ಸಿಡ್ನಿ: ಭಾರತ-ಆಸ್ಟ್ರೇಲಿಯಾ ಬಾಂಧವ್ಯಗಳು ವೇಗವಾಗಿ ವಿಸ್ತರಿಸುತ್ತಿರುವುದನ್ನು ಬಣ್ಣಿಸಲು ಪ್ರಧಾನಿ ನರೇಂದ್ರ ಮೋದಿ ಬುಧವಾರ ಕ್ರಿಕೆಟ್ ಸಾದೃಶ್ಯವನ್ನು ಬಳಸಿದ್ದು, ನಮ್ಮ ಸಂಬಂಧಗಳು “ಟಿ-20 ಮೋಡ್”ನಲ್ಲಿವೆ ಎಂದು ಹೇಳಿದ್ದಾರೆ.
ಭಾರತ-ಆಸ್ಟ್ರೇಲಿಯಾ ಸಮಗ್ರ ಕಾರ್ಯತಂತ್ರದ ಸಹಭಾಗಿತ್ವದ ಮತ್ತಷ್ಟು ವಿಸ್ತರಣೆಯ ಮೇಲೆ ಕೇಂದ್ರೀಕರಿಸಿದ ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರೊಂದಿಗೆ ಸುದೀರ್ಘ ಮಾತುಕತೆ ನಡೆಸಿದ ನಂತರ ಮೋದಿ ಈ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.
ಈ ವರ್ಷದ ಕೊನೆಯಲ್ಲಿ ಭಾರತದಲ್ಲಿ ನಡೆಯಲಿರುವ ಏಕದಿನ ಕ್ರಿಕೆಟ್ ವಿಶ್ವಕಪ್ ಪಂದ್ಯಾವಳಿಗಾಗಿ ಪ್ರಧಾನಿ ಮೋದಿಯವರು ಅಲ್ಬನೀಸ್ ಮತ್ತು ಆಸ್ಟ್ರೇಲಿಯಾದ ಕ್ರಿಕೆಟ್ ಅಭಿಮಾನಿಗಳನ್ನು ಭಾರತಕ್ಕೆ ಆಹ್ವಾನಿಸಿದರು.
“ನನ್ನ ಸ್ನೇಹಿತ ಪ್ರಧಾನಿ ಅಲ್ಬನೀಸ್ ಭಾರತಕ್ಕೆ ಭೇಟಿ ನೀಡಿದ ಎರಡು ತಿಂಗಳೊಳಗೆ ನಾನು ಇಲ್ಲಿಗೆ ಬಂದೆ. ಕಳೆದ ಒಂದು ವರ್ಷದಲ್ಲಿ ಇದು ನಮ್ಮ ಆರನೇ ಸಭೆ. ಇದು ನಮ್ಮ ವಿಶಾಲ ವ್ಯಾಪ್ತಿಯ ಬಾಂಧವ್ಯದ ಆಳ, ನಮ್ಮ ಅಭಿಪ್ರಾಯಗಳ ಒಮ್ಮುಖ ಮತ್ತು ನಮ್ಮ ಸಹಕಾರದ ಪರಿಪಕ್ವತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಮೋದಿ ಹೇಳಿದರು.
ಕಳೆದ ವರ್ಷ, ಭಾರತ ಮತ್ತು ಆಸ್ಟ್ರೇಲಿಯಾ ಆರ್ಥಿಕ ಸಹಕಾರ ವ್ಯಾಪಾರ ಒಪ್ಪಂದವನ್ನು (ECTA) ಅಂತಿಮಗೊಳಿಸಿದ್ದವು. ಕಳೆದ ಡಿಸೆಂಬರ್‌ನಲ್ಲಿ ಜಾರಿಗೆ ಬಂದಿತ್ತು. ಎರಡೂ ಬದಿಯಿಂದ ಸಮಗ್ರ ಆರ್ಥಿಕ ಸಹಕಾರ ಒಪ್ಪಂದದ (CECA) ಕೆಲಸ ಮಾಡುತ್ತಿದ್ದಾರೆ.