Advertisement
ಜಗತ್ತಿನ ಐದನೇ ಅತೀ ದೊಡ್ಡ ಆರ್ಥಿಕತೆಯನ್ನು ಹೊಂದಿರುವ ಭಾರತ ಈಗ ಇಡೀ ವಿಶ್ವದ ಗೆಳೆಯ. ಭೌಗೋಳಿಕವಾಗಿ ಮಾತ್ರವಲ್ಲದೆ ರಾಜತಾಂತ್ರಿಕವಾಗಿಯೂ ಭಾರತ ಬಹುಮುಖ್ಯ ರಾಷ್ಟ್ರವಾಗಿ ಹೊರಹೊಮ್ಮಿದೆ. ಅಲ್ಲದೇ ಇಡೀ ವಿಶ್ವದ ಮೇಲೆ ತನ್ನ ಹಿಡಿತವನ್ನು ಸಾಧಿಸಬೇಕೆಂದು ಪ್ರಯತ್ನಿಸುತ್ತಿರುವ ಚೀನಕ್ಕೆ ಪರ್ಯಾಯವಾಗಿ ಭಾರತವನ್ನು ವಿವಿಧ ದೇಶಗಳು ಪರಿಗಣಿಸಲಾರಂಭಿಸಿವೆ.
ಈಗಾಗಲೇ ಕೆನಡಾ, ಅಮೆರಿಕ ಹಾಗೂ ಬ್ರಿಟನ್ ಅಧ್ಯಕ್ಷರೊಂದಿಗೆ ಈ ವಿಷಯವನ್ನು ಪ್ರಸ್ತಾವಿಸಿದೆ. ಆದರೆ ಅಮೆರಿಕ ಈ ವಿಷಯದಲ್ಲಿ ಅಡ್ಡಗೋಡೆಯ ಮೇಲೆ ದೀಪ ಇಟ್ಟಂತೆ ಮಾತನಾಡುತ್ತಿದೆ. ಅಮೆರಿಕ, ಭಾರತದೊಂದಿಗೆ ತನ್ನ ಬಾಂಧವ್ಯವನ್ನು ಹೆಚ್ಚಿಸಿಕೊಂಡಿದ್ದು, ಮೋದಿ – ಬೈಡನ್ ಸ್ನೇಹವು ಅಷ್ಟೇ ಗಾಢವಾಗಿದೆ. ಇನ್ನೊಂದೆಡೆ ಕೆನಡಾದ ಆರೋಪ ಒಟ್ಟಾವಾದ ಫೈವ್ ಐ ಗುಪ್ತಚರ ಮಾಹಿತಿಯ ಮೇಲೆ ನೀಡಿದ್ದು , ಈ ಫೈವ್ ಐ ನಲ್ಲಿ ಅಮೆರಿಕವೂ ಸೇರಿಕೊಂಡಿದೆ. ಅತ್ತ ಬ್ರಿಟನ್, ಕೆನಡಾದ ಸಮಸ್ಯೆಯನ್ನು ಸೂಕ್ಷ್ಮವಾಗಿ ಆಲಿಸಿದ್ದೇವೆ ಹಾಗೂ ಗಂಭೀರವಾಗಿ ಪರಿಗಣಿಸಿದ್ದೇವೆ ಎಂದು ಹೇಳಿದೆ. ಬ್ರಿಟನ್‌ಗೆ ಭಾರತ ಹಾಗೂ ಕೆನಡಾ ಎರಡೂ ಅತ್ಯಂತ ಪ್ರಮುಖ ರಾಷ್ಟ್ರಗಳಾಗಿವೆ.
Related Articles
ಕೆನಡಾದ ತನಿಖೆಯು ಪೂರ್ಣವಾಗುವವರೆಗೆ ಕಾದು, ಅನಂತರ ತಮ್ಮ ನಿಲುವನ್ನು ಸ್ಪಷ್ಟ ಪಡಿಸುವುದು ಸದ್ಯ ಪಾಶ್ಚಾತ್ಯ ರಾಷ್ಟ್ರಗಳ ಯೋಚನೆ. “ಅಕ್ಕಿಯ ಮೇಲು ಆಸೆ, ನೆಂಟರ ಮೇಲೂ ಪ್ರೀತಿ’ ಎಂಬ ಮಾತಿನಂತೆ ಭಾರತ ಹಾಗೂ ಕೆನಡಾ ಎರಡೂ ದೇಶಗಳೊಂದಿಗೆ ವೈರತ್ವವನ್ನು ಕಟ್ಟಿಕೊಳ್ಳಲು ಪಾಶ್ಚಾತ್ಯ ರಾಷ್ಟ್ರಗಳು ಸಿದ್ಧವಿಲ್ಲ. ಎರಡು ದೇಶಗಳ ನಡುವಣ ಈ ವಿವಾದವು ಸುಖಾಂತ್ಯವನ್ನು ಕಂಡು ಅಂತಾರಾಷ್ಟ್ರೀಯ ಸಂಬಂಧಗಳು ಯಥಾ ಸ್ಥಿತಿಯಲ್ಲಿ ಮುಂದುವರಿಯಲಿ ಎಂಬುದೇ ಈ ರಾಷ್ಟ್ರಗಳ ಆಶಯ.
Advertisement
ದ್ವಂದ್ವದಲ್ಲಿ ಸಿಲುಕಿದ ಪಾಶ್ಚಾತ್ಯ ನಾಯಕರುಖಲಿಸ್ಥಾನಿ ಉಗ್ರರ ವಿಷಯವಾಗಿ ಭಾರತ ಹಾಗೂ ಕೆನಡಾ ಸೃಷ್ಟಿಯಾಗಿರುವ ಬಿಕ್ಕಟ್ಟಿನ ವಿಚಾರದಲ್ಲಿ ಪಾಶ್ಚಾತ್ಯ ನಾಯಕರು ದ್ವಂದ್ವದಲ್ಲಿ ಸಿಲುಕಿದ್ದಾರೆ. ಇತ್ತ ಕೆನಡಾವನ್ನು ಕೈ ಬಿಡುವಂತಿಲ್ಲ ಅತ್ತ ಭಾರತವನ್ನೂ ದೂರ ಮಾಡುವಂತಿಲ್ಲ ಎಂಬ ಸಂದಿಗ್ಧತೆ ಈ ನಾಯಕರದ್ದಾಗಿದೆ. ಭಾರತದೊಂದಿಗೆ ಈ ಹಿಂದಿನಿಂದಲೂ ಉತ್ತಮ ಸಂಬಂಧವನ್ನು ಹೊಂದಿರುವ ಪಾಶ್ಚಾತ್ಯ ದೇಶಗಳು ಈಗ ಈ ವಿಷಯದಲ್ಲಿ ಸಂಕಷ್ಟದಲ್ಲಿ ಸಿಲುಕಿವೆ. ಕೆನಡಾದ ಪರ ವಕಾಲತ್ತು ಮಾಡಲು ಮುಂದಾದರೆ ಭಾರತದ ಆಕ್ರೋಶಕ್ಕೆ ಗುರಿಯಾಗುವ ಭೀತಿ ಈ ರಾಷ್ಟ್ರಗಳನ್ನು ಕಾಡುತ್ತಿದೆ. ಜಾಗತಿಕವಾಗಿ ದಕ್ಷಿಣದಲ್ಲಿ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ನಾಯಕನಾಗಿ ಹೊರಹೊಮ್ಮಲು ಭಾರತ ಪ್ರಯತ್ನಿಸುತ್ತಿದೆ. ಕೆಲವು ದೇಶಗಳು ಉಕ್ರೇನ್ ಮೇಲಿನ ರಷ್ಯಾ ದಾಳಿ ವಿಚಾರದಲ್ಲಿ ಅನುಸರಿಸಿದ ನಿಲುವನ್ನೇ ಈಗ ಪಾಶ್ಚಾತ್ಯ ದೇಶಗಳು ತಮ್ಮದಾಗಿಸಿಕೊಂಡಿವೆ. ಅಲ್ಲದೇ ಅಮೆರಿಕ ಹಾಗೂ ಯುರೋಪ್ ರಾಷ್ಟ್ರಗಳು ರಾಜತಾಂತ್ರಿಕ ನಡೆಗಳಿಂದ ಈ ದೇಶಗಳ ಮೇಲೆ ಛಾಪು ಮೂಡಿಸಲು ಪ್ರಯತ್ನಿಸುತ್ತಿವೆ. ಈ ಕಾರಣದಿಂದಾಗಿಯೇ ಭಾರತ-ಕೆನಡಾ ನಡುವಣ ಬಿಕ್ಕಟ್ಟು ಎರಡು ಕಾಮನವೆಲ್ತ್ ದೇಶಗಳ ನಡುವಿನ ಬಾಂಧವ್ಯಕ್ಕೆ ಸಂಚಕಾರ ತಂದೊಡ್ಡದಿರಲಿ ಎಂಬ ಆಶಯ ಈ ರಾಷ್ಟ್ರಗಳದ್ದಾಗಿದೆ. ಈ ಮೂಲಕ ಎರಡೂ ದೇಶಗಳೊಂದಿಗಿನ ತಮ್ಮ ಸಂಬಂಧ ಯಥಾಸ್ಥಿತಿಯಲ್ಲಿ ಮುಂದುವರಿಯಲಿ ಎಂಬ ದೂರಾಲೋಚನೆಯೂ ಈ ದೇಶಗಳದ್ದಾಗಿದೆ. ವಿಧಾತ್ರಿ ಭಟ್, ಉಪ್ಪುಂದ