Advertisement

ಐದಿಂಚಿನ ಜಾಗದಲ್ಲಿ ಭಾರತ-ಚೀನ ಯುದ್ಧ!

08:00 AM Aug 24, 2017 | Team Udayavani |

ಹೊಸದಿಲ್ಲಿ: ಡೋಕ್ಲಾಂ ವಿಚಾರದಲ್ಲಿ ಭಾರತ- ಚೀನ ಸೇನೆ ಎದುರು ಬದುರಾಗಿ ನಿಂತ ಬೆನ್ನಲ್ಲೇ ಎರಡೂ ದೇಶಗಳ ಮಧ್ಯೆ “ಯುದ್ಧ’ ಜೋರಾಗಿ ಆರಂಭವಾಗಿದೆ. ಅದೂ ಐದಿಂಚಿನ ಜಾಗದಲ್ಲಿ! ಹೌದು, ಇದು ಸೇನೆಗಳ ಮಧ್ಯೆ ನಡೆಯುತ್ತಿರುವ ಯುದ್ಧ ಅಲ್ಲ. ಬದಲಿಗೆ, ಮೊಬೈಲ್‌ ಫೋನ್‌ಗಳಲ್ಲಿ. 

Advertisement

ಸ್ಮಾರ್ಟ್‌ಫೋನ್‌ಗಳು ಇದೀಗ ಎರಡೂ ದೇಶದ ಯುದ್ಧದ ಜಾಗವಾಗಿ ಪರಿವರ್ತಿತವಾಗಿದೆ. ಬಹುತೇಕ ಭಾರತೀಯರು ಚೀನ ಕಂಪೆನಿಗಳ ಸ್ಮಾರ್ಟ್‌ಫೋನ್‌ಗಳನ್ನೇ ಬಳಸುತ್ತಿದ್ದು, ಇದರಲ್ಲಿ ಹರಿದಾಡುವ ಮಾಹಿತಿಗಳನ್ನು ಚೀನಕ್ಕೆ ಕಳಿಸಲಾಗುತ್ತದೆ ಎಂದು ಟೊರೆಂಟೋ ವಿಶ್ವವಿದ್ಯಾ
ಲಯದ ಸಂಶೋಧನಾ ವರದಿಯೊಂದು ಹೇಳಿದೆ. ಇದು ವ್ಯೂಹಾತ್ಮಕ ದೃಷ್ಟಿಯಿಂದಲೂ ಚೀನಕ್ಕೆ ಲಾಭವಾಗಿದೆ ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಎಚ್ಚೆತ್ತುಕೊಂಡಿದ್ದು, ಸ್ಮಾರ್ಟ್‌ಫೋನ್‌ಗಳಲ್ಲಿ ಹೆಚ್ಚಿನ ಭದ್ರತಾ ಅಂಶಗಳನ್ನು ಹೊಂದುವಂತೆ ಮತ್ತು ಈ ಫೀಚರ್‌ಗಳ ಬಗ್ಗೆ ಖಾತರಿ ಪಡಿಸುವಂತೆ ಕಂಪೆನಿಗಳಿಗೆ ನೋಟಿಸ್‌ ನೀಡಿದೆ.

ಒಟ್ಟು 21 ಸ್ಮಾರ್ಟ್‌ಫೋನ್‌ ಕಂಪೆನಿಗಳಿಗೆ ಈ ನಿರ್ದೇಶನ ನೀಡಲಾಗಿದ್ದು, ಇವುಗಳಲ್ಲಿ ಹೆಚ್ಚಿನವು ಚೀನದ ಮೊಬೈಲ್‌ ಕಂಪೆನಿಗಳಾಗಿವೆ. ಒಂದು ವೇಳೆ ಫೋನ್‌ಗಳಿಂದ ಮಾಹಿತಿ ಸೋರಿಕೆ, ಕಳವು ಆದರೆ, ಅಂತಹ ಕಂಪೆನಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದೂ ಹೇಳಲಾಗಿದೆ. ಇದರೊಂದಿಗೆ ಭಾರತದಲ್ಲಿ ಸರ್ವರ್‌ಗಳನ್ನು ಸ್ಥಾಪಿಸುವಂತೆ ಚೀನ ಮೊಬೈಲ್‌ ಕಂಪೆನಿಗಳಿಗೆ ಸೂಚಿಸಿದೆ. ಚೀನ ಕಂಪೆನಿ ಮೊಬೈಲ್‌ಗ‌ಳ ಸರ್ವರ್‌ಗಳು ಚೀನದಲ್ಲೇ ಇರುವ ಕಾರಣ ಭದ್ರತೆ ಉಲ್ಲಂಘನೆಯ ತೀವ್ರ ಸಂಶಯವಿರುವುದರಿಂದ ಹೀಗೆ ಹೇಳಲಾಗಿದೆ.

ಕೇಂದ್ರದ ಹದ್ದಿನ ಕಣ್ಣು
ಮಾಹಿತಿಗಳು ಚೀನದ ಪಾಲಾಗುವುದನ್ನು ತಪ್ಪಿಸಲು ಕೇಂದ್ರ ಈಗಾಗಲೇ ಪ್ರತಿಬಂಧಕ ಕ್ರಮಗಳನ್ನು ಕೈಗೊಂಡಿದೆ. ಪೂರಕವಾಗಿ ಆಲಿಬಾಬಾ ಕಂಪೆನಿ ಸ್ವಾಮ್ಯದ ಯುಸಿ ಬ್ರೌಸರ್‌ ಮೇಲೆ ಕಣ್ಣಿಟ್ಟಿದೆ. ಅದರ ಪರಿಶೀಲನೆಯನ್ನೂ ನಡೆಸಿದೆ. ತಪ್ಪಿತಸ್ಥ ಎಂದು ಕಂಡಲ್ಲಿ ಅದನ್ನು ಸರಕಾರ ನಿಷೇಧಿಸುವ ಸಾಧ್ಯತೆಯೂ ಇದೆ.

Advertisement

ಶೇ.54ರಷ್ಟು ಚೀನ ಫೋನ್‌ ಮಾರಾಟ
ಭಾರತದಲ್ಲಿ ಮಾರಾಟವಾಗುವ ಶೇ.54ರಷ್ಟು ಫೋನ್‌ಗಳು ಚೀನದ ಕಂಪೆನಿಗಳದ್ದಾಗಿವೆ. ಇವುಗಳಲ್ಲಿ ಕ್ಸಿಯೋಮಿ, ಲೆನೊವೊ, ಒಪ್ಪೊ, ವಿವೋಗಳದ್ದೇ ಸಿಂಹಪಾಲು. ಬಳಕೆದಾರರು ಇವುಗಳನ್ನು ಬಳಸುತ್ತಿರುವಂತೆಯೇ, ಅತಿ ಹೆಚ್ಚು ಪ್ರಮಾಣದ ಮಾಹಿತಿ, ದತ್ತಾಂಶಗಳು ಶತ್ರು ದೇಶದ ಪಾಲಾಗುವ ಭೀತಿ ಕಾಣಿಸಿದೆ. ಜೊತೆಗೆ ಚೀನ ಟೆಲಿಕಾಂ ಕಂಪೆನಿಗಳು ಪಾರಮ್ಯ ಹೊಂದಿರುವುದರಿಂದ ಸೈಬರ್‌ ದಾಳಿಯ ತೀವ್ರ ಅಪಾಯವನ್ನೂ ಕೇಂದ್ರ ಸರಕಾರ ಮನಗಂಡಿದೆ. 

Advertisement

Udayavani is now on Telegram. Click here to join our channel and stay updated with the latest news.

Next