ನವದೆಹಲಿ:ಲಡಾಖ್ ನ ಗಡಿವಿಚಾರದಲ್ಲಿ ಭಾರತದ ಜತೆ ಸಂಘರ್ಷಕ್ಕೆ ಇಳಿದಿದ್ದ ಚೀನಕ್ಕೆ ಭಾರತ ಚೀನದ 59 ಆ್ಯಪ್ ಗಳನ್ನು ಜೂನ್ ತಿಂಗಳಿನಲ್ಲಿ ನಿಷೇಧಿಸಿತ್ತು. ಇದೀಗ ಭಾರತ ಸರ್ಕಾರ ಮತ್ತೆ ಚೀನ ಮೂಲದ 47 ಆ್ಯಪ್ಸ್ ಗಳನ್ನು ನಿಷೇಧಿಸಿದೆ ಎಂದು ತಿಳಿಸಿದೆ.
ಎಲೆಕ್ಟ್ರಾನಿಕ್ಸ್ ಮತ್ತು ಇನ್ ಫಾರ್ಮೇಶನ್ ಟೆಕ್ನಾಲಜಿ ಸಚಿವಾಲಯ ಶೀಘ್ರದಲ್ಲಿಯೇ ನಿಷೇಧಿಸಲ್ಪಟ್ಟ ಚೀನ ಆ್ಯಪ್ಸ್ ಗಳ ಪಟ್ಟಿಯನ್ನು ಬಿಡುಗಡೆ ಮಾಡಲಿದೆ ಎಂದು ವರದಿ ವಿವರಿಸಿದೆ. ಇದರಲ್ಲಿ ಟಿಕ್ ಟಾಕ್ ಲೈಟ್, ಹಲೋ ಲೈಟ್, ಶೇರ್ ಇಟ್ ಲೈಟ್, ಬಿಗೋ ಲೈವ್ ಲೈಟ್, ವಿಎಫ್ ವೈ ಲೈಟ್ ನಿಷೇಧದ ಪಟ್ಟಿಯಲ್ಲಿ ಸೇರಿರುವುದಾಗಿ ಎಎನ್ ಐ ವರದಿ ಮಾಡಿದೆ.
ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಜೂನ್ ತಿಂಗಳಲ್ಲಿ 59 ಚೀನ ಆ್ಯಪ್ ಗಳನ್ನು ನಿಷೇಧಿಸಿತ್ತು. ಇದೀಗ ರೂಪಾಂತರ(ಭಿನ್ನ ಹೆಸರಿನೊಂದಿಗೆ)ಗೊಂಡು ಚಾಲ್ತಿಗೆ ಬಂದಿರುವ 47 ಚೀನ ಆ್ಯಪ್ ಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ.
ಅಷ್ಟೇ ಅಲ್ಲ ಭಾರತ ಸರ್ಕಾರ 250ಕ್ಕೂ ಅಧಿಕ ಚೀನ ಆ್ಯಪ್ಸ್ ಗಳ ಪಟ್ಟಿಯನ್ನು ಸಿದ್ದಪಡಿಸಿದೆ. ಇದರಲ್ಲಿ ಅಲಿಬಾಬಾ ಆ್ಯಪ್ಸ್ ಕೂಡಾ ಸೇರಿದೆ. ಸರ್ಕಾರ ಈ ಆ್ಯಪ್ಸ್ ಗಳ ಪರಿಶೀಲನೆ ನಡೆಸುತ್ತಿದೆ. ಯಾವುದೇ ಬಳಕೆದಾರನ ಖಾಸಗಿತನ ಅಥವಾ ರಾಷ್ಟ್ರೀಯ ಭದ್ರತೆಯ ಉಲ್ಲಂಘನೆಯಾಗಿದೆಯೇ ಎಂದು ಪರಿಶೀಲನೆ ನಡೆಸುತ್ತಿರುವುದಾಗಿ ಸರ್ಕಾರದ ಮೂಲಗಳು ತಿಳಿಸಿದೆ. ಇದರಲ್ಲಿ ಪಬ್ ಜಿ ಆ್ಯಪ್ ಕೂಡಾ ಸೇರಿದ ಎಂದು ಹೇಳಿದೆ.
ಚೀನದ ಪ್ರಮುಖ ಗೇಮ್ ಆ್ಯಪ್ಲಿಕೇಶನ್ ಗಳನ್ನೂ ಕೂಡಾ ನಿಷೇಧಕ್ಕೊಳಗಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಲಡಾಖ್ ನಲ್ಲಿ ನಡೆದ ಗಡಿ ಸಂಘರ್ಷದಲ್ಲಿ ಚೀನ ಸೈನಿಕರು ನಡೆಸಿದ ದಾಳಿಯಲ್ಲಿ 20 ಮಂದಿ ಭಾರತೀಯ ಯೋಧರು ಹುತಾತ್ಮರಾಗಿದ್ದರು. ಆ ಬಳಿಕ ಭಾರತ ಚೀನ ವಿರುದ್ಧ ಕಠಿನ ನಿರ್ಧಾರ ತಳೆದಿತ್ತು. ಮೊದಲ ಹಂತವಾಗಿ 59 ಚೀನ ಆ್ಯಪ್ಸ್ ಗಳನ್ನು ನಿಷೇಧಿಸಿತ್ತು. ಇದರಲ್ಲಿ ಹಲೋ, ಶೇರ್ ಕೂಡಾ ಸೇರಿದ್ದವು.