ಹೊಸದಿಲ್ಲಿ: ಲೋಕಸಭಾ ಚುನಾವಣೆಯಲ್ಲಿ ಇಂಡಿಯಾ ಬಣ ಗೆಲುವು ಸಾಧಿಸಿದರೆ ಬಣದಿಂದ ಪ್ರಧಾನಿ ಅಭ್ಯರ್ಥಿಯಾಗಿ ತಾವು ರಾಹುಲ್ ಗಾಂಧಿ ಅವರನ್ನು ಬೆಂಬಲಿಸುವುದಾಗಿ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಹೇಳಿದರು.
ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಚುನಾವಣಾ ಪ್ರವೇಶಕ್ಕೆ ಅವರು ಒತ್ತಾಯಿಸಿದ್ದಾರೆ ಎಂದು ಅವರು ಹೇಳಿದರು; ಸತತ ಐದು ಗೆಲುವಿನ ನಂತರ ಸೋನಿಯಾ ಗಾಂಧಿ ಅವರಿಂದ ತೆರವಾದ ರಾಯ್ ಬರೇಲಿಯ ಕುಟುಂಬದ ಭದ್ರಕೋಟೆಯಿಂದ ಸ್ಪರ್ಧೆಯ ಬಗ್ಗೆ ಚರ್ಚೆ ನಡೆದಿತ್ತು. ಆದರೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಆಯ್ಕೆಯಿಂದ ಹೊರಗುಳಿದರು. ಬದಲಿಗೆ ರಾಹುಲ್ ಗಾಂಧಿ ಅವರು ಸ್ಪರ್ಧೆ ನಡೆಸಿದ್ದಾರೆ.
ಎನ್ ಡಿಟಿವಿ ಜತೆ ಮಾತನಾಡಿದ ಖರ್ಗೆ, ಪ್ರಧಾನಿ ಅಭ್ಯರ್ಥಿಯಾಗಿ ರಾಹುಲ್ ಗಾಂಧಿ ಅವರು ನನ್ನ ಮೊದಲ ಆಯ್ಕೆ. ಅವರು ದೇಶದ ಉದ್ದಗಲಕ್ಕಿರುವ ಯುವ ಜನತೆಯನ್ನು ಪ್ರತಿನಿಧಿಸುತ್ತಾರೆ ಎಂದರು.
ರಾಹುಲ್ ಗಾಂಧಿ ಅವರು ಪ್ರಧಾನಿ ಅಭ್ಯರ್ಥಿಯ ಬಗ್ಗೆ ಹೇಳಿಕೊಂಡಿಲ್ಲ. “ನಾವು ಒಟ್ಟಾಗಿ ಹೋರಾಡುತ್ತೇವೆ ಎಂದು ಬಣ ನಿರ್ಧರಿಸಿದೆ. ಗೆದ್ದ ನಂತರ ಪ್ರಧಾನಿ ಯಾರು ಎಂದು ಜಂಟಿಯಾಗಿ ನಿರ್ಧರಿಸುತ್ತದೆ.” ಎಂದು ಕಳೆದ ತಿಂಗಳು ರಾಹುಲ್ ಗಾಂಧಿ ಹೇಳಿದ್ದರು.
ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಚುನಾವಣಾ ಸ್ಪರ್ಧೆಯ ಕುರಿತು ಮಾತನಾಡಿದ ಖರ್ಗೆ, “ನಾನು ಪ್ರಿಯಾಂಕಾ ಸ್ಪರ್ಧಿಸಬೇಕೆಂದು ಬಯಸಿದ್ದೆ, ಆದರೆ ರಾಹುಲ್ ಅವರು ದೇಶಾದ್ಯಂತ ಪ್ರಚಾರ ಮಾಡುತ್ತಿರುವ ಕಾರಣದಿಂದ ರಾಹುಲ್ ಅವರ ಪ್ರಚಾರಕ್ಕೆ ಯಾರಾದರೂ ಬೇಕಾಗಿತ್ತು” ಎಂದರು.
ವಿಪಕ್ಷಗಳ ಬಣ ಇಂಡಿಯಾ ಕೂಟವು ಜೂನ್ 1ರಂದು ಸಭೆ ಕರೆದಿದೆ. ಕೊನೆಯ ಹಂತದ ಮತದಾನದ ದಿನದಂದು ಮುಂದಿನ ನಡೆಯ ಬಗ್ಗೆ ಚರ್ಚೆ ನಡೆಸಲು ಸಭೆ ಕರೆಯಲಾಗಿದೆ.