Advertisement

ಕೋವಿಡ್ ಆರನೇ ಹಾಟ್‌ಸ್ಪಾಟ್‌ ಭಾರತ ; ಶರವೇಗದಲ್ಲಿ ಹಬ್ಬುತ್ತಿದೆ ಸೋಂಕು

03:50 AM Jun 06, 2020 | Hari Prasad |

ಹೊಸದಿಲ್ಲಿ: ಭಾರತದಲ್ಲಿ ಲಾಕ್‌ಡೌನ್‌, ಸೀಲ್‌ಡೌನ್‌ ಸೇರಿದಂತೆ ಕೋವಿಡ್ ನಿಯಂತ್ರಣಕ್ಕೆ ಕಠಿನ ಕ್ರಮಗಳನ್ನು ಕೈಗೊಂಡ ಹೊರತಾಗಿಯೂ ಸೋಂಕಿತರ ಸಂಖ್ಯೆ ಮಾತ್ರ ದಾಖಲೆ ಪ್ರಮಾಣದಲ್ಲಿ ಏರುತ್ತಲೇ ಇದೆ.

Advertisement

ಈಗ ಭಾರತ ಇಟಲಿಯನ್ನೂ ಮೀರಿಸಿದ್ದು, ಜಗತ್ತಿನ ಟಾಪ್‌ 10 ಕೋವಿಡ್ ಹಾಟ್‌ಸ್ಪಾಟ್‌ ದೇಶಗಳ ಪೈಕಿ 6ನೇ ಸ್ಥಾನಕ್ಕೆ ತಲುಪಿದೆ.

ದೇಶದಲ್ಲಿ ಸೋಂಕಿತರ ಸಂಖ್ಯೆ ಶುಕ್ರವಾರ 2. 35 ಲಕ್ಷ ದಾಟಿದೆ. ಟಾಪ್‌ 10 ದೇಶಗಳ ಪೈಕಿ ಅಮೆರಿಕ ಮೊದಲ ಸ್ಥಾನದಲ್ಲಿದ್ದರೆ, ನಂತರದ ಸ್ಥಾನಗಳಲ್ಲಿ ಬ್ರೆಜಿಲ್ ರಷ್ಯಾ, ಸ್ಪೇನ್‌ ಮತ್ತು ಯು.ಕೆ. ಇವೆ. ಇತ್ತೀಚೆಗೆ ದೇಶದಲ್ಲಿ ಸೋಂಕು ಕಾಡ್ಗಿಚ್ಚಿನಂತೆ ವ್ಯಾಪಿಸುತ್ತಿರುವ ಕಾರಣ, ಕಳೆದೆರಡು ವಾರಗಳಲ್ಲಿ ಭಾರತವು ಜರ್ಮನಿ, ಪೆರು, ಟರ್ಕಿಯನ್ನು ದಾಟಿ 6ನೇ ಸ್ಥಾನಕ್ಕೆ ತಲುಪಿದೆ.

ಇದೇ ವೇಳೆ, ಕೇವಲ 4 ದಿನಗಳ ಅವಧಿಯಲ್ಲಿ ಭಾರತವು 900 ಕೋವಿಡ್ ಸೋಂಕಿತರ ಸಾವುಗಳನ್ನು ಕಂಡಿದೆ ಎಂಬ ಆಘಾತಕಾರಿ ಮಾಹಿತಿಯೂ ಹೊರಬಿದ್ದಿದೆ. ದೇಶಕ್ಕೆ ಕೋವಿಡ್ ಸೋಂಕು ಪ್ರವೇಶಿಸಿದ ಬಳಿಕ ಆರಂಭದಲ್ಲಿ ಸಾವಿನ ಸಂಖ್ಯೆ 1000ಕ್ಕೇರಲು 48 ದಿನಗಳು ಬೇಕಾಗಿದ್ದವು. ಆದರೆ, ಈಗ 4 ದಿನಗಳಲ್ಲಿ 900ರಷ್ಟು ಮಂದಿ ಸೋಂಕಿಗೆ ಬಲಿಯಾಗಿದ್ದು, ಕಳೆದ ಕೆಲವು ದಿನಗಳಿಂದ ಸೋಂಕು ಯಾವ ಪ್ರಮಾಣದಲ್ಲಿ ವ್ಯಾಪಿಸುತ್ತಿದೆ ಎಂಬುದಕ್ಕೆ ಇದು ಸಾಕ್ಷಿಯಾಗಿ ನಿಂತಿದೆ.

ಅದೇ ರೀತಿ, ಸೋಂಕಿತರ ಸಂಖ್ಯೆಯು 25 ಸಾವಿರದ ಗಡಿ ದಾಟಲು 87 ದಿನಗಳು ಹಿಡಿದಿದ್ದವು. ಎಪ್ರಿಲ್‌ 26ರ ಅನಂತರದಲ್ಲಿ ಕೇವಲ 6 ವಾರಗಳಲ್ಲಿ ಸೋಂಕಿತರ ಸಂಖ್ಯೆ 2.35 ಲಕ್ಷ ದಾಟಿದೆ. ಗುರುವಾರದಿಂದ ಶುಕ್ರವಾರದ ಅವಧಿಯಲ್ಲಿ 9,304 ಹೊಸ ಪ್ರಕರಣ ದಾಖಲಾಗಿದೆ. 260 ಮಂದಿ ಅಸುನೀಗಿದ್ದಾರೆ. 3,804 ರೋಗಿಗಳು ಗುಣಮುಖರಾಗಿದ್ದಾರೆ. ಈ ಮೂಲಕ 1,04,107 ಸೋಂಕಿತರು ಚೇತರಿಕೆ ಕಂಡಂತಾಗಿದ್ದು, ಗುಣಮುಖ ಪ್ರಮಾಣ ಶೇ.47.99ಕ್ಕೆ ತಲುಪಿದೆ.

Advertisement

ಭಾರತಕ್ಕೆ 3ನೇ ಸ್ಥಾನ: ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಈವರೆಗೆ ಪ್ರತಿ 23 ದಿನಗಳಿಗೊಮ್ಮೆ ದುಪ್ಪಟ್ಟಾಗುತ್ತಿತ್ತು. ಆದರೆ ಈಗ, ಕೋವಿಡ್ ಸೋಂಕಿತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿದ್ದು, ಈ ವಿಚಾರದಲ್ಲಿ ಬ್ರೆಜಿಲ್‌ ಮತ್ತು ಅಮೆರಿಕದ ಬಳಿಕ ಪ್ರತಿ ದಿನ ಅತಿ ಹೆಚ್ಚು ಸೋಂಕಿತರನ್ನು ಕಾಣುತ್ತಿರುವ 3ನೇ ರಾಷ್ಟ್ರ ಎಂಬ ಕುಖ್ಯಾತಿಗೆ ದೇಶ ಪಾತ್ರವಾಗಿದೆ. ಬ್ರೆಜಿಲ್‌ ನಲ್ಲಿ ಬುಧವಾರ ಒಂದೇ ದಿನ 27,312 ಹೊಸ ಪ್ರಕರಣಗಳು ಪತ್ತೆಯಾಗಿದ್ದರೆ, ಅಮೆರಿಕದಲ್ಲಿ 20,578 ಹಾಗೂ ಭಾರತದಲ್ಲಿ 9,633 ಪ್ರಕರಣ ಪತ್ತೆಯಾಗಿವೆ.

ಮುಂಬಯಿ ದೈನಂದಿನ ಕೇಸ್‌ ಸಂಖ್ಯೆ ಇಳಿಮುಖ
ಭಾರೀ ಸಂಖ್ಯೆಯ ಕೋವಿಡ್ ಪ್ರಕರಣಗಳನ್ನು ಕಂಡ ಮುಂಬಯಿಗೆ ಸದ್ಯ ಸ್ವಲ್ಪಮಟ್ಟಿಗೆ ನಿಟ್ಟುಸಿರು ಬಿಡುವಂಥ ಸುದ್ದಿಯೊಂದು ಸಿಕ್ಕಿದೆ. ಅದೇನೆಂದರೆ, ಮುಂಬಯಿಯಲ್ಲಿ ದೈನಂದಿನ ಸರಾಸರಿ ಸೋಂಕು ಹೆಚ್ಚಳದ ದರವು ಇಳಿಮುಖವಾಗುತ್ತಿದ್ದು, ಕಳೆದ ಕೆಲವು ದಿನಗಳಿಗೆ ಹೋಲಿಸಿದರೆ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಹೀಗೆಂದು ಬೃಹನ್ಮುಂಬಯಿ ನಗರ ಪಾಲಿಕೆಯೇ ಮಾಹಿತಿ ನೀಡಿದೆ.

ಜೂ.2ರವರೆಗಿನ ದತ್ತಾಂಶಗಳನ್ನು ಪರಿಗಣಿಸಿದರೆ, ಕಳೆದ ಕೆಲವು ದಿನಗಳ ಹಿಂದೆ ಶೇ.8ಕ್ಕಿಂತಲೂ ಹೆಚ್ಚಿದ್ದ ಕೋವಿಡ್ ಪ್ರಕರಣಗಳ ದೈನಂದಿನ ಸರಾಸರಿ ದರವು ಈಗ ಶೇ.3.64 ಕ್ಕಿಳಿದಿದೆ. ಜೂ.2ರವರೆಗೆ ಒಟ್ಟು 41,986 ಸೋಂಕಿತರು ಪತ್ತೆಯಾಗಿದ್ದರೆ, 1,368 ಮಂದಿ ಸಾವಿಗೀಡಾಗಿದ್ದಾರೆ. ಈ ದಿನದವರೆಗೆ ಒಟ್ಟು 2.08 ಲಕ್ಷ ಪರೀಕ್ಷೆಗಳನ್ನು ನಡೆಸಲಾಗಿದ್ದು, ಆ ಪೈಕಿ ಶೇ.20.18ರಷ್ಟು ಮಂದಿಗೆ ಕೋವಿಡ್ ಪಾಸಿಟಿವ್‌ ಆಗಿದೆ ಎಂದು ಬಿಎಂಸಿ ಹೇಳಿದೆ. ಅಲ್ಲದೆ, ಮುಂಬಯಿಯಲ್ಲಿ ಸೋಂಕಿತರ ದ್ವಿಗುಣಗೊಳ್ಳುವ ಅವಧಿಯೂ 19 ದಿನಗಳಿಗೆ ಏರಿಕೆಯಾಗಿದೆ.

ಯಾವ ರಾಜ್ಯಗಳಲ್ಲಿ ಸಾವು ಸಂಭವಿಸಿಲ್ಲ?
ದೇಶಾದ್ಯಂತ ಬಹುತೇಕ ಎಲ್ಲ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಿಗೂ ಕೋವಿಡ್ ವೈರಸ್‌ ಪ್ರವೇಶಿಸಿದೆ. 25 ರಾಜ್ಯಗಳಲ್ಲಿ ಕೋವಿಡ್ ಸೋಂಕಿತರು ಸಾವಿಗೀಡಾಗಿದ್ದಾರೆ. ಆದರೆ, ಅದೃಷ್ಟವಶಾತ್‌ ಕೆಲವು ರಾಜ್ಯಗಳಲ್ಲಿ ಈವರೆಗೆ ಯಾವುದೇ ಕೋವಿಡ್ ಸಾವಿನ ಪ್ರಕರಣ ವರದಿಯಾಗಿಲ್ಲ.

ಅಂಥ ರಾಜ್ಯಗಳೆಂದರೆ, ಅಂಡಮಾನ್‌-ನಿಕೋಬಾರ್‌ ದ್ವೀಪ, ಅರುಣಾಚಲ ಪ್ರದೇಶ, ದಾದ್ರಾ ಮತ್ತು ನಗರ ಹವೇಲಿ, ದಮನ್‌ ಮತ್ತು ದಿಯು, ಗೋವಾ, ಮಣಿಪುರ, ಮಿಜೋರಾಂ, ನಾಗಾಲ್ಯಾಂಡ್‌, ಪುದುಚೇರಿ, ಸಿಕ್ಕಿಂ, ತ್ರಿಪುರ ಮತ್ತು ಲಕ್ಷದ್ವೀಪ.

Advertisement

Udayavani is now on Telegram. Click here to join our channel and stay updated with the latest news.

Next