ಮಣಿಪಾಲ್ ಗ್ರೂಪ್‌ನ ಆಡಳಿತ ನಿರ್ದೇಶಕ ಟಿ.ಗೌತಮ್ ಪೈ ಅವರನ್ನು ಭೇಟಿಯಾಗಿದ್ದೆ. ಆಗ ಕೇಂದ್ರ ಸರ್ಕಾರವು ಆರ್ಥಿಕತೆಗೆ ಸಂಬಂಧಪಟ್ಟಂತೆ ಇತ್ತೀಚೆಗೆ ತೆಗೆದುಕೊಂಡ ಕೆಲ ದಿಟ್ಟ ನಿರ್ಧಾರಗಳ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಕೇಂದ್ರ ಸರ್ಕಾರ ಮುಂದೆಯೂ ಆರ್ಥಿಕತೆಯನ್ನು ಪ್ರಗತಿಯ ಹಾದಿಗೆ ತರುವ ನಿಟ್ಟಿನಲ್ಲಿ ಇನ್ನು ಹಲವು ಕ್ರಮಗಳನ್ನು ಕೈಗೊಳ್ಳಬೇಕು ಎಂಬ ನಿರೀಕ್ಷೆಯಲ್ಲಿದ್ದೇವೆ ಎಂದು ಹೇಳಿದ್ದನ್ನು ಸದಾನಂದಗೌಡ ಸ್ಮರಿಸಿದರು.
ಗುಂಡಿ ಒತ್ತುವ ಮೂಲಕ ರದ್ದು: ಕಾಶ್ಮೀರಕ್ಕೆ ನೀಡಲಾಗಿದ್ದ 370ನೇ ವಿಧಿ ರದ್ದತಿಯಾದ ಬಗೆಯನ್ನು ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷ ಜೆ.ಪಿ.ನಡ್ಡಾ ಅವರು ನಿರೂಪಿಸಿದ ಬಗೆ ಗಮನ ಸೆಳೆಯಿತು. ನೆರೆದ ಸಭಿಕರನ್ನು ಉದ್ದೇಶಿಸಿ ಮಾತನಾಡಿದ ಜೆ.ಪಿ.ನಡ್ಡಾ, “ನೀವು (ಸಭಿಕರು) ಬೆರಳಿನಿಂದ ಗುಂಡಿ ಒತ್ತುವ ಮೂಲಕ ಕೇಂದ್ರ ಸಚಿವ ಸದಾನಂದಗೌಡ, ಸಂಸದರಾದ ಪಿ.ಸಿ.ಮೋಹನ್, ತೇಜಸ್ವಿ ಸೂರ್ಯ ಅವರನ್ನು ಆಯ್ಕೆ ಮಾಡಿ ದೆಹಲಿಗೆ ಕಳುಹಿಸಿದಿರಿ. ಲೋಕಸಭೆಯಲ್ಲಿ 303 ಸ್ವಂತ ಬಲವಿರುವ ಬಿಜೆಪಿ ಸಂಸದರು ಸೇರಿ 370ನೇ ವಿಧಿ ರದ್ದುಪಡಿಸಿದ್ದಾರೆ. 70 ವರ್ಷಗಳ ನಂತರ ನಡೆದ ಐತಿಹಾಸಿಕ ನಿರ್ಧಾರದಿಂದ ಅವರಿಗೆ ಎಷ್ಟು ಸಂತಸವಾಗಿರಬಹುದು ಎಂಬುದನ್ನು ಕೇಳಿ ನೋಡಿ. ಅವರಿಗೆ ಆ ಶಕ್ತಿಯನ್ನು ನೀವು (ಸಭಿಕರು) ಬೆರಳಿನಿಂದ ಗುಂಡಿ ಒತ್ತುವ ಮೂಲಕ ನೀಡಿದ್ದೀರಿ ಎಂದು ಬಣ್ಣಿಸಿದರು.