Advertisement

ವೀಕ್ಷಕರಿಗೆ ತೆರೆಯಲಿದೆ ಭಾರತ-ಆಸ್ಟ್ರೇಲಿಯ ಸರಣಿ

02:16 AM Nov 11, 2020 | mahesh |

ಅಡಿಲೇಡ್‌: ಕ್ರಿಕೆಟ್‌ ಪ್ರೇಮಿಗಳಿಗೆ, ಅದರಲ್ಲೂ ಆಸ್ಟ್ರೇಲಿಯದ ಕ್ರಿಕೆಟ್‌ ವೀಕ್ಷಕರ ಪಾಲಿಗೆ ಸಿಹಿ ಸುದ್ದಿಯೊಂದು ಬಿತ್ತರಗೊಂಡಿದೆ. ಮುಂಬರುವ ಭಾರತ ಪ್ರವಾಸದ ವೇಳೆ ನಡೆಯುವ ಟೆಸ್ಟ್‌ ಪಂದ್ಯಗಳಿಗೆ ಸೀಮಿತ ಸಂಖ್ಯೆಯ ವೀಕ್ಷಕರಿಗೆ ಅವಕಾಶ ನೀಡಲು “ಕ್ರಿಕೆಟ್‌ ಆಸ್ಟ್ರೇಲಿಯ’ ನಿರ್ಧರಿಸಿದೆ. ಆಸ್ಟ್ರೇಲಿಯ ಸರಕಾರ ಹಾಗೂ ರಾಜ್ಯ ಸರಕಾರಗಳ ನಿಯಮಾನುಸಾರ ಈ ನಿರ್ಧಾರಕ್ಕೆ ಬರಲಾಗಿದೆ.

Advertisement

ಭಾರತ-ಆಸ್ಟ್ರೇಲಿಯ ನಡುವಿನ ಮೊದಲ ಟೆಸ್ಟ್‌ ಅಡಿಲೇಡ್‌ನ‌ಲ್ಲಿ ನಡೆಯಲಿದ್ದು, ದಿನಕ್ಕೆ 27 ಸಾವಿರ ವೀಕ್ಷಕರನ್ನು ಸ್ಟೇಡಿಯಂಗೆ ಬಿಡಲಾಗುವುದು. ಇದು ಕ್ರೀಡಾಂಗಣದ ಒಟ್ಟು ಸಾಮರ್ಥ್ಯದ ಅರ್ಧದಷ್ಟಾಗಿರುತ್ತದೆ. ಬಾಕ್ಸಿಂಗ್‌ ಡೇ ಟೆಸ್ಟ್‌ ಮೆಲ್ಬರ್ನ್ನಲ್ಲೇ ನಡೆಯುವುದು ಬಹುತೇಕ ಖಾತ್ರಿಯಾಗಿದ್ದು, ವಿಕ್ಟೋರಿಯಾ ಸರಕಾರ ದಿನಕ್ಕೆ 25 ಸಾವಿರ ವೀಕ್ಷಕರ ಪ್ರವೇಶಕ್ಕೆ ಅನುಮತಿ ನೀಡಿದೆ.

ಸಿಡ್ನಿಯಲ್ಲಿ ಸಾಗುವ ನ್ಯೂ ಇಯರ್‌ ಟೆಸ್ಟ್‌ ಪಂದ್ಯದ ವೇಳೆಯೂ ಅರ್ಧದಷ್ಟು ಪ್ರೇಕ್ಷಕರು ಪಂದ್ಯ ವೀಕ್ಷಿಸಬಹುದಾಗಿದೆ. ಆಗ ದಿನಂಪ್ರತಿ 23 ಸಾವಿರ ಮಂದಿ ಸ್ಟೇಡಿಯಂನಲ್ಲಿ ಉಪಸ್ಥಿತರಿರುತ್ತಾರೆ.

ಬ್ರಿಸ್ಬೇನ್‌ನಲ್ಲಿ ನಡೆಯುವ ಅಂತಿಮ ಟೆಸ್ಟ್‌ ಪಂದ್ಯದ ವೇಳೆ ದಿನಕ್ಕೆ 30 ಸಾವಿರ ಅಥವಾ “ಗಾಬಾ ಸ್ಟೇಡಿಯಂ’ ಸಾಮರ್ಥ್ಯದ ಶೇ. 75ರಷ್ಟು ವೀಕ್ಷಕರನ್ನು ಒಳಬಿಡಲಾಗುವುದು.

ನ. 20ರಿಂದ ಟಿಕೆಟ್‌ ಮಾರಾಟ
ಮೊದಲು ನ. 19ರಿಂದ ಆಸ್ಟ್ರೇಲಿಯದ ಕ್ರಿಕೆಟ್‌ ಕುಟುಂಬದವರಿಗೆ ಟಿಕೆಟ್‌ ವಿತರಿಸಲಾಗುವುದು. 24 ಗಂಟೆಗಳ ಬಳಿಕ ಸಾರ್ವಜನಿಕರಿಗೆ ಟಿಕೆಟ್‌ ಕೌಂಟರ್‌ ತೆರೆಯಲಿದೆ. ಟಿಕೆಟ್‌ ದರದಲ್ಲಿ ಯಾವುದೇ ಏರಿಕೆ ಇಲ್ಲ. ದೊಡ್ಡವರಿಗೆ 30 ಡಾಲರ್‌, ಮಕ್ಕಳಿಗೆ 10 ಡಾಲರ್‌ ನಿಗದಿಗೊಳಿಸಲಾಗಿದೆ ಎಂದು “ಕ್ರಿಕೆಟ್‌ ಆಸ್ಟ್ರೇಲಿಯ’ ಪ್ರಕಟನೆಯಲ್ಲಿ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next