Advertisement
ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ನಮ್ಮ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ ಎಂಬ ಅಂಶ ಬಹಿರಂಗವಾಗಿ ಮೆಚ್ಚುಗೆ ಗಳಿಸಿದ್ದ ವೇಳೆಯಲ್ಲೇ ಜಮ್ಮು ಮತ್ತು ಕಾಶ್ಮೀರದ ಎಲ್‌ಒಸಿಯಲ್ಲಿ ಬಿಎಸ್‌ಎಫ್ ಯೋಧರೊಬ್ಬರನ್ನು ಪಾಕ್ ಸೇನೆ ಕತ್ತು ಸೀಳಿ ಭೀಕರವಾಗಿ ಹತ್ಯೆ ಮಾಡಿತು! ಈಗ ಪಾಕ್ ಬೆಂಬಲಿತ ಉಗ್ರರು ಕಾಶ್ಮೀರಿ ಪೊಲೀಸರನ್ನು ಅಪಹರಿಸಿ ಹತ್ಯೆಗೈದಿದ್ದಾರೆ. ಪಾಕಿಸ್ತಾನಕ್ಕೆ ಹಿಂಸೆಯೇ ಆದ್ಯತೆ ಎಂದಾದರೆ ಜಮ್ಮು ಮತ್ತು ಕಾಶ್ಮೀರ ವಿಚಾರ, ಉಗ್ರವಾದ ಸೇರಿದಂತೆ ಎಲ್ಲಾ ವಿಚಾರಗಳ ಬಗ್ಗೆ ಕುಳಿತು ಮಾತಾಡೋಣ ಎಂಬ ಸಿಹಿ ಲೇಪನದ ಪತ್ರವನ್ನು ಬರೆಯ ಬೇಕಾದ ಅಗತ್ಯವೇನಿತ್ತು ಎಂಬ ಪ್ರಶ್ನೆ ಮೂಡುತ್ತದೆ.
ಇರಿಯುವ ಇರಾದೆಯುಳ್ಳ ರಾಷ್ಟ್ರವನ್ನು ನಂಬುವುದಾದರೂ ಹೇಗೆ? ರಾಜತಾಂತ್ರಿಕವಾಗಿ ಒಂದು ರಾಷ್ಟ್ರದ ಮುಖ್ಯಸ್ಥರು ಮತ್ತೂಂದು ರಾಷ್ಟ್ರದ ಮುಖ್ಯಸ್ಥರಿಗೆ “ಬನ್ನಿ, ಬಿಕ್ಕಟ್ಟು ಪರಿಹರಿಸಲು ಸಮಾಲೋಚನೆ ನಡೆಸೋಣ’ ಎಂದು ಪತ್ರ ಬರೆದು ಆಹ್ವಾನಿಸಿದಾಗ, ಪೂರಕ ಸ್ಪಂದನೆ ನೀಡದೇ ಇದ್ದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಿಂದನೆಗೆ ಗುರಿಯಾಗ ಬೇಕಾಗುತ್ತದೆ. ಇಂಥ ದೂರದೃಷ್ಟಿಯನ್ನಿರಿಸಿಕೊಂಡೇ ವಿದೇಶಾಂಗ ಇಲಾಖೆ “ಪಾಕಿಸ್ತಾನದ ಕೋರಿಕೆ ಮೇರೆಗೆ ನ್ಯೂಯಾರ್ಕ್‌ನಲ್ಲಿ ಕೇಂದ್ರ ವಿದೇಶಾಂಗ ಸಚಿವರು, ಅಲ್ಲಿನ ಸಚಿವರನ್ನು ಭೇಟಿಯಾಗುತ್ತಿದ್ದಾರೆ. ಇದು ದ್ವಿಪಕ್ಷೀಯ ಮಾತುಕತೆಗೆ ವೇದಿಕೆ ಅಲ್ಲ’ ಎಂದು ಸ್ಪಷ್ಟವಾಗಿ ಹೇಳಿತ್ತು. ಆದರೆ ಈಗ ಈ ಭೇಟಿಯನ್ನು ರದ್ದುಗೊಳಿಸಿ ಭಾರತ ಸರಿಯಾದ ಹೆಜ್ಜೆಯಿಟ್ಟಿದೆ. ಇನ್ನು ಮೂವರು ಪೊಲೀಸರ ಹತ್ಯೆ ಸಹಜವಾಗಿಯೇ ಕಣಿವೆ ರಾಜ್ಯದ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಯಲ್ಲಿ ಸಂಚಲನ ಸೃಷ್ಟಿಸಿದೆ. ಹಲವು ಮಾಧ್ಯಮ ವರದಿಗಳ ಪ್ರಕಾರ ಕೆಲವರು ಹುದ್ದೆ ತ್ಯಾಗ ಮಾಡುವ ಘೋಷಣೆ ಮಾಡಿದ್ದಾರೆ. ಇದು ಹೌದೋ ಅಲ್ಲವೋ ಬೇರೆ ವಿಚಾರ. ಜನರ ರಕ್ಷಣೆ ಮಾಡುವ ಪೊಲೀಸರ ನೈತಿಕ ಸ್ಥೈರ್ಯ ಕುಗ್ಗದಂತೆ ಮಾಡುವುದು ಜಮ್ಮು ಮತ್ತು ಕಾಶ್ಮೀರ ಮತ್ತು ಕೇಂದ್ರ ಸರ್ಕಾರದ ಮೊದಲ ಆದ್ಯತೆಯಾಗಬೇಕು.
Related Articles
Advertisement