ಹೊಸದಿಲ್ಲಿ: 2027ರ ಏಶ್ಯ ಕಪ್ ಫುಟ್ಬಾಲ್ ಪಂದ್ಯಾವಳಿಯ ಆತಿಥ್ಯ ವಹಿಸಲು ಭಾರತ ಸೇರಿದಂತೆ 5 ದೇಶಗಳು ಬಿಡ್ ಸಲ್ಲಿಸಿವೆ. ಏಶ್ಯನ್ ಫುಟ್ಬಾಲ್ ಫೆಡರೇಶನ್ (ಎಎಫ್ಸಿ) ಬುಧವಾರ ಈ ಮಾಹಿತಿ ನೀಡಿತು.
ಭಾರತವನ್ನು ಹೊರತುಪಡಿಸಿ ಬಿಡ್ ಸಲ್ಲಿಸಿದ ಉಳಿದ 4 ರಾಷ್ಟ್ರಗಳೆಂದರೆ ಇರಾನ್, ಕತಾರ್, ಸೌದಿ ಅರೇಬಿಯಾ ಮತ್ತು ಉಜ್ಬೆಕಿಸ್ಥಾನ್. ಈ ಆತಿಥ್ಯ ಯಾರ ಪಾಲಾಗಲಿದೆ ಎಂಬುದು ಮುಂದಿನ ವರ್ಷ ತಿಳಿದು ಬರಲಿದೆ ಎಂದು ಎಎಫ್ಸಿ ಅಧ್ಯಕ್ಷ ಶೇಖ್ ಸಲ್ಮಾನ್ ಬಿನ್ ಇಬ್ರಾಹಿಂ ಅಲ್ ಖಲೀಫಾ ಹೇಳಿದ್ದಾರೆ.
“ಏಶ್ಯನ್ ಫುಟ್ಬಾಲ್ ಪರಿವಾರದ ಪರವಾಗಿ ಈ ಕೂಟವನ್ನು ಸಂಘಟಿಸಲು ಮುಂದೆ ಬಂದ ಎಲ್ಲ ದೇಶಗಳಿಗೆ ಕೃತಜ್ಞತೆ ಸಲ್ಲಿಸುತ್ತಿದ್ದೇನೆ. ಎಲ್ಲರಿಗೂ ಬೆಸ್ಟ್ ಆಫ್ ಲಕ್’ ಎಂಬುದಾಗಿ ಅಲ್ ಖಲೀಫಾ ಶುಭ ಹಾರೈಸಿದರು.
ಏಶ್ಯನ್ ಫುಟ್ಬಾಲ್ ಚಾಂಪಿಯನ್‌ಶಿಪ್ 1956ರಿಂದ ಮೊದ ಲ್ಗೊಂಡಿತ್ತು. ಬಿಡ್ ಸಲ್ಲಿಸಿದ ಈ 5 ದೇಶಗಳ ಪೈಕಿ ಎರಡು ದೇಶಗಳು ತಲಾ ಎರಡು ಸಲ ಇದರ ಆತಿಥ್ಯ ವಹಿಸಿವೆ. ಹಾಲಿ ಚಾಂಪಿಯನ್ ಖ್ಯಾತಿಯ ಕತಾರ್ 1988 ಮತ್ತು 2011ರಲ್ಲಿ, ಇರಾನ್ 1968 ಮತ್ತು 1976ರಲ್ಲಿ ಈ ಕೂಟವನ್ನು ಯಶಸ್ವಿಯಾಗಿ ಸಂಘಟಿಸಿದ್ದವು. ಇರಾನ್ ಎರಡೂ ಸಲ ತವರಿನ ಕೂಟದಲ್ಲಿ ಚಾಂಪಿಯನ್ ಆಗಿ ಮೂಡಿಬಂದಿತ್ತು.
ಭಾರತಕ್ಕೆ ಲಭಿಸಿಲ್ಲ ಆತಿಥ್ಯ
3 ಬಾರಿಯ ಚಾಂಪಿಯನ್‌ಗಳಾದ ಭಾರತ ಮತ್ತು ಸೌದಿ ಅರೇಬಿಯಾ ಈವರೆಗೆ ಏಶ್ಯ ಕಪ್ ಆತಿಥ್ಯ ವಹಿಸಿಲ್ಲ. ಹಾಗೆಯೇ ಉಜ್ಬೆಕಿಸ್ಥಾನಕ್ಕೂ ಈವರೆಗೆ ಈ ಪಂದ್ಯಾವಳಿಯ ಆತಿಥ್ಯ ಲಭಿಸಿಲ್ಲ. ಆದರೆ ಭಾರತ 2022ರ ಎಎಫ್ಸಿ ವನಿತಾ ಏಶ್ಯ ಕಪ್ ಮತ್ತು ಉಜ್ಬೆಕಿಸ್ಥಾನ ಈ ವರ್ಷದ ಎಎಫ್ಸಿ ಅಂಡರ್-19 ಪಂದ್ಯಾವಳಿಯನ್ನು ನಡೆಸಿ ಕೊಡಲಿವೆ.