ನವದೆಹಲಿ:ರಣಭೀಕರ ಭೂಕಂಪಕ್ಕೆ ತುತ್ತಾಗಿರುವ ಟರ್ಕಿ ದೇಶಕ್ಕೆ ಸಹಾಯ ಹಸ್ತ ಚಾಚಲು ಭಾರತ ಮುಂದಾಗಿದೆ. ಭೂಕಂಪನಕ್ಕೆ ತುತ್ತಾಗಿ ಮೃತಪಟ್ಟವರ ಸಂಖ್ಯೆ ಹೆಚ್ಚಾಗುತ್ತಲೇ ಸಾಗಿದ್ದು ಕಟ್ಟಡಗಳ ಅಡಿಯಲ್ಲಿ ಸಿಲುಕಿ ನಾಪತ್ತೆಯಾದವರನ್ನು ರಕ್ಷಿಸಲು ಟರ್ಕಿ ಸರ್ಕಾರ ಹರಸಾಹಸ ಪಡುತ್ತಿದೆ. ಈ ಮಧ್ಯೆ ಭಾರತ ಟರ್ಕಿ ನೆರವಿಗೆ ಧಾವಿಸಲು ಸಜ್ಜಾಗಿದ್ದು ಭಾರತದಿಂದ 2 NDRF ತಂಡದ ಜೊತೆಗೆ ಶ್ವಾನದಳವನ್ನೂ ಟರ್ಕಿಗೆ ಕಳುಹಿಸಲು ತೀರ್ಮಾನಿಸಿದೆ.
ಟರ್ಕಿ ದುರಂತದಲ್ಲಿ ನಾಪತ್ತೆಯಾದವರನ್ನು ಪತ್ತೆ ಹಚ್ಚಲು NDRF ತಂಡ ಸಹಕರಿಸಲಿದ್ದು ತಂಡದ ಜೊತೆಯಲ್ಲಿ ವೈದ್ಯಕೀಯ ಮತ್ತು ರಕ್ಷಣಾ ಸಲಕರಣೆಗಳನ್ನೂ ಟರ್ಕಿಗೆ ರವಾನಿಸಲು ಭಾರತ ಸಿದ್ಧತೆ ನಡೆಸಿದೆ.
ಪ್ರಧಾನಮಂತ್ರಿಗಳ ಕಾರ್ಯಾಲಯದಲ್ಲಿ ಪ್ರಧಾನಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಡಾ.ಪಿ.ಕೆ. ಮಿಶ್ರಾ ಅವರ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.
2 NDRF ತಂಡದಲ್ಲಿ 100 ಮಂದಿ ಸಿಬ್ಬಂದಿಗಳು ಇರಲಿದ್ದು ವಿಶೇಷವಾಗಿ ತರಬೇತಿ ಪಡೆದ ಶ್ವಾನದಳವನ್ನೂ, ಅಗತ್ಯ ರಕ್ಷಣಾ ಸಲಕರಣೆಗಳನ್ನೂ ಭೂಕಂಪ ಪೀಡಿತ ಟರ್ಕಿಗೆ ಭಾರತ ಕಳುಹಿಸಿಕೊಡಲಿದೆ ಎಂದು ಪ್ರಧಾನಮಂತ್ರಿಗಳ ಕಾರ್ಯಾಲಯ ಹೇಳಿಕೊಂಡಿದೆ.
ದುರಂತಕ್ಕೆ ಸಂಬಂಧಿಸಿ ಟರ್ಕಿ ಸರ್ಕಾರಕ್ಕೆ ಭಾರತ ಅಗತ್ಯ ನೆರವು ನೀಡುತ್ತದೆ ಎಂದು ಪ್ರಧಾನಿ ಮೋದಿ ಟ್ವೀಟ್ ಮೂಲಕ ಹೇಳಿಕೊಂಡ ಬೆನ್ನಲ್ಲೇ ಭಾರತ ಈ ಮಹತ್ವದ ತೀರ್ಮಾನ ಕೈಗೊಂಡಿದೆ.