Advertisement

ಬರೋಬ್ಬರಿ 200 ಕೋಟಿ ಕೋವಿಡ್ ಲಸಿಕೆ; ಭಾರತ ಅದ್ಭುತ ಸಾಧನೆ

10:43 PM Jul 17, 2022 | Team Udayavani |

ನವದೆಹಲಿ: ಬರೋಬ್ಬರಿ 200 ಕೋಟಿ ಡೋಸ್‌ ಲಸಿಕೆ! ದೇಶದಲ್ಲಿ ಕೋವಿಡ್ ಸೋಂಕಿನ ವಿರುದ್ಧ ಲಸಿಕೆ ಹೋರಾಟ ನಡೆಸಲು ಶುರು ಮಾಡಿದ ಬಳಿಕ ಒಂದು ದಿನದಲ್ಲಿ ನೀಡಲಾಗಿರುವ ಲಸಿಕೆಯ ಡೋಸ್‌ಗಳ ಸಂಖ್ಯೆ ಇದು. 2021ರ ಜ.18ರಂದು ಪ್ರಧಾನಿ ನರೇಂದ್ರ ಮೋದಿಯವರು 18 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟವರಿಗೆ ಲಸಿಕೆ ನೀಡಲು ಶುರು ಮಾಡಿದ ಬಳಿಕದ ಅತ್ಯಧಿಕ ಸಾಧನೆ ಇದಾಗಿದೆ.

Advertisement

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಭಾನುವಾರ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ ಶೇ.98 ಮಂದಿ ಪ್ರಾಪ್ತ ವಯಸ್ಕರಿಗೆ ಕನಿಷ್ಠ ಒಂದು ಡೋಸ್‌ ಲಸಿಕೆ ಪಡೆದುಕೊಂಡಿದ್ದಾರೆ. ಇನ್ನು ಶೇ.90 ಮಂದಿಗೆ ಎರಡೂ ಡೋಸ್‌ಗಳು ಪೂರ್ತಿಯಾಗಿದೆ.

15ರಿಂದ18 ವರ್ಷ ವಯೋಮಿತಿಯವರಿಗೆ ಜ.3ರಿಂದ ಲಸಿಕೆ ನೀಡಲು ಪ್ರಾರಂಭಿಸಲಾಗಿತ್ತು. ಈ ಪೈಕಿ ಶೇ.82 ಮಂದಿಗೆ ಮೊದಲ ಡೋಸ್‌, ಶೇ.68 ಮಂದಿಗೆ ಎರಡೂ ಡೋಸ್‌ಗಳನ್ನು ನೀಡಲಾಗಿದೆ ಎಂದು ಸರ್ಕಾರ ತಿಳಿಸಿದೆ.

ದೇಶಕ್ಕೆ ಸ್ವಾಂತಂತ್ರ್ಯ ಲಭಿಸಿ 75 ವರ್ಷಗಳಾಗಿರುವ ಹಿನ್ನೆಲೆಯಲ್ಲಿ ಅಮೃತಮಹೋತ್ಸವ ಆಚರಿಸಲಾಗುತ್ತಿದ್ದು ಈ ಸಂಬಂಧ ಜು.15ರಿಂದಲೇ ಎಲ್ಲ ಅರ್ಹ ವಯಸ್ಕರಿಗೆ ಬೂಸ್ಟರ್‌ ಡೋಸ್‌ ನೀಡುವ ಕೆಲಸ ಆರಂಭವಾಗಿದೆ. ಇದು 75 ದಿನಗಳ ಕಾಲ ಮುಂದುವರಿಯಲಿದೆ.

ಪ್ರಧಾನಿ, ಆರೋಗ್ಯ ಸಚಿವರ ಶ್ಲಾಘನೆ:
ದೇಶ ಇಂಥ ಸಾಧನೆ ಮಾಡಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಸ ವ್ಯಕ್ತಪಡಿಸಿದ್ದಾರೆ ಮತ್ತು ಸಾರ್ವಜನಿಕರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ, “200 ಕೋಟಿ ಡೋಸ್‌ ಲಸಿಕೆ ನೀಡುವ ಮೂಲಕ ದೇಶ ಮತ್ತೊಂದು ಇತಿಹಾಸ ಸೃಷ್ಟಿಸಿದೆ.

Advertisement

ಶರವೇಗದಲ್ಲಿ ಇಂಥ ಸಾಧನೆ ಮಾಡುವಲ್ಲಿ ನೆರವಾದವರಿಗೆ ತುಂಬು ಹೃದಯದ ಅಭಿನಂದನೆಗಳು. ಇದರಿಂದಾಗಿ ಜಗತ್ತಿನಲ್ಲಿ ಕೋವಿಡ್ ವಿರುದ್ಧ ಹೋರಾಟ ಮಾಡುವುದಕ್ಕೆ ಮತ್ತಷ್ಟು ಸ್ಫೂರ್ತಿ ತುಂಬಿದಂತೆ ಆಗಿದೆ. ದೇಶಾದ್ಯಂತ ಲಸಿಕೆ ನೀಡಲು ಶುರು ಮಾಡಿದ ಬಳಿಕ ಜನರು ಉತ್ತಮವಾಗಿಯೇ ಸ್ಪಂದಿಸಿದ್ದಾರೆ. ನಮ್ಮ ವಿಜ್ಞಾನಿಗಳು, ವೈದ್ಯರು, ದಾದಿಯರು, ಮುಂಚೂಣಿ ಕಾರ್ಯಕರ್ತರು, ಸಂಶೋಧಕರು, ಉದ್ಯಮಿಗಳು ಸೇರಿದಂತೆ ಹಲವು ಈ ನಿಟ್ಟಿನಲ್ಲಿ ಪ್ರಮುಖ ಕೊಡುಗೆ ನೀಡಿದ್ದಾರೆ. ಅವರ ಸಾಧನೆ ಮತ್ತು ಸ್ಫೂರ್ತಿಯನ್ನು ಗೌರವಿಸುತ್ತೇನೆ ಎಂದು ಟ್ವೀಟ್‌ ಮಾಡಿದ್ದಾರೆ.

“2022 ಜು.17 ನೆನಪಿನಲ್ಲಿ ಇರಿಸುವಂಥ ದಿನ’ ಎಂದು ಆರೋಗ್ಯ ಸಚಿವ ಮನಸುಖ ಮಾಂಡವಿಯಾ ಟ್ವೀಟ್‌ ಮಾಡಿದ್ದಾರೆ.

ಯಾರಿಗೆ ಎಷ್ಟು?
ಕೇಂದ್ರ ಸರ್ಕಾರದ ಮಾಹಿತಿ ಪ್ರಕಾರ ಶೇ.48.9 ಮಂದಿ ಪುರುಷರಿಗೆ, ಶೇ.51.5 ಮಹಿಳೆಯರಿಗೆ, ಶೇ.0.02 ಇತರರಿಗೆ ಲಸಿಕೆ ನೀಡಲಾಗಿದೆ. ಉತ್ತರ ಪ್ರದೇಶ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಬಿಹಾರ ಮತ್ತು ಮಧ್ಯಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಲಸಿಕೆ ನೀಡಿ ಸಾಧನೆ ಮಾಡಿವೆ.

ದಿನ ಡೋಸ್‌ ಸಂಖ್ಯೆ (ಕೋಟಿಗಳಲ್ಲಿ)
2021 ಆ.21- 50 ಕೋಟಿ
2021 ಸೆ.14- 75 ಕೋಟಿ
2021 ಅ.21 100 ಕೋಟಿ
ಮೂರರ ನಡುವಿನ ಅಂತರ 9 ತಿಂಗಳು
2022 ಜ.7 150 ಕೋಟಿ
2022 ಫೆ.19 175 ಕೋಟಿ
2022 ಜು.17 200 ಕೋಟಿ
ಮೂರರ ನಡುವಿನ ಅಂತರ 9 ತಿಂಗಳು
278 ದಿನಗಳು- 100 ಕೋಟಿ ಡೋಸ್‌ ನೀಡಲು ಬೇಕಾದ ದಿನಗಳು
269 ದಿನಗಳು- 200 ಕೋಟಿ ಡೋಸ್‌ ನೀಡಲು ಬೇಕಾದ ದಿನಗಳು

Advertisement

Udayavani is now on Telegram. Click here to join our channel and stay updated with the latest news.

Next