Advertisement

ಪರಿಸರ ರಕ್ಷಣೆಗೆ ಭಾರತ ಬದ್ಧ

01:27 AM Aug 27, 2019 | Team Udayavani |

ಬಿಯಾರಿಜ್‌: ಹವಾಮಾನ ವೈಪರೀತ್ಯ ತಡೆ ಹಾಗೂ ಪರಿಸರ ರಕ್ಷಣೆಗಾಗಿ ಭಾರತ ಕೈಗೊಂಡ ಹಲವು ಕ್ರಮಗಳನ್ನು ಜಿ7 ಶೃಂಗದಲ್ಲಿ ಪ್ರಧಾನಿ ಮೋದಿ ಉಲ್ಲೇಖೀಸಿದ್ದಾರೆ. ಜಿ7 ಶೃಂಗದ ಪರಿಸರದ ಮೇಲಿನ ಸಮ್ಮೇಳನದಲ್ಲಿ ಮಾತನಾಡಿದ ಅವರು, ಒಮ್ಮೆಗೆ ಬಳಸಿ ಬಿಸಾಡುವ ಪ್ಲಾಸ್ಟಿಕ್‌ ನಿರ್ಮೂಲನೆ, ಜಲ ಸಂರಕ್ಷಣೆ, ಸೌರಶಕ್ತಿಯ ಬಳಕೆ ಮತ್ತು ಪಶುಪಕ್ಷಿಗಳ ರಕ್ಷಣೆ ಕುರಿತ ಭಾರತ ಕೈಗೊಂಡ ಕ್ರಮಗಳನ್ನು ವಿವರಿಸಿದರು.

Advertisement

ಫ್ರಾನ್ಸ್‌ನ ಬಿಯಾರೆಜ್‌ನಲ್ಲಿ ನಡೆದ ಜಿ7 ಶೃಂಗಕ್ಕೆ ಫ್ರಾನ್ಸ್‌ ಅಧ್ಯಕ್ಷ ಇಮಾನ್ಯುವೆಲ್ ಮ್ಯಾಕ್ರನ್‌ರವರ ವಿಶೇಷ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ ತೆರಳಿದ್ದು, ಅಲ್ಲಿ ಜೈವಿಕ ವೈವಿಧ್ಯ, ಸಮುದ್ರ, ಪರಿಸರ ಕುರಿತು ಮಾತನಾಡಿದರು. ಕಳೆದ ವಾರ ಪ್ಯಾರಿಸ್‌ನಲ್ಲಿ ಯುನೆಸ್ಕೋ ಕೇಂದ್ರ ಕಚೇರಿಯಲ್ಲಿ ಭಾರತೀಯ ಸಮುದಾಯವನ್ನುದ್ದೇಶಿಸಿ ಮಾತನಾಡಿದ್ದಾಗ 2030ಕ್ಕೆ ನಿಗದಿಸಲಾಗಿರುವ ಬಹುತೇಕ ಹವಾಮಾನ ವೈಪರೀತ್ಯ ಗುರಿಗಳನ್ನು ಮುಂದಿನ ಒಂದೂವರೆ ವರ್ಷದಲ್ಲಿ ಪೂರೈಸುವುದಾಗಿ ಹೇಳಿದ್ದರು. ಅಲ್ಲದೆ, ಒಮ್ಮೆಗೆ ಬಳಸಿ ಬಿಸಾಡುವ ಪ್ಲಾಸ್ಟಿಕ್‌ ನಿಯಂತ್ರಣಕ್ಕೆ ಪಣತೊಟ್ಟಿದ್ದರು. ಈ ಎಲ್ಲ ವಿಚಾರಗಳನ್ನೂ ಮೋದಿ ಜಿ7 ಶೃಂಗದಲ್ಲಿ ಪುನರುಚ್ಚರಿಸಿದ್ದು, ಹವಾಮಾನ ವೈಪರೀತ್ಯ ಕುರಿತ ದೇಶದ ನಿಲುವಿನಲ್ಲಿ ಬದ್ಧತೆ ಪ್ರದರ್ಶಿಸಿದರು.

ಈ ಮಧ್ಯೆ ಇದೇ ಸಂವಾದದಲ್ಲಿ ಅಮೆಜಾನ್‌ ಕಾಡ್ಗಿಚ್ಚು ಹಾಗೂ ಇಂಗಾಲ ಹೊರಸೂಸುವಿಕೆ ತಗ್ಗಿಸುವ ಕುರಿತ ಚರ್ಚೆ ಪ್ರಮುಖವಾಗಿ ನಡೆದಿದೆ. ಆದರೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಇದರಲ್ಲಿ ಭಾಗವಹಿಸಲಿಲ್ಲ. ಟ್ರಂಪ್‌ ಬದಲಿಗೆ ಅವರ ಪ್ರತಿನಿಧಿ ಭಾಗವಹಿಸಿದ್ದಾರೆ ಎಂದು ಫ್ರಾನ್ಸ್‌ ಅಧ್ಯಕ್ಷ ಮ್ಯಾಕ್ರನ್‌ ಹೇಳಿದರು.

ಡಿಜಿಟಲ್ ರೂಪಾಂತರ: ಇದೇ ವೇಳೆ ಡಿಜಿಟಲ್ ರೂಪಾಂತರದ ಸಂವಾದದಲ್ಲೂ ಮಾತನಾಡಿದ ಮೋದಿ, ಸಾಮಾಜಿಕ ಅಸಮಾನತೆಯ ವಿರುದ್ಧ ಹೋರಾಡಲು ಡಿಜಿಟಲ್ ತಂತ್ರಜ್ಞಾನವನ್ನು ಭಾರತ ಬಳಸಿಕೊಳ್ಳುತ್ತಿರುವ ಬಗ್ಗೆ ವಿವರಿಸಿದರು. ಸೆನೆಗಲ್, ಆಸ್ಟ್ರೇಲಿಯಾ ಸೇರಿದಂತೆ ಹಲವು ದೇಶಗಳ ಮುಖಂಡರ ಜೊತೆಗೂ ಪ್ರಧಾನಿ ಮಾತುಕತೆ ನಡೆಸಿದ್ದು, ಉಭಯ ದೇಶಗಳ ವ್ಯಾಪಾರ ವಹಿವಾಟು ಹಾಗೂ ಸಂಬಂಧ ಸುಧಾರಣೆ ಕುರಿತು ಚರ್ಚಿಸಿದ್ದಾರೆ.

ಕ್ರಿಕೆಟ್‌ನಲ್ಲಿ ಗೆದ್ದ ಸುದ್ದಿಯನ್ನು ಇಂಗ್ಲೆಂಡ್‌ ಪ್ರಧಾನಿಗೆ ತಿಳಿಸಿದ ಮೋದಿ

ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್‌ ಕ್ರಿಕೆಟ್ ಪಂದ್ಯದ ಮಧ್ಯೆಯೇ ಬಿಯಾರಿಜ್‌ನಲ್ಲಿ ಇಂಗ್ಲೆಂಡ್‌ ಪ್ರಧಾನಿ ಬೋರಿಸ್‌ ಜಾನ್ಸನ್‌ ಮತ್ತು ಪ್ರಧಾನಿ ನರೇಂದ್ರ ಮೋದಿ ಮಾತುಕತೆ ನಡೆಸುತ್ತಿದ್ದರು. ಈ ವೇಳೆ ಇಂಗ್ಲೆಂಡ್‌ ಅಚ್ಚರಿಯ ಗೆಲುವು ಸಾಧಿಸುತ್ತಿದ್ದಂತೆಯೇ ಈ ವಿಚಾರವನ್ನು ಜಾನ್ಸನ್‌ಗೆ ಮೋದಿ ತಿಳಿಸಿದ್ದಾರೆ. ತಕ್ಷಣ ಅಲ್ಲೇ ಐಪ್ಯಾಡ್‌ ತರಿಸಿಕೊಂಡು ಪಂದ್ಯದ ಹೈಲೈಟ್ ಅನ್ನು ಬೋರಿಸ್‌ ವೀಕ್ಷಿಸಿದ ಸನ್ನಿವೇಶ ನಡೆದಿದೆ. ಇದೇ ವೇಳೆ, ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್‌ ಜೊತೆಗೂ ಬೋರಿಸ್‌ ಮಾತುಕತೆ ನಡೆಸಿ, ಫೋಟೋಗೆ ಪೋಸು ನೀಡುತ್ತಿರುವಾಗ ಇನ್ನೂ ಎರಡು ಪಂದ್ಯವಿದೆ ಎಂದು ಬೋರಿಸ್‌ಗೆ ಮಾರಿಸನ್‌ ಲಘುವಾಗಿ ಹೇಳಿದರು.

ಅಮೆರಿಕದಿಂದ ಆಮದು ಹೆಚ್ಚಳಕ್ಕೆ ಭಾರತ ಇಂಗಿತ

ತೈಲ ಸೇರಿದಂತೆ ಇನ್ನೂ ಅನೇಕ ಸರಕುಗಳನ್ನು ಭಾರತವು ಅಮೆರಿಕದಿಂದ ಆಮದು ಮಾಡಿಕೊಳ್ಳಲು ಬಯಸುತ್ತದೆ ಎಂದು ಅಮೆರಿಕ ಅಧ್ಯಕ್ಷ ಟ್ರಂಪ್‌ಗೆ ಪ್ರಧಾನಿ ಮೋದಿ ತಿಳಿಸಿದ್ದಾರೆ. ದ್ವಿಪಕ್ಷೀಯ ವ್ಯಾಪಾರಕ್ಕೆ ಸಂಬಂಧಿಸಿದ ಭಿನ್ನಾಭಿಪ್ರಾಯಗಳಿಗೆ ತೆರೆ ಎಳೆಯುವ ನಿಟ್ಟಿನಲ್ಲಿ ಈ ಮಾತುಕತೆ ಮಹತ್ವ ಪಡೆದಿದೆ. 4 ಶತಕೋಟಿ ಡಾಲರ್‌ ಮೊತ್ತದ ಆಮದು ಕುರಿತು ಮಾತುಕತೆ ನಡೆಯುತ್ತಿದ್ದು, ಎರಡೂ ದೇಶಗಳ ವಾಣಿಜ್ಯ ಸಚಿವರು ಸದ್ಯದಲ್ಲೇ ಮಾತುಕತೆ ನಡೆಸಿ, ವ್ಯಾಪಾರ ಕುರಿತು ಚರ್ಚಿಸಲಿದ್ದಾರೆ ಎಂದು ವಿದೇಶಾಂಗ ಕಾರ್ಯದರ್ಶಿ ವಿಜಯ ಗೋಖಲೆ ಹೇಳಿದ್ದಾರೆ.
Advertisement

Udayavani is now on Telegram. Click here to join our channel and stay updated with the latest news.

Next