Advertisement
ಶುಕ್ರವಾರ ಮೆಲ್ಬರ್ನ್ನಲ್ಲಿ ನಡೆದ 3ನೇ ಹಾಗೂ ನಿರ್ಣಾಯಕ ಪಂದ್ಯದಲ್ಲಿ ವಿಶ್ವ ಚಾಂಪಿಯನ್ ಖ್ಯಾತಿಯ ಆಸ್ಟ್ರೇಲಿಯವನ್ನು 7 ವಿಕೆಟ್‌ಗಳಿಂದ ಬಗ್ಗುಬಡಿಯುವ ಮೂಲಕ ಕೊಹ್ಲಿ ಪಡೆ ಕಮಾಲ್ ಮಾಡಿತು. ಬ್ಯಾಟಿಂಗಿಗೆ ಇಳಿಸಲ್ಪಟ್ಟ ಆಸ್ಟ್ರೇಲಿಯ 48.4 ಓವರ್‌ಗಳಲ್ಲಿ 230ಕ್ಕೆ ಕುಸಿದರೆ, ಭಾರತ 49.2 ಓವರ್‌ಗಳಲ್ಲಿ 3 ವಿಕೆಟಿಗೆ 234 ರನ್ ಬಾರಿಸಿ ಗೆದ್ದು ಬಂದಿತು. ಟೆಸ್ಟ್ ಸರಣಿಯನ್ನೂ ಭಾರತ 2-1 ಅಂತರದಿಂದ ಗೆದ್ದಿತ್ತು. ಟಿ20 ಸರಣಿ 1-1ರಿಂದ ಸಮನಾಗಿತ್ತು. ಏಕದಿನದಲ್ಲಿ ಸೋಲಿನ ಆರಂಭ ಪಡೆದ ಬಳಿಕ ತಿರುಗಿ ಬಿದ್ದದ್ದು ಟೀಮ್ ಇಂಡಿಯಾದ ಪರಾಕ್ರಮಕ್ಕೆ ಸಾಕ್ಷಿಯಾಗಿತ್ತು.
ಚಾಹಲ್ ಅವರ ಜೀವನಶ್ರೇಷ್ಠ ಸ್ಪಿನ್ ದಾಳಿ, ಧೋನಿ ಮತ್ತು ಕೇದಾರ್ ಜಾಧವ್ ಅವರ ಅಜೇಯ ಜತೆಯಾಟ ಭಾರತದ ಜಯಭೇರಿಯಲ್ಲಿ ಪ್ರಮುಖ ಪಾತ್ರ ವಹಿಸಿತು. ಚಾಹಲ್ 6 ವಿಕೆಟ್ ಕಿತ್ತು ಜೀವನಶ್ರೇಷ್ಠ ದಾಳಿ ಸಂಘಟಿಸಿದರೆ, ಧೋನಿ ಮತ್ತು ಜಾಧವ್ 19.2 ಓವರ್‌ಗಳ ಅಜೇಯ ಜತೆಯಾಟದಲ್ಲಿ ಮುರಿಯದ 4ನೇ ವಿಕೆಟಿಗೆ 121 ರನ್ ಒಟ್ಟುಗೂಡಿಸಿ ಫಿಂಚ್ ಬಳಗಕ್ಕೆ ಭರ್ಜರಿ ಪಂಚ್ ಕೊಟ್ಟರು. ಸ್ಟೋಯಿನಿಸ್ ಎಸೆತವನ್ನು ಡೀಪ್ ಮಿಡ್ ವಿಕೆಟ್ ಬೌಂಡರಿಗೆ ರವಾನಿಸುವ ಮೂಲಕ ಜಾಧವ್ ಭಾರತದ ಗೆಲುವನ್ನು ಸಾರಿದರು. ಧೋನಿ ಹ್ಯಾಟ್ರಿಕ್ ಫಿಫ್ಟಿ
ಭಾರತದ ವಿಜಯೋತ್ಸವದ ವೇಳೆ ಧೋನಿ 87 ರನ್ (114 ಎಸೆತ, 6 ಬೌಂಡರಿ) ಮತ್ತು ಜಾಧವ್ 61 ರನ್ ಬಾರಿಸಿ (57 ಎಸೆತ, 7 ಬೌಂಡರಿ) ಅಜೇಯರಾಗಿದ್ದರು. ಸರಣಿಗೂ ಮುನ್ನ ಧೋನಿ ಮೇಲೆ ತೀವ್ರ ಒತ್ತಡವಿತ್ತು. ಭಾರೀ ಟೀಕೆಗೂ ಒಳಗಾಗಿದ್ದರು. ಆದರೆ ಹ್ಯಾಟ್ರಿಕ್ ಫಿಫ್ಟಿ ದಾಖಲಿಸುವ ಮೂಲಕ ಟೀಕಾಕಾರರಿಗೆ ಬ್ಯಾಟಿನಿಂದಲೇ ಉತ್ತರಿಸಿ ಸರಣಿಶ್ರೇಷ್ಠರಾಗಿ ಮೂಡಿಬಂದರು. ಈ ಸರಣಿಯಲ್ಲಿ ಧೋನಿ ಬ್ಯಾಟಿಂಗ್ ಸಾಧನೆ ಹೀಗಿದೆ: 51, ಅಜೇಯ 55 ಮತ್ತು ಅಜೇಯ 87 ರನ್. ಇಂದಿನದು 70ನೇ ಅರ್ಧ ಶತಕ. ಚಾಹಲ್ ಅವರಂತೆ ಜಾಧವ್ ತಮ್ಮ ಮೊದಲ ಅವಕಾಶವನ್ನು ಸಮರ್ಥ ರೀತಿಯಲ್ಲಿ ಬಳಸಿಕೊಂಡರು.
Related Articles
ಆಸ್ಟ್ರೇಲಿಯವನ್ನು ಈ ಸರಣಿಯಲ್ಲೇ ಸಣ್ಣ ಮೊತ್ತಕ್ಕೆ ಕುಸಿಯುವಂತೆ ಮಾಡುವಲ್ಲಿ ಲೆಗ್‌ಸ್ಪಿನ್ನರ್ ಯಜುವೇಂದ್ರ ಚಾಹಲ್ ಪಾತ್ರ ಅಮೋಘವಾಗಿತ್ತು. ಸರಣಿಯಲ್ಲಿ ಮೊದಲ ಸಲ ಆಡುವ ಅವಕಾಶ ಪಡೆದ ಚಾಹಲ್, ಇದನ್ನು ಎರಡೂ ಕೈಗಳಲ್ಲಿ ಬಾಚಿಕೊಂಡರು; ಕಾಂಗರೂಗಳಿಗೆ ಕಂಟಕವಾಗಿ ಪರಿಣಮಿಸಿದರು. 42ಕ್ಕೆ 6 ವಿಕೆಟ್ ಉಡಾಯಿಸುವ ಮೂಲಕ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.
Advertisement
6ನೇ ಬೌಲಿಂಗ್ ಬದಲಾವಣೆಯ ರೂಪದಲ್ಲಿ, ಇನ್ನಿಂಗ್ಸಿನ 24ನೇ ಓವರ್ ಎಸೆಯಲು ಬಂದ ಚಾಹಲ್ ಪಂದ್ಯದ ಗತಿಯನ್ನೇ ಬದಲಿಸಿದರು. ಆಗ ಆಸ್ಟ್ರೇಲಿಯ 2 ವಿಕೆಟಿಗೆ 100 ರನ್ ಗಳಿಸಿ ನಿಧಾನವಾಗಿ ಚೇತರಿಸಿಕೊಳ್ಳುವ ಹಾದಿಯಲ್ಲಿತ್ತು. ಆದರೆ ಚಾಹಲ್ ತಮ್ಮ ಮೊದಲ ಓವರಿನಲ್ಲೇ ಅವಳಿ ಆಘಾತವಿತ್ತರು. ಮೊದಲ ಎಸೆತದಲ್ಲೇ ಶಾನ್ ಮಾರ್ಷ್‌ಗೆ (39) ಬಲೆ ಬೀಸಿದರೆ, 4ನೇ ಎಸೆತದಲ್ಲಿ ಉಸ್ಮಾನ್ ಖ್ವಾಜಾಗೆ (34) ಪೆವಿಲಿಯನ್ ಹಾದಿ ತೋರಿಸಿದರು. ಇವರ 3ನೇ ಬೇಟೆ ಮಾರ್ಕಸ್ ಸ್ಟೋಯಿನಿಸ್ (10).
ಭಾರತೀಯನ ಲೆಗ್‌ಸ್ಪಿನ್ ಮರ್ಮವನ್ನರಿಯಲು ಸಂಪೂರ್ಣ ವಿಫಲರಾದ ಆತಿಥೇಯರು ಸತತವಾಗಿ ವಿಕೆಟ್ ಉರುಳಿಸುತ್ತ ಸಾಗಿದರು. ರನ್‌ರೇಟ್ ಕೂಡ ಕುಂಟಿತಗೊಂಡಿತು. ಈ ನಡುವೆ ಶಮಿ ಕೂಡ ಘಾತಕವಾಗಿ ಪರಿಣಮಿಸಿದರು. ಭುವನೇಶ್ವರ್ ಆರಂಭಿಕರನ್ನು ಪೆವಿಲಿಯನ್ನಿಗೆ ಅಟ್ಟಿ ಮೊದಲು ಬೌಲಿಂಗ್ ನಡೆಸುವ ಕೊಹ್ಲಿ ನಿರ್ಧಾರವನ್ನು ಸಮರ್ಥಿಸಿದ್ದರು. ಒದ್ದೆ ಅಂಗಳದಿಂದಾಗ ಆಟ ವಿಳಂಬವಾಗಿ ಮೊದಲ್ಗೊಂಡಿತ್ತು. 2 ಎಸೆತಗಳಾಗುವಷ್ಟರಲ್ಲಿ ಮತ್ತೆ ಮಳೆಯಿಂದ ಆಟ ನಿಂತಿತು. ಇದು ಚಾಹಲ್ ಮೆರೆದಾಟಕ್ಕೆ ಹೆಚ್ಚು ಅನುಕೂಲವಾಗಿ ಪರಿಣಮಿಸಿತು.
ಆಸ್ಟ್ರೇಲಿಯ ಸರದಿಯ ಏಕೈಕ ಅರ್ಧ ಶತಕ ಹ್ಯಾಂಡ್ಸ್‌ಕಾಂಬ್ ಅವರಿಂದ ದಾಖಲಾಯಿತು. 63 ಎಸೆತ ಎದುರಿಸಿದ ಅವರು 58 ರನ್ ಹೊಡೆದರು. ಇದರಲ್ಲಿ ಎರಡೇ ಬೌಂಡರಿ ಒಳಗೊಂಡಿತ್ತು. ಕಳೆದ ಪಂದ್ಯದ ಶತಕವೀರ ಮಾರ್ಷ್ 39, ಖ್ವಾಜಾ 34 ರನ್ ಮಾಡಿದರು. ಮ್ಯಾಕ್ಸ್‌ವೆಲ್ ಬಿರುಸಿನ ಬ್ಯಾಟಿಂಗ್ ಮೂಲಕ ಗಮನ ಸೆಳೆದರು (19 ಎಸೆತ, 26 ರನ್, 5 ಬೌಂಡರಿ).
ಇನ್ನು ನ್ಯೂಜಿಲ್ಯಾಂಡಿನತ್ತ…ಭಾರತವಿನ್ನು ನ್ಯೂಜಿಲ್ಯಾಂಡಿನಲ್ಲಿ 5 ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದೆ. ಮೊದಲ ಪಂದ್ಯ ಜ. 23ರಂದು ನೇಪಿಯರ್‌ನಲ್ಲಿ ನಡೆಯಲಿದೆ. ಫೆ. 3ರಂದು ಅಂತಿಮ ಪಂದ್ಯವನ್ನು ಆಡಲಾಗುವುದು. ಬಳಿಕ 3 ಪಂದ್ಯಗಳ ಟಿ20 ಸರಣಿ ಸಾಗಲಿದೆ. ಸ್ಕೋರ್‌ಪಟ್ಟಿ
ಆಸ್ಟ್ರೇಲಿಯ
ಅಲೆಕ್ಸ್ ಕ್ಯಾರಿ ಸಿ ಕೊಹ್ಲಿ ಬಿ ಭುವನೇಶ್ವರ್ 5
ಆರನ್ ಫಿಂಚ್ ಎಲ್‌ಬಿಡಬ್ಲ್ಯು ಭುವನೇಶ್ವರ್ 14
ಉಸ್ಮಾನ್ ಖ್ವಾಜಾ ಸಿ ಮತ್ತು ಬಿ ಚಾಹಲ್ 34
ಶಾನ್ ಮಾರ್ಷ್ ಸಿ ಸ್ಟಂಪ್ಡ್ ಧೋನಿ ಬಿ ಚಾಹಲ್ 39
ಪೀಟರ್ ಹ್ಯಾಂಡ್ಸ್‌ಕಾಂಬ್ ಎಲ್‌ಬಿಡಬ್ಲ್ಯು ಚಾಹಲ್ 58
ಮಾರ್ಕಸ್ ಸ್ಟೋಯಿನಿಸ್ ಸಿ ರೋಹಿತ್ ಬಿ ಚಾಹಲ್ 10
ಗ್ಲೆನ್ ಮ್ಯಾಕ್ಸ್‌ವೆಲ್ ಸಿ ಭುವನೇಶ್ವರ್ ಬಿ ಶಮಿ 26
ಜೇ ರಿಚರ್ಡ್‌ಸನ್ ಸಿ ಜಾಧವ್ ಬಿ ಚಾಹಲ್ 16
ಆ್ಯಡಂ ಝಂಪ ಸಿ ಶಂಕರ್ ಬಿ ಚಾಹಲ್ 8
ಪೀಟರ್ ಸಿಡ್ಲ್ ಔಟಾಗದೆ 10
ಬಿಲ್ಲಿ ಸ್ಟಾನ್‌ಲೇಕ್ ಬಿ ಶಮಿ 0
ಇತರ 10
ಒಟ್ಟು (48.4 ಓವರ್‌ಗಳಲ್ಲಿ ಆಲೌಟ್) 230
ವಿಕೆಟ್ ಪತನ: 1-8, 2-27, 3-100, 4-101, 5-123, 6-161, 7-206, 8-219, 9-228.
ಬೌಲಿಂಗ್:
ಭುವನೇಶ್ವರ್ ಕುಮಾರ್ 8-1-28-2
ಮೊಹಮ್ಮದ್ ಶಮಿ 9.4-0-47-2
ವಿಜಯ್ ಶಂಕರ್ 6-0-23-0
ಕೇದಾರ್ ಜಾಧವ್ 6-0-35-0
ರವೀಂದ್ರ ಜಡೇಜ 9-0-53-0
ಯಜುವೇಂದ್ರ ಚಾಹಲ್ 10-0-42-6 ಭಾರತ
ರೋಹಿತ್ ಶರ್ಮ ಸಿ ಮಾರ್ಷ್ ಬಿ ಸಿಡ್ಲ್ 9
ಶಿಖರ್ ಧವನ್ ಸಿ ಮತ್ತು ಬಿ ಸ್ಟೋಯಿನಿಸ್ 23
ವಿರಾಟ್ ಕೊಹ್ಲಿ ಸಿ ಕ್ಯಾರಿ ಬಿ ರಿಚರ್ಡ್‌ಸನ್ 46
ಎಂ.ಎಸ್. ಧೋನಿ ಔಟಾಗದೆ 87
ಕೇದಾರ್ ಜಾಧವ್ ಔಟಾಗದೆ 61
ಇತರ 8
ಒಟ್ಟು (49.2 ಓವರ್‌ಗಳಲ್ಲಿ 3 ವಿಕೆಟಿಗೆ) 234
ವಿಕೆಟ್ ಪತನ: 1-15, 2-59, 3-113.
ಬೌಲಿಂಗ್:
ಜೇ ರಿಚರ್ಡ್‌ಸನ್ 10-1-27-1
ಪೀಟರ್ ಸಿಡ್ಲ್ 9-1-56-1
ಬಿಲ್ಲಿ ಸ್ಟಾನ್‌ಲೇಕ್ 10-0-49-0
ಗ್ಲೆನ್ ಮ್ಯಾಕ್ಸ್‌ವೆಲ್ 1-0-7-0
ಆ್ಯಡಂ ಝಂಪ 10-0-34-0
ಮಾರ್ಕಸ್ ಸ್ಟೋಯಿನಿಸ್ 9.2-0-60-1
ಪಂದ್ಯಶ್ರೇಷ್ಠ: ಯಜುವೇಂದ್ರ ಚಾಹಲ್
ಸರಣಿಶ್ರೇಷ್ಠ: ಮಹೇಂದ್ರ ಸಿಂಗ್ ಧೋನಿ ಎಕ್ಸ್‌ಟ್ರಾ ಇನ್ನಿಂಗ್ಸ್
* ಯಜುವೇಂದ್ರ ಚಾಹಲ್ ಮೊದಲ ಸಲ ಏಕದಿನ ಪಂದ್ಯವೊಂದರಲ್ಲಿ 6 ವಿಕೆಟ್ ಉರುಳಿಸಿದರು. ಕಳೆದ ವರ್ಷ ದಕ್ಷಿಣ ಆಫ್ರಿಕಾ ವಿರುದ್ಧ ಸೆಂಚುರಿಯನ್‌ನಲ್ಲಿ 22 ರನ್ನಿಗೆ 5 ವಿಕೆಟ್ ಉರುಳಿಸಿದ್ದು ಅವರ ಅತ್ಯುತ್ತಮ ಸಾಧನೆಯಾಗಿತ್ತು.
* ಚಾಹಲ್ ಆಸ್ಟ್ರೇಲಿಯ ವಿರುದ್ಧ ಅವರದೇ ನೆಲದಲ್ಲಿ 6 ವಿಕೆಟ್ ಉಡಾಯಿಸಿದ ವಿಶ್ವದ ಮೊದಲ ಸ್ಪಿನ್ನರ್ ಆಗಿ ಮೂಡಿಬಂದರು.
* ಚಾಹಲ್ ಆಸ್ಟ್ರೇಲಿಯದಲ್ಲಿ ಅತ್ಯುತ್ತಮ ಬೌಲಿಂಗ್ ಪ್ರದರ್ಶನವಿತ್ತ ಭಾರತದ ಸ್ಪಿನ್ನರ್ ಎನಿಸಿದರು. 1991ರ ಪರ್ತ್ ಪಂದ್ಯದಲ್ಲಿ ರವಿ ಶಾಸಿŒ 15ಕ್ಕೆ 5 ವಿಕೆಟ್ ಉರುಳಿಸಿದ ದಾಖಲೆ ಪತನಗೊಂಡಿತು.
* ಚಾಹಲ್ ಆಸ್ಟ್ರೇಲಿಯದಲ್ಲಿ ಆಡಲಾದ ಪಂದ್ಯದಲ್ಲಿ 6 ವಿಕೆಟ್ ಉರುಳಿಸಿದ ಭಾರತದ 2ನೇ ಬೌಲರ್. ಅಜಿತ್ ಅಗರ್ಕರ್ ಮೊದಲಿಗ. ಅವರು 2004ರ ಮೆಲ್ಬರ್ನ್ ಪಂದ್ಯದಲ್ಲಿ 42 ರನ್ನಿಗೆ 6 ವಿಕೆಟ್ ಉರುಳಿಸಿದ್ದರು.
* ಚಾಹಲ್ ಆಸ್ಟ್ರೇಲಿಯ ವಿರುದ್ಧ 6 ವಿಕೆಟ್ ಕಿತ್ತ ವಿಶ್ವದ 3ನೇ ಸ್ಪಿನ್ನರ್. ಮುರಳಿ ಕಾರ್ತಿಕ್ (27ಕ್ಕೆ 6, ಮುಂಬಯಿ, 2007) ಮತ್ತು ಶಾಹಿದ್ ಆಫ್ರಿದಿ ಉಳಿದಿಬ್ಬರು (38ಕ್ಕೆ 6, ದುಬಾೖ, 2009).
* ಚಾಹಲ್ ದಕ್ಷಿಣ ಆಫ್ರಿಕಾ ಹಾಗೂ ಆಸ್ಟ್ರೇಲಿಯ ನೆಲದಲ್ಲಿ 5 ಪ್ಲಸ್ ವಿಕೆಟ್ ಕಿತ್ತ ವಿಶ್ವದ ಏಕೈಕ ಬೌಲರ್ (ಆತಿಥೇಯ ನಾಡಿನ ಬೌಲರ್‌ಗಳನ್ನು ಹೊರತುಪಡಿಸಿ).
* ಚಾಹಲ್ ಮೆಲ್ಬರ್ನ್ ಅಂಗಳದಲ್ಲಿ 6 ವಿಕೆಟ್ ಉರುಳಿಸಿದ ವಿಶ್ವದ ಮೊದಲ ಸ್ಪಿನ್ನರ್. ಆಸ್ಟ್ರೇಲಿಯದ ಬ್ರಾಡ್ ಹಾಗ್ ಮತ್ತು ಪಾಕಿಸ್ಥಾನದ ಅಬ್ದುಲ್ ಖಾದರ್ 5 ವಿಕೆಟ್ ಉರುಳಿಸಿದ್ದು ಅತ್ಯುತ್ತಮ ಸಾಧನೆಯಾಗಿತ್ತು.
* ಧೋನಿ ಆಸ್ಟ್ರೇಲಿಯದಲ್ಲಿ ಸಾವಿರ ರನ್ ಪೂರ್ತಿಗೊಳಿಸಿದ ಭಾರತದ 4ನೇ ಬ್ಯಾಟ್ಸ್‌ಮನ್ ಎನಿಸಿದರು. ತೆಂಡುಲ್ಕರ್, ಕೊಹ್ಲಿ, ರೋಹಿತ್ ಉಳಿದ ಮೂವರು.
* ಧೋನಿ 4ನೇ ಸಲ ಸತತ 3 ಪಂದ್ಯಗಳಲ್ಲಿ 50 ಪ್ಲಸ್ ರನ್ ಹೊಡೆದರು. 2011ರಲ್ಲಿ ಇಂಗ್ಲೆಂಡ್ ಎದುರು ಸತತ 4 ಅರ್ಧ ಶತಕ ಬಾರಿಸಿದ್ದು ದಾಖಲೆ. ಈ ಸರಣಿ ನನ್ನ ಮೇಲಿನ ಒತ್ತಡ ನಿವಾರಿಸಿದೆ
“ಇದು ನಿಧಾನ ಗತಿಯ ಟ್ರ್ಯಾಕ್ ಆಗಿತ್ತು. ಬಯಸಿದಂತೆಲ್ಲ ದೊಡ್ಡ ಹೊಡೆತ ಬಾರಿಸಲು ಸಾಧ್ಯವಿರಲಿಲ್ಲ. ಕೊನೆಯ ತನಕ ನಿಂತು ಆಡಬೇಕಿತ್ತು. ಕೇದಾರ್ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದರು. ಈ ಸರಣಿ ನನ್ನ ಮೇಲಿನ ಒತ್ತಡವನ್ನು ನಿವಾರಿಸಿದೆ’
– ಮಹೇಂದ್ರ ಸಿಂಗ್ ಧೋನಿ ಅಂಪಾಯರ್ ಹಿಂದಿನಿಂದ ಬೌಲ್ ಮಾಡಿದ ಭುವಿ!
3ನೇ ಏಕದಿನ ಪಂದ್ಯದಲ್ಲಿ ವಿಶೇಷ ವಿದ್ಯಮಾನವೊಂದು ನಡೆಯಿತು. ಆಸ್ಟ್ರೇಲಿಯ ಇನ್ನಿಂಗ್ಸ್ ವೇಳೆ 9ನೇ ಓವರನ್ನು ವೇಗಿ ಭುವನೇಶ್ವರ್ ಕುಮಾರ್ ಎಸೆದರು. ಈ ಓವರ್‌ನ ಅಂತಿಮ ಎಸೆತವನ್ನು ಭುವನೇಶ್ವರ್, ಅಂಪಾಯರ್‌ಗಿಂತ ಸಾಕಷ್ಟು ಹಿಂದಿನಿಂದ ಎಸೆದರು (ಅಂಪಾಯರ್ ನಿಂತಿರುವ ಗೆರೆಯನ್ನು ಬಳಸಿ ಬೌಲಿಂಗ್ ಮಾಡುವುದು ಕ್ರಮ). ಕಾನೂನು ಪ್ರಕಾರ ಈ ಎಸೆತ ಸಿಂಧುವಾದರೂ, ಬ್ಯಾಟ್ಸ್‌ಮನ್ ಫಿಂಚ್ ಎಸೆತ ಎದುರಿಸದೇ ಹಿಂದೆ ಸರಿದರು. ಆದ್ದರಿಂದ ಅದನ್ನು ಅಂಪಾಯರ್ ಡೆಡ್ ಬಾಲ್ ಎಂದು ಘೋಷಿಸಿದರು. ಸ್ವಲ್ಪ ಸಮಯ ಇದು ಸರಿಯೋ, ತಪ್ಪೋ ಎಂಬ ಚರ್ಚೆ ನಡೆಯಿತು.