ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 1 ಲಕ್ಷಕ್ಕಿಂತ ಹೆಚ್ಚು ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಇದೇ ಮೊದಲ ಬಾರಿಗೆ ಇಷ್ಟೊಂದು ಪ್ರಮಾಣದಲ್ಲಿ ಜನರಿಗೆ ಸೋಂಕು ತಗುಲಿದೆ ಎಂದು ವರದಿ ತಿಳಿಸಿದೆ.
ಮಹಾರಾಷ್ಟ್ರ ರಾಜ್ಯವೊಂದರಲ್ಲೇ 57 ಸಾವಿರ ಪ್ರಕರಣಗಳು ಪತ್ತೆಯಾಗಿದ್ದು, ಇಲ್ಲಿ ವಾರಾಂತ್ಯದ ಲಾಕ್ ಡೌನ್ ಜಾರಿಗೊಳಿಸಲಾಗಿದೆ. ಇತ್ತೀಚಿನ ವರದಿಗಳ ಪ್ರಕಾರ 1.01 ಲಕ್ಷ ಪ್ರಕರಣಗಳು ಭಾನುವಾರ (4-4-2021) ಒಂದೇ ದಿನ ಕಂಡುಬಂದಿದ್ದು, ಆ ಮೂಲಕ ಸಕ್ರಿಯ ಪ್ರಕರಣಗಳ ಸಂಖ್ಯೆ 7 ಲಕ್ಷಕ್ಕೆ ಏರಿಕೆಯಾಗಿದೆ.
ಇದಕ್ಕೂ ಮೊದಲು ಸೆಪ್ಟೆಂಬರ್ 16, 2020ರಲ್ಲಿ ಅತೀ ಹೆಚ್ಚು ಪ್ರಕರಣಗಳು ಪತ್ತೆಯಾಗಿದ್ದವು. ಅಂದು ಒಂದೇ ದಿನ 97,894 ಜನರಿಗೆ ಸೋಂಕು ತಗುಲಿದ್ದು ಈವರೆಗಿನ ದಾಖಲೆಯಾಗಿತ್ತು. ಕೋವಿಡ್ ಎರಡನೇ ಅಲೆ ಹಲವು ರಾಜ್ಯಗಳಲ್ಲಿ ತನ್ನ ಕಬಂಧಬಾಹುವನ್ನು ಚಾಚಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆಯೂ ಹೆಚ್ಚಳವಾಗುತ್ತಿದೆ.
ಮಹಾರಾಷ್ಟ್ರದಲ್ಲಿ 57 ಸಾವಿರ ಹೊಸ ಪ್ರಕರಣಗಳು, ಪುಣೆ ಮತ್ತು ಮುಂಬೈ ಯಲ್ಲಿ 12 ಸಾವಿರ ಹಾಗೂ 11 ಸಾವಿರ ಪ್ರಕರಣಗಳು ಒಂದೇ ದಿನ ಪತ್ತೆಯಾಗಿದೆ. ಚತ್ತೀಸ್ ಗಢ, ದೆಹಲಿ, ಉತ್ತರಪ್ರದೇಶ, ಕರ್ನಾಟಕದಲ್ಲೂ ಸೋಂಕಿತರ ಸಂಖ್ಯೆ ದ್ವಿಗುಣಗೊಳ್ಳುತ್ತಿದೆ.
ಇದುವರೆಗೂ ದೇಶದಲ್ಲಿ 1.25 ಕೋಟಿ ಜನರಿಗೆ ಸೋಂಕು ತಗುಲಿದ್ದು, 7 ಲಕ್ಷ ಸಕ್ರಿಯ ಪ್ರಕರಣಗಳಿವೆ. ಮಹಾರಾಷ್ಟ್ರವೊಂದರಲ್ಲೇ 4.3 ಲಕ್ಷ ಸಕ್ರಿಯ ಪ್ರಕರಣಗಳಿವೆ. ಭಾನುವಾರ ಸೋಂಕಿನ ಕಾರಣದಿಂದ 490 ಜನರು ಮೃತಪಟ್ಟಿದ್ದಾರೆ. ಇದರಲ್ಲಿ 235 ಜನರು ಮಹಾರಾಷ್ಟ್ರದವರು. ಉತ್ತರಪ್ರದೇಶದಲ್ಲಿ 31, ಪಂಜಾಬ್ ನಲ್ಲಿ 51 ಹಾಗೂ ಚತ್ತಿಸ್ ಗಢದಲ್ಲಿ 36 ಜನರು ಸಾವನ್ನಪ್ಪಿದ್ದಾರೆ.
ಏತನ್ಮಧ್ಯೆ ಪ್ರಧಾನಮಂತ್ರಿ ನರೇಂದ್ರ ಮೋದಿ, ಅಧಿಕಾರಿಗಳಿಗೆ ಕೋವಿಡ್ ತಡೆಗಟ್ಟಲು ಇರುವ ತುರ್ತು ಕಾರ್ಯತಂತ್ರ ರೂಪಿಸುವಂತೆ ಸೂಚನೆ ನೀಡಿದ್ದಾರೆ.