Advertisement

India-England ದ್ವಿತೀಯ ಟೆಸ್ಟ್‌ ಇಂದಿನಿಂದ: ತಿರುಗೇಟು ನೀಡಲು ಪ್ರಯತ್ನ

12:26 AM Feb 02, 2024 | Team Udayavani |

ವಿಶಾಖಪಟ್ಟಣ: ಮೊದಲ ಟೆಸ್ಟ್‌ ಪಂದ್ಯದ ಅನಿರೀಕ್ಷಿತ ಸೋಲು, ಪ್ರಮುಖ ಆಟಗಾರರ ಅನುಪಸ್ಥಿತಿ ಯಿಂದ ಬಹಳಷ್ಟು ಒತ್ತಡಕ್ಕೆ ಸಿಲುಕಿರುವ ಭಾರತೀಯ ತಂಡವು ಶುಕ್ರವಾರದಿಂದ ಆರಂಭವಾಗುವ ದ್ವಿತೀಯ ಟೆಸ್ಟ್‌ನಲ್ಲಿ ಇಂಗ್ಲೆಂಡ್‌ ಸವಾಲನ್ನು ಎದುರಿಸಲು ಸಜ್ಜಾಗಿದೆ.

Advertisement

ವಿರಾಟ್‌ ಕೊಹ್ಲಿ ಸಹಿತ ಗಾಯಗೊಂಡಿರುವ ರವೀಂದ್ರ ಜಡೇಜ ಮತ್ತು ಕೆಎಲ್‌ ರಾಹುಲ್‌ ಅವರ ಅನುಪ ಸ್ಥಿತಿ ಯಲ್ಲಿ ಭಾರತ ಮುಂದಿನ ಪಂದ್ಯಗಳಲ್ಲಿ ತಿರುಗೇಟು ನೀಡಲು ಸಿದ್ಧತೆ ನಡೆಸುತ್ತಿದೆ. ಮೂರು ವರ್ಷ ಗಳ ಹಿಂದೆಯೂ ಬಲಿಷ್ಠ ಆತಿಥೇಯ ತಂಡವು ಚೆನ್ನೈಯಲ್ಲಿ ನಡೆದ ಆರಂಭಿಕ ಪಂದ್ಯದಲ್ಲಿ ಇಂಗ್ಲೆಂಡ್‌ ವಿರುದ್ಧ ಸೋತ ಬಳಿಕ ಸರಣಿ ಗೆದ್ದ ಸಾಧನೆ ಮಾಡಿತ್ತು. ಅಂತಹುದೇ ನಿರ್ವಹಣೆಯನ್ನು ಭಾರತ ಈ ಬಾರಿಯೂ ಮುಂದುವರಿಸುವ ವಿಶ್ವಾಸದಲ್ಲಿದೆ.

ಮೊದಲ ಇನ್ನಿಂಗ್ಸ್‌ನಲ್ಲಿ ಮುನ್ನಡೆ ಸಾಧಿಸಿದ್ದ ಭಾರತ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್‌ ವೈಫ‌ಲ್ಯದಿಂದ ಸೋಲನ್ನು ಕಂಡಿರುವುದು ಇಂಗ್ಲೆಂಡಿನ ಬೌಲಿಂಗ್‌ ಪರಾಕ್ರಮಕ್ಕೆ ಸಾಕ್ಷಿಯಾಗಿದೆ.

ಕುಲದೀಪ್‌ ಆಡುವ ಸಾಧ್ಯತೆ
ರವೀಂದ್ರ ಜಡೇಜ ಅವರ ಅನುಪಸ್ಥಿತಿಯಲ್ಲಿ ಕುಲದೀಪ್‌ ಯಾದವ್‌ ಈ ಪಂದ್ಯದಲ್ಲಿ ಆಡುವ ಸಾಧ್ಯತೆಯಿದೆ. ಒಂದು ವೇಳೆ ಭಾರತ ಒಬ್ಬರು ವೇಗಿಯೊಂದಿಗೆ ಆಡಲು ಇಳಿದರೆ ವಾಷಿಂಗ್ಟನ್‌ ಸುಂದರ್‌ ಆಡುವ ಬಳಗಕ್ಕೆ ಸೇರ್ಪಡೆಯಾಗಬಹುದು.

ಆ್ಯಂಡರ್ಸನ್‌ ಆಗಮನ
ಹೈದರಾಬಾದ್‌ನಲ್ಲಿ 25 ಓವರ್‌ ಎಸೆದಿದ್ದರೂ ಪರಿಣಾಮಕಾರಿಯಾಗದಿದ್ದ ವೇಗಿ ಮಾರ್ಕ್‌ ವುಡ್‌ ಅವರ ಬದಲಿಗೆ ಅನುಭವಿ ವೇಗಿ ಜೇಮ್ಸ್‌ ಆ್ಯಂಡರ್ಸನ್‌ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ಇಂಗ್ಲೆಂಡ್‌ ನಿರ್ಧರಿಸಿದೆ. ಇದರ ಜತೆ ಈ ಪಂದ್ಯಕ್ಕೆ ಇಂಗ್ಲೆ,ಡ್‌ ಸ್ಪಿನ್‌ಗೆ ಹೆಚ್ಚಿನ ಮಹತ್ವ ನೀಡುವ ಸಾಧ್ಯತೆಯಿದೆ ಎನ್ನಲಾಗಿದೆ.
ಮೊಣಕಾಲಿನ ಗಾಯದಿಂದಾಗಿ ತಂಡದಿಂದ ಹೊರ ಬಿದ್ದಿರುವ ಜಾಕ್‌ ಲೀಚ್‌ ಅವರ ಬದಲಿಗೆ ಯುವ ಆಫ್ ಸ್ಪಿನ್ನರ್‌ ಶೋಯಿಬ್‌ ಬಶೀರ್‌ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಒಂದು ವೇಳೆ ಅವರು ಆಡುವ ಬಳಗದಲ್ಲಿದ್ದರೆ ಟೆಸ್ಟ್‌ಗೆ ಪಾದಾರ್ಪಣೆಗೈಯಲಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next