ಜೈಸಲ್ಮೇರ್: ಡ್ರೋನ್ ದಾಳಿಗಳನ್ನು ಹಿಮ್ಮೆಟ್ಟಿಸುವ ಸಲುವಾಗಿ, ದೇಶೀಯವಾಗಿ ಡ್ರೋನ್ ನಿಗ್ರಹ ವ್ಯವಸ್ಥೆಯೊಂದನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಶೀಘ್ರದಲ್ಲೇ ಈ ವ್ಯವಸ್ಥೆಯು ಗಡಿಗಳಲ್ಲಿ ಸೇವೆ ಸಲ್ಲಿಸುವ ಭದ್ರತಾ ಪಡೆಗಳಿಗೆ ಲಭ್ಯವಾಗಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ.
ರಾಜಸ್ತಾನದ ಜೈಸಲ್ಮೇರ್‌ನಲ್ಲಿ ಆಯೋಜಿಸಲಾಗಿದ್ದ ಬಿಎಸ್‌ಎಫ್ ನ 57ನೇ ಸಂಸ್ಥಾಪನಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಿಎಸ್‌ಎಫ್, ಎನ್‌ಎಸ್‌ಜಿ, ಡಿಆರ್‌ಡಿಒ ಜಂಟಿಯಾಗಿ ಈ ತಂತ್ರಜ್ಞಾನ ಅಭಿವೃದ್ಧಿಪಡಿಸುತ್ತಿದೆ ಎಂದಿದ್ದಾರೆ.
ಗಡಿ ಭದ್ರತೆ ವಿಚಾರದಲ್ಲಿ ವಿಶ್ವದ ನಾನಾ ರಾಷ್ಟ್ರಗಳಲ್ಲಿ ಬಳಕೆಯಲ್ಲಿರುವ ಉತ್ಕೃಷ್ಟ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ಸರ್ಕಾರ ಉತ್ಸುಕವಾಗಿದೆ’ ಎಂದರು.
ಇದನ್ನೂ ಓದಿ:ಪ್ರಧಾನಿ ಮೋದಿಯೇ ನನಗೆ ರಾಜೀನಾಮೆ ನೀಡುವುದು ಬೇಡ ಎಂದಿದ್ದರು: ಹೆಚ್ ಡಿಡಿ
“ದೇಶವು ಸುಭದ್ರವಾಗಿದ್ದರೆ ಮಾತ್ರ ಅಭಿವೃದ್ಧಿಯ ಕಡೆಗೆ ಹೆಜ್ಜೆ ಹಾಕಲು ಸಾಧ್ಯ. ನೀವು (ಬಿಎಸ್‌ಎಫ್ ಯೋಧರು) ದೇಶವನ್ನು ಕಾಯುತ್ತಿರುವುದರಿಂದಲೇ ದೇಶ ಅಭಿವೃದ್ಧಿಯಾಗುತ್ತಿದೆ. ಭಾರತವನ್ನು ಕೆಣಕಿದ ರಾಷ್ಟ್ರಗಳಿಗೆ ಪ್ರತಿದಾಳಿಗಳ ಮೂಲಕ ಬಿಸಿ ಮುಟ್ಟಿಸುವ ದಿಟ್ಟತನದ ನಿರ್ಧಾರಗಳನ್ನು ಕೈಗೊಳ್ಳುವ ಮೂಲಕ ಮೋದಿ ಸರ್ಕಾರ, ಭಾರತದ ಗಡಿಯನ್ನು, ಭಾರತದ ಯೋಧರನ್ನು ಕೆಣಕಿದವರನ್ನು ಸಹಿಸುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ವಿಶ್ವಕ್ಕೆ ರವಾನಿಸಿದೆ’ ಎಂದು ಶಾ ತಿಳಿಸಿದರು.