Advertisement

ಭಾರತ-ಬ್ರಿಟನ್‌ ದ್ವಿಪಕ್ಷೀಯ ಸಂಬಂಧ ವೃದ್ಧಿಗೆ ಶ್ರೀಕಾರ

12:18 AM Apr 22, 2022 | Team Udayavani |

ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌ ಅವರ ಎರಡು ದಿನಗಳ ಭಾರತ ಭೇಟಿ ಗುರುವಾರ ಆರಂಭಗೊಂಡಿದೆ. ಲಂಡನ್‌ನಿಂದ ಭಾರತಕ್ಕೆ ಪ್ರಯಾಣಿಸುವ ವೇಳೆ ವಿಮಾನದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಜಾನ್ಸನ್‌, ಉಭಯ ದೇಶಗಳ ನಡುವಣ ಸಂಬಂಧ ವೃದ್ಧಿಯ ನಿಟ್ಟಿನಲ್ಲಿ ಕೈಗೊಳ್ಳಬಹುದಾದ ಉಪಕ್ರಮಗಳ ಬಗೆಗೆ ಬೆಳಕು ಚೆಲ್ಲುವ ಮೂಲಕ ಭಾರೀ ನಿರೀಕ್ಷೆ ಮೂಡಿಸಿದ್ದಾರೆ. ಪ್ರಸ್ತಾವಿತ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಮತ್ತಷ್ಟು ಉತ್ತೇಜನ ನೀಡುವ ನಿಟ್ಟಿನಲ್ಲಿ ಪರಸ್ಪರ ಸಹಯೋಗದೊಂದಿಗೆ ಕಾರ್ಯಾಚರಿಸಲಾಗುವುದು ಎನ್ನುವ ಮೂಲಕ ಆದಷ್ಟು ಶೀಘ್ರದಲ್ಲೇ ಈ ಒಪ್ಪಂದಕ್ಕೆ ಅಂತಿಮ ಮುದ್ರೆ ಬೀಳುವ ಸುಳಿವು ನೀಡಿದ್ದಾರೆ. ಇಂಡೋ- ಪೆಸಿಫಿಕ್‌ ವಲಯದಲ್ಲಿ ಭಾರತ ಮತ್ತು ಬ್ರಿಟನ್‌ ನಡುವಣ ಸಹಕಾರ ವೃದ್ಧಿ, ರಕ್ಷಣ ಕ್ಷೇತ್ರದಲ್ಲಿ ಭಾರತಕ್ಕೆ ಅಗತ್ಯ ನೆರವು ಮತ್ತು ಸಹಕಾರ, ವಿವಿಧ ಒಪ್ಪಂದಗಳು ಏರ್ಪಡಲಿವೆ ಎಂದು ನಿರೀಕ್ಷಿಸಲಾಗಿದೆ.

Advertisement

ಕೊರೊನಾ ಹಿನ್ನೆಲೆಯಲ್ಲಿ ಎರಡು ಬಾರಿ ಮುಂದೂಡಲ್ಪಟ್ಟಿದ್ದ ಬ್ರಿಟನ್‌ ಪ್ರಧಾನಿಯ ಈ ಬಲು ನಿರೀಕ್ಷಿತ ಭಾರತ ಭೇಟಿಯ ಸಂದರ್ಭದಲ್ಲಿ ಉಕ್ರೇನ್‌ ವಿರುದ್ಧ ರಷ್ಯಾ ಸಮರ ಸಾರಿರುವುದರಿಂದ ಜಾಗತಿಕ ಮಟ್ಟದಲ್ಲಿ ಸೃಷ್ಟಿಯಾಗಿರುವ ಸಂದಿಗ್ಧತೆ, ರಷ್ಯಾದ ವಿರುದ್ಧ ಹೇರಲಾಗಿ  ರುವ ಆರ್ಥಿಕ ಮತ್ತು ವ್ಯಾಪಾರ-ವಹಿವಾಟಿನ ಮೇಲಣ ನಿರ್ಬಂಧ  ಗಳಿಂದಾಗಿ ಒಟ್ಟಾರೆಯಾಗಿ ವಿಶ್ವದ ಮೇಲಾಗಿರುವ ಪರಿಣಾಮಗಳು ಮತ್ತು ಪರಿಹಾರೋಪಾಯಗಳ ಬಗೆಗೆ ಪ್ರಧಾನಿ ಮೋದಿ ಅವರೊಂದಿಗೆ ಅವರು ಚರ್ಚಿಸುವುದು ನಿಶ್ಚಿತ.

ಇಂಡೋ- ಪೆಸಿಫಿಕ್‌ ವಲಯದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲು ಉಭಯ ರಾಷ್ಟ್ರಗಳು ಒಲವು ವ್ಯಕ್ತಪಡಿಸಿವೆ. ಈ ನಡುವೆ ರಕ್ಷಣ ವಲಯದಲ್ಲಿ ಭಾರತ ಇಂದಿಗೂ ರಷ್ಯಾವನ್ನು ಅವಲಂಬಿಸಿರುವ ಹಿನ್ನೆಲೆಯಲ್ಲಿ ರಕ್ಷಣ ಸಾಮಗ್ರಿಗಳ ಉತ್ಪಾದನೆಯಲ್ಲಿ ಸ್ವಾವಲಂಬನೆ ಹೊಂದುವ ಭಾರತದ ಕನಸನ್ನು ನನಸಾಗಿಸಲು ಬ್ರಿಟನ್‌ ಅಗತ್ಯ ಸಹಕಾರ ನೀಡುವ ಜತೆಯಲ್ಲಿ ಜಂಟಿ ಸಹಭಾಗಿತ್ವಕ್ಕೆ ಸಮ್ಮತಿ ವ್ಯಕ್ತಪಡಿಸುವ ಸಾಧ್ಯತೆ ಇದೆ.

ಭಾರತದ ಜತೆ ಶತಕೋಟಿ ಪೌಂಡ್‌ಗಳಿಗೂ ಅಧಿಕ ಮೊತ್ತದ ಹೂಡಿಕೆ ಮತ್ತು ಆಮದು ಒಪ್ಪಂದವನ್ನು ಘೋಷಿಸಿರುವ ಬೋರಿಸ್‌ ಜಾನ್ಸನ್‌, ಸಾಫ್ಟ್ವೇರ್‌ ಎಂಜಿನಿಯರಿಂಗ್‌, ಆರೋಗ್ಯ ಸಹಿತ ವಿವಿಧ ಕ್ಷೇತ್ರಗಳಲ್ಲಿ ಈ ಒಪ್ಪಂದ ಅನ್ವಯವಾಗಲಿದೆ ಎಂದಿದ್ದಾರೆ. ಅಲ್ಲದೆ ತಮ್ಮ ಪ್ರವಾಸದ ವೇಳೆ ಬ್ರಿಟನ್‌ ಪ್ರಧಾನಿ ಭಾರತೀಯ ವಿದ್ಯಾರ್ಥಿಗಳು ಮತ್ತು ವೃತ್ತಿಪರರಿಗೆ ವೀಸಾ ನಿಯಮಾವಳಿಗಳಲ್ಲಿ ಸಡಿಲಿಕೆ, ಶುಲ್ಕ ಇಳಿಕೆ ಯಂತಹ ಸುಧಾರಣ ಕ್ರಮಗಳನ್ನು ಘೋಷಿಸುವ ಸಾಧ್ಯತೆ ಇದೆ.

ಅಹ್ಮದಾಬಾದ್‌ನಲ್ಲಿ ಅದಾನಿ ಸಮೂಹದ ಮುಖ್ಯಸ್ಥ ಗೌತಮ್‌ ಅದಾನಿ ಅವರನ್ನು ಭೇಟಿಯಾಗಿರುವ ಜಾನ್ಸನ್‌, ಬ್ರಿಟನ್‌ನಲ್ಲಿ ಹೂಡಿಕೆ ಮಾಡುವಂತೆ ಆಹ್ವಾನಿಸಿದರು. ನವೀಕರಿಸಬಹುದಾದ ಇಂಧನ, ರಕ್ಷಣೆ, ಏರೋಸ್ಪೇಸ್‌ ಮತ್ತಿತರ ಕ್ಷೇತ್ರದಲ್ಲಿ ಬ್ರಿಟನ್‌ ಕಂಪೆನಿಗಳೊಂದಿಗೆ ಸಹಭಾಗಿತ್ವದಿಂದ ಕಾರ್ಯನಿರ್ವಹಿಸುವಂತೆ ಬ್ರಿಟನ್‌ ಪ್ರಧಾನಿ ನೀಡಿದ ಸಲಹೆಗೆ ಅದಾನಿ ಸಮ್ಮತಿಸಿದ್ದಾರೆ.

Advertisement

ಒಟ್ಟಿನಲ್ಲಿ, ಭಾರತದೊಂದಿಗಿನ ವ್ಯಾಪಾರ-ವಹಿವಾಟು ವೃದ್ಧಿಯ ಜತೆಜತೆಯಲ್ಲಿ ಬ್ರಿಟನ್‌ ವಿಶ್ವ ಮಟ್ಟದಲ್ಲಿ ಭಾರತದೊಂದಿಗೆ ಪರಸ್ಪರ ಸಹಕಾರ, ಸಹ ಭಾಗಿತ್ವಕ್ಕೆ ಹೆಚ್ಚಿನ ಉತ್ತೇಜನ ನೀಡಲು ಮುಂದಾಗಿರುವುದು ಆಶಾದಾಯಕ ಬೆಳವಣಿಗೆಯೇ ಸರಿ.

Advertisement

Udayavani is now on Telegram. Click here to join our channel and stay updated with the latest news.

Next