ಬೆಂಗಳೂರು: ಭಾರತ ಆರ್ಥಿಕ ಗುಲಾಮಗಿರಿ ಕಡೆಗೆ ಸಾಗುತ್ತಿದೆ ಎಂದು ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಕಳವಳ ವ್ಯಕ್ತಪಡಿಸಿದರು. ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದಿಂದ ಸೋಮವಾರ ಸೆನೆಟ್ ಹಾಲ್‌ನಲ್ಲಿ ಹಮ್ಮಿಕೊಂಡಿದ್ದ “ನಮ್ಮೊಳಗೊಬ್ಬ ಗಾಂಧಿ’ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇಡೀ ವಿಶ್ವವೇ ಒಪ್ಪುವಂತಹ ರಕ್ತರಹಿತ ಕ್ರಾಂತಿಯ ಮೂಲಕ ಗಾಂಧೀಜಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟರು. ಅಹಿಂಸಾ ತತ್ವವನ್ನು ಮೊದಲು ತಮ್ಮ ಜೀವನದಲ್ಲಿ ಅಳವಡಿಸಿಕೊಂಡ ಗಾಂಧೀಜಿ, ನಂತರ ಜಗತ್ತಿಗೆ ಸಾರಿದರು. ಅಂತಹ ಮಹಾತ್ಮ ತಂದುಕೊಟ್ಟ ಸ್ವಾತಂತ್ರ್ಯವನ್ನು ಕಳೆದುಕೊಳ್ಳುತ್ತಿರುವ ನಾವು, ಆರ್ಥಿಕ ಗುಲಾಮಗಿರಿಯತ್ತ ಸಾಗುತ್ತಿದ್ದೇವೆ ಎಂದು ಹೇಳಿದರು.
ಭಾರತದ ಆತ್ಮ ಹಳ್ಳಿಗಳಲ್ಲಿ ಇದೆ ಎಂದು ಗಾಂಧೀಜಿ ನಂಬಿದ್ದರು. ಆದರೆ ನಾವಿಂದು ಹಳ್ಳಿಗಳನ್ನು ಕಣ್ಮರೆ ಮಾಡುತ್ತಿದ್ದೇವೆ. ಅದರೊಂದಿಗೆ ನಮ್ಮ ಪಾರಂಪರಿಕ ಕಸುಬುಗಳನ್ನು ಮರೆತು ವಿದೇಶಿ ಕಂಪನಿಗಳಿಗೆ ಮಣೆ ಹಾಕುತ್ತಿದ್ದೇವೆ. ರಾಜಕಾರಣಿಗಳು ವಿದೇಶಿ ಬಂಡವಾಳದಾರರಿಗೆ ರತ್ನಗಂಬಳಿ ಹಾಸಿ ಸ್ವಾಗತಿಸುತ್ತಿದ್ದಾರೆ.
ಭೂಮಿ, ವಿದ್ಯುತ್, ತೆರಿಗೆ ರಿಯಾಯಿತಿ ನೀಡಿ ದೇಶವನ್ನು ಸುಲಿಗೆ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ. ಇದನ್ನೆಲ್ಲಾ ಗಮನಿಸಿದರೆ ಆರ್ಥಿಕ ಗುಲಾಮಗಿರಿಗೆ ಒಳಗಾಗುತ್ತಿದ್ದೇವೆ ಎಂದು ಆತಂಕವಾಗುತ್ತಿದೆ. ಈ ಬಗ್ಗೆ ಯುವ ಜನತೆ ಎಚ್ಚೆತ್ತುಕೊಳ್ಳದಿದ್ದರೆ ಭವಿಷ್ಯದಲ್ಲಿ ದೊಡ್ಡ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸ್ವಾತಂತ್ರ್ಯ ಬಂದ ನಂತರ ಒಂದು ದಶಕದವರೆಗೆ ಗಾಂಧೀಜಿಯವರು ನಮ್ಮೊಡನೆ ಇದ್ದಿದರೆ ಅಸ್ಪೃಶ್ಯತೆ, ಕೋಮುವಾದ, ಜಾತಿ ವ್ಯವಸ್ಥೆ ಕೊನೆಗಾಣುತ್ತಿತ್ತು. ಆದರೆ, ದೇಶಕ್ಕಾಗಿ ತನ್ನ ಸರ್ವಸ್ವವನ್ನು ಮುಡಿಪಾಗಿಟ್ಟ ವ್ಯಕ್ತಿಯನ್ನು ಗುಂಡಿಕ್ಕಿ ಕೊಂದಿದ್ದಲ್ಲದೆ, ಅವರ ಜೀವನದ ನೈತಿಕ ಮೌಲ್ಯ ಹಾಗೂ ಸಿದ್ಧಾಂತಗಳನ್ನು ತಿರುಚಿ ವಿವಾದ ಸೃಷ್ಟಿಸಲಾಗುತ್ತಿದೆ ಎಂದು ದೊರೆಸ್ವಾಮಿ ಅವರು ಬೇಸರ ವ್ಯಕ್ತಪಡಿಸಿದರು.
ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಜಾಫೆಟ್ ಮಾತನಾಡಿ, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ಅಭಿವೃದ್ಧಿ ಹೊಂದುತ್ತಿದೆ. ಆದರೂ ಸ್ವಾತಂತ್ರ್ಯ ಪೂರ್ವದಲ್ಲಿದ್ದ ಬಡತನ, ಅಸ್ಪೃಶ್ಯತೆ, ಹಸಿವು ಮತ್ತಿತರ ಸಮಸ್ಯೆಗಳು ಇಂದಿಗೂ ಜೀವಂತವಾಗಿವೆ ಎಂದರು. ಕಾರ್ಯಕ್ರಮದಲ್ಲಿ ಕುಲಸಚಿವ ಪ್ರೊ.ರಾಮಚಂದ್ರ ಗೌಡ, ಮೌಲ್ಯಮಾಪನ ಕುಲಪತಿ ಪ್ರೊ.ಲಿಂಗರಾಜು ಗಾಂಧಿ ಮತ್ತಿತರರು ಉಪಸ್ಥಿತರಿದ್ದರು.