Advertisement

ಸಾರ್ಕ್‌ಗೆ ಭಾರತ ನಕಾರ

06:33 AM Nov 29, 2018 | Team Udayavani |

ಹೊಸದಿಲ್ಲಿ/ಇಸ್ಲಾಮಾಬಾದ್‌: ಭಾರತದ ವಿರುದ್ಧ ಉಗ್ರಗಾಮಿ ಚಟುವಟಿಕೆಗಳನ್ನು ನಿಲ್ಲಿಸದ ಹೊರತು ಪಾಕಿಸ್ಥಾನದ ಜತೆಗೆ ಮಾತುಕತೆ ನಡೆಸುವುದಿಲ್ಲ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಖಡಕ್ಕಾಗಿ ಹೇಳಿದ್ದಾರೆ. ಅಷ್ಟೇ ಅಲ್ಲ, ಸಾರ್ಕ್‌ ಸಮ್ಮೇಳನದಲ್ಲೂ ಭಾರತ ಭಾಗವಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಪಾಕ್‌ ಉಗ್ರರ ಪೋಷಣೆ ನಿಲ್ಲಿಸದ ಹೊರತು ಮಾತುಕತೆ ನಡೆಸಲು ಸಾಧ್ಯವಿಲ್ಲ ಎಂಬ ತನ್ನ ನಿಲುವನ್ನು ಭಾರತ ಇನ್ನಷ್ಟು ಗಟ್ಟಿಗೊಳಿಸಿದೆ. ಕರ್ತಾರ್ಪುರ ಕಾರಿಡಾರ್‌ ನಿರ್ಮಾಣಕ್ಕೆ ಭಾರತ ಮುಂದಾಗಿರುವುದು ಪಾಕಿಸ್ಥಾನದೊಂದಿಗೆ ಮಾತುಕತೆ ಪ್ರಕ್ರಿಯೆಯ ಭಾಗವಲ್ಲ. ಕರ್ತಾರ್ಪುರ ಕಾರಿಡಾರ್‌ ವಿಷಯ  ವನ್ನು ಮಾತುಕತೆ ನಿಟ್ಟಿನಲ್ಲಿ ಮುಂದಿಟ್ಟ ಹೆಜ್ಜೆ ಎಂದು ಪರಿಗಣಿಸಬಾರದು ಎಂದೂ ಸುಷ್ಮಾ ಸ್ಪಷ್ಟಪಡಿಸಿದ್ದಾರೆ.

Advertisement

ಮಂಗಳವಾರವಷ್ಟೇ ಸಾರ್ಕ್‌ ಶೃಂಗಕ್ಕೆ ಪ್ರಧಾನಿ ನರೇಂದ್ರ ಮೋದಿಗೆ ಆಹ್ವಾನ ನೀಡಲಾಗುತ್ತದೆ ಎಂದು ಪಾಕಿಸ್ಥಾನ ಹೇಳಿತ್ತು. ಈ ಹಿನ್ನೆಲೆಯಲ್ಲಿ ಹೈದರಾ ಬಾದ್‌ ನಲ್ಲಿ ಬುಧವಾರ ಸುಷ್ಮಾ ಸ್ವರಾಜ್‌ ಈ ಪ್ರತಿ ಕ್ರಿಯೆ ನೀಡಿದ್ದಾರೆ. ಈಗ ಇತರ ದೇಶಗಳು ಯಾವ ನಿರ್ಧಾರ ಕೈಗೊಳ್ಳುತ್ತವೆ ಎಂಬ ಕುತೂಹಲ ಮೂಡಿದೆ. 2016ರಲ್ಲಿ ಜಮ್ಮು-ಕಾಶ್ಮೀರದಲ್ಲಿ ಉರಿ ಸೇನಾ ನೆಲೆಯ ಮೇಲೆ ಪಾಕ್‌ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಸಾರ್ಕ್‌ ಶೃಂಗದಲ್ಲಿ ಭಾಗವಹಿಸದಿರಲು ಭಾರತ ನಿರ್ಧರಿಸಿತ್ತು. ಇದರ ಜತೆಗೆ ಬಾಂಗ್ಲಾದೇಶ, ಭೂತಾನ್‌, ಅಫ್ಘಾನಿಸ್ಥಾನ ಕೂಡ ಸಮ್ಮೇಳನದಲ್ಲಿ ಭಾಗವಹಿಸದಿರಲು ನಿರ್ಧರಿಸಿತ್ತು. ಹೀಗಾಗಿ ಸಮ್ಮೇಳನವೇ ರದ್ದುಗೊಂಡಿತ್ತು. 

ಉಗ್ರವಾದ ಮರೆತು ಶಾಂತಿಯ ಮಾತು!
ಅತ್ತ, ಪಾಕಿಸ್ಥಾನದ ಕರ್ತಾರ್ಪುರದಲ್ಲಿ ಭಾರತದ ಗಡಿಯ ವರೆಗೆ ಕಾರಿಡಾರ್‌ ನಿರ್ಮಾಣದ ಅಡಿಗಲ್ಲು ಸಮಾ ರಂಭದಲ್ಲಿ ಮಾತನಾಡಿದ ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌, ಭಾರತದೊಂದಿಗೆ ಉತ್ತಮ ಸಂಬಂಧ ನಿರ್ಮಾಣ ಮಾಡಲು ಬಯಸುತ್ತೇನೆ ಎಂದಿದ್ದಾರೆ. ಆದರೆ ಭಾರತ ಎದುರಿಸುತ್ತಿರುವ ಉಗ್ರವಾದದ ಬಗ್ಗೆ ಚಕಾರವನ್ನೂ ಎತ್ತಿಲ್ಲ. ಸಂಬಂಧ ವೃದ್ಧಿಯ ನಿಟ್ಟಿನಲ್ಲಿ ಭಾರತ ಒಂದು ಹೆಜ್ಜೆ ಮುಂದಿಟ್ಟರೆ, ಪಾಕಿಸ್ಥಾನ ಎರಡು ಹೆಜ್ಜೆ ಮುಂದಿಡುತ್ತದೆ ಎಂದಿದ್ದಾರೆ.

ಕಾರ್ಯಕ್ರಮದಲ್ಲಿ  ಖಲಿಸ್ಥಾನಿ ಉಗ್ರ
ಅಡಿಗಲ್ಲು  ಸಮಾರಂಭದಲ್ಲಿ  ಸಿಧುಗೆ ಮೊದಲಿನ ಸಾಲಿನಲ್ಲೇ ಆಸನ ವ್ಯವಸ್ಥೆ ಮಾಡಲಾಗಿತ್ತು. ಈ ಹಿಂದೆ ಇಮ್ರಾನ್‌ ಪ್ರಮಾಣ ವಚನ ಕಾರ್ಯಕ್ರಮದ ವೇಳೆ ಕಾಶ್ಮೀರ ಪ್ರತ್ಯೇಕತಾವಾದಿ ಮುಖಂಡರ ಸಾಲಿನಲ್ಲಿ ಸಿಧು ಕುಳಿತಿದ್ದು ತೀವ್ರ ವಿವಾದಕ್ಕೀಡಾಗಿತ್ತು. ಈ ಹಿನ್ನೆಲೆಯಲ್ಲಿ ಈ ಬಾರಿ ಸಿಧುಗೆ ಮೊದಲ ಸಾಲಿನಲ್ಲಿ ಆಸನ ನೀಡಲಾಗಿತ್ತು. ಆದರೆ ಕೇಂದ್ರ ಸಚಿವೆ ಹರ್‌ಸಿಮ್ರತ್‌ ಕೌರ್‌ಗೆ ಹಿಂದಿನ ಸಾಲಿನಲ್ಲಿ ಅವಕಾಶ ಮಾಡಿಕೊಡಲಾಗಿತ್ತು. ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಪ್ರತ್ಯೇಕತಾವಾದಿ ಮುಖಂಡರನ್ನು ಕರೆದು ಭಾರತದ ಕೆಂಗಣ್ಣಿಗೆ ಗುರಿಯಾಗಿದ್ದ ಪಾಕಿಸ್ಥಾನ ಈ ಬಾರಿಯೂ ಅಂಥದ್ದೇ ಉದ್ಧಟತನ ಮೆರೆದಿದೆ. ಈ ಬಾರಿ ಖಲಿಸ್ಥಾನಿ ಉಗ್ರ ಮುಖಂಡ ಗೋಪಾಲ್‌ ಸಿಂಗ್‌ನ್ನು ಆಹ್ವಾನಿಸಿದೆ. ಈತ ಕಾರ್ಯಕ್ರಮದ ಅನಂತರದಲ್ಲಿ ಪಾಕ್‌ ಸೇನೆ ಮುಖ್ಯಸ್ಥ ಜನರಲ್‌ ಖಮರ್‌ ಜಾವೇದ್‌ ಬಾಜ್ವಾ ಜತೆ ಹಸ್ತಲಾಘವ ಮಾಡಿದ ದೃಶ್ಯಗಳೂ ಸೆರೆಯಾಗಿವೆ. ಕೆಲವೇ ದಿನಗಳ ಹಿಂದೆ ಗುರುದಾಸ್‌ಪುರದಲ್ಲಿ ನಿರಂಕಾರಿ ಪಂಥದವರ ಮೇಲೆ ದಾಳಿ ನಡೆಸಿದ ಪ್ರಕರಣದಲ್ಲಿ ಖಲಿಸ್ಥಾನಿ ಉಗ್ರರ ಕೈವಾಡವಿದೆ ಎನ್ನಲಾಗಿದ್ದು, ಗೋಪಾಲ್‌ ಸಿಂಗ್‌ ಮೇಲೂ ಶಂಕೆ ವ್ಯಕ್ತಪಡಿಸಿವೆ. 

ಸಿಧು ಪಾಕ್‌ನಲ್ಲೂ ಗೆಲ್ಲುತ್ತಾರೆ!
ಭಾರತದಲ್ಲಿ ಕರ್ತಾರ್ಪುರ ಕಾರಿಡಾರ್‌ ನಿರ್ಮಾಣದ ಅಡಿಗಲ್ಲು ಸಮಾರಂಭಕ್ಕೆ ಗೈರಾಗಿದ್ದ ಪಂಜಾಬ್‌ ಸಚಿವ ನವ್‌ಜೋತ್‌ ಸಿಂಗ್‌ ಸಿಧು ಪಾಕಿಸ್ಥಾನದಲ್ಲಿ ಬುಧವಾರ ನಡೆದ ಕಾರ್ಯಕ್ರಮಕ್ಕೆ ಹಾಜರಾಗಿದ್ದಾರೆ. ಅಷ್ಟೇ ಅಲ್ಲ, ಇಮ್ರಾನ್‌ ಖಾನ್‌ರನ್ನು ಕಾರ್ಯಕ್ರಮದಲ್ಲಿ ಹಾಡಿಹೊಗಳಿದ್ದಾರೆ. ಇಮ್ರಾನ್‌ ನನ್ನ ಆತ್ಮೀಯ ಗೆಳೆಯ. 70 ವರ್ಷಗಳ ಸಿಕ್ಖರ ಕನಸನ್ನು ನನಸಾಗಿಸಿದ್ದಾರೆ. ಅವರು ಭರವಸೆಯನ್ನು ಈಡೇರಿಸಿದ್ದಾರೆ ಎಂದಿದ್ದಾರೆ. ಗಡಿಯಲ್ಲಿ ಹಿಂಸಾಚಾರ ನಿಲ್ಲಬೇಕು. ಉಭಯ ದೇಶಗಳು ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಬೇಕು ಎಂದಿದ್ದಾರೆ. ಈ ಮಧ್ಯೆ ಸಿಧು ಅವರನ್ನು ಕೂಡ ಹೊಗಳಿದ ಇಮ್ರಾನ್‌, ಸಿಧು ಹಿಂದಿನ ಬಾರಿ ಪಾಕ್‌ಗೆ ಆಗಮಿಸಿದಾಗ ಭಾರತದಲ್ಲಿ ಅವರ ಬಗ್ಗೆ ಟೀಕೆ ಕೇಳಿಬಂದಿತ್ತು. ಸಿಧು ವಿಶಾಲ ಹೃದಯವಿರುವ ವ್ಯಕ್ತಿ. ಬಹುಶಃ ಭಾರತ ಮತ್ತು ಪಾಕಿಸ್ಥಾನದ ಮಧ್ಯೆ ಸಂಬಂಧ ಸುಧಾರಣೆಯಾಗಿ ಶಾಂತಿ ನೆಲೆಸಬೇಕಾದರೆ ಸಿಧು ಪ್ರಧಾನಿಯಾಗುವವರೆಗೆ ನಾವು ಕಾಯುವಂತಾಗಬಾರದು. ಈಗಿನ ನಾಯಕತ್ವವೇ ಆ ನಿಟ್ಟಿನಲ್ಲಿ ಸಕಾರಾತ್ಮಕ ಹೆಜ್ಜೆಯಿಡಬೇಕು ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, ಸಿಧು ಪಾಕಿಸ್ಥಾನಕ್ಕೆ ಆಗಮಿಸಿ ಚುನಾವಣೆಗೆ ನಿಂತರೂ ಗೆಲ್ಲುತ್ತಾರೆ ಎಂದಿದ್ದಾರೆ. ಎರಡೂ ದೇಶಗಳು ಅಣ್ವಸ್ತ್ರ ಸಜ್ಜಿತವಾಗಿದ್ದು, ಯುದ್ಧ ನಡೆಸುವುದು ಮೂರ್ಖತನ. ಹೀಗಾಗಿ ಸ್ನೇಹ ಬೆಸೆಯುವುದರ ಹೊರತು ಬೇರೆ ಯಾವ ಆಯ್ಕೆಯಿದೆ ಎಂದು ಇಮ್ರಾನ್‌ ಪ್ರಶ್ನಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next