ಹೊಸದಿಲ್ಲಿ : ವಿಶ್ವದಲ್ಲಿಯೇ ಭಾರತ ಏಳನೇ ಅತ್ಯಮೂಲ್ಯ ರಾಷ್ಟ್ರವೆಂದು ಗುರುತಿಸಿಕೊಂಡಿದ್ದು, ಕಳೆದ ವರ್ಷಕ್ಕಿಂತ ಈ ಬಾರಿ ಎರಡು ಸ್ಥಾನಗಳ ಮುನ್ನಡೆ ಸಾಧಿಸಿದೆ ಎಂದು ಆರ್ಥಿಕ ವಲಯದ ವರದಿಯೊಂದು ತಿಳಿಸಿದೆ.
ಬ್ರ್ಯಾಂಡ್ ಫೈನಾನ್ಸ್ ಎಂಬ ಸಂಸ್ಥೆ ಈ ಸಮೀಕ್ಷೆಯನ್ನು ನಡೆಸಿದ್ದು, ವಿಶ್ವದಲ್ಲಿರುವ ಬ್ರ್ಯಾಂಡ್ ದೇಶಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಆರ್ಥಿಕ ವಲಯದ ಚಟುವಟಿಕೆಗಳ ಆಧಾರದ ಮೇಲೆ ದೇಶಗಳ ಬ್ರ್ಯಾಂಡನ್ನು ನಿರ್ಧರಿಸಲಾಗಿದ್ದು, ಸಾಮಾಜಿಕ ಬೆಳವಣಿಗೆಯನ್ನು ಪರಿಗಣನೆಗೆ ತೆಗೆದುಕೊಳ್ಳಲಾಗಿದೆ ಎಂದು ವರದಿ ಹೇಳಿದೆ.
ಜಾಗತಿಕ ಆರ್ಥಿಕ ಬಿಕ್ಕಟಿನ ನಂತರ ಭಾರತದ ಆರ್ಥಿಕ ವ್ಯವಸ್ಥೆ ಚೇತರಿಸಿಕೊಂಡಿದ್ದು , ಉತ್ಪಾದನಾ ಮತ್ತು ನಿರ್ಮಾಣ ಕ್ಷೇತ್ರಗಳಲ್ಲಿನ ಕುಸಿತದ ಮಟ್ಟ ಸುಧಾರಿಸಿದೆ ಎಂದು ಸಮೀಕ್ಷೆಯ ವರದಿ ಉಲ್ಲೇಖೀಸಿದೆ.
ಮೌಲ್ಯಯುತ ದೇಶಗಳ ಪೈಕಿ ಭಾರತ ಈ ಬಾರಿ ಶೇ.19 ರಷ್ಟು ಪ್ರಗತಿ ಹೊಂದಿದ್ದು, ಕಳೆದ ವರ್ಷಕ್ಕಿಂತ ಎರಡು ಸ್ಥಾನಗಳ ಮುನ್ನಡೆ ಸಾಧಿಸಿದೆ.
ಇನ್ನೂ ಅಮೆರಿಕಕ್ಕೆ ಅತ್ಯಮೂಲ್ಯ ದೇಶ ಎಂಬ ಬಿರುದು ದೊರಕಿದ್ದು, ಮುಂದಿನ ಕ್ರಮಾಂಕದಲ್ಲಿ ಚೀನ, ಜಪಾನ್, ಇಂಗ್ಲೆಂಡ್, ಫ್ರಾನ್ಸ್ ,ಕೆನಡಾ ಮುಂತಾದ ದೇಶಗಳು ಸ್ಥಾನ ಪಡೆದು ಕೊಂಡಿವೆ.