Advertisement
ಮುಂಬಯಿಯಲ್ಲಿ ಟೀಮ್ ಇಂಡಿಯಾದ ಶೋಚನೀಯ ಆಟ ಕಂಡಾಗ ರಾಜ್‌ಕೋಟ್‌ನಲ್ಲಿ ಏನು ಕಾದಿದೆಯೋ ಎಂಬ ಆತಂಕ ಎದುರಾದದ್ದು ಸಹಜ. ಆದರೆ ಮೈ ಕೊಡವಿಕೊಂಡು ಮೇಲೆದ್ದು ನಿಂತ ಕೊಹ್ಲಿ ಪಡೆ ಇಲ್ಲಿ ಕಾಂಗರೂಗಳನ್ನು ಬೇಟೆಯಾಡಿಯೇ ಬಿಟ್ಟಿತು. ದೊಡ್ಡ ಮೊತ್ತದ ಮೇಲಾಟದಲ್ಲಿ 36 ರನ್ ಗೆಲುವು ಸಾಧಿಸಿದ ಭಾರತ ವೀಗ ಹೊಸ ಹುರುಪಿನಲ್ಲಿದೆ. ಆದರೆ ಸರಣಿ ಗೆಲುವಿನ ಅವಕಾಶ 50-50 ಎಂದೇ ಹೇಳಬೇಕು.
ರಾಜ್‌ಕೋಟ್‌ನಲ್ಲಿ ಭಾರತದ ಬ್ಯಾಟಿಂಗ್ ಕಾಂಬಿನೇಶನ್ ಯಶಸ್ವಿಯಾದ್ದರಿಂದ ದೊಡ್ಡ ಮೊತ್ತ ದಾಖಲಾಯಿತೆಂಬುದು ರಹಸ್ಯವೇನಲ್ಲ. ಕೊಹ್ಲಿ ಪುನಃ ವನ್‌ಡೌನ್‌ನಲ್ಲಿ ಬಂದು ಯಶಸ್ಸು ಕಂಡದ್ದು, ರಾಹುಲ್ 5ನೇ ಕ್ರಮಾಂಕದಲ್ಲಿ ಕ್ಲಿಕ್ ಆದದ್ದು, ಧವನ್-ರೋಹಿತ್ ಭದ್ರ ಬುನಾದಿ ನಿರ್ಮಿಸಿದ್ದೆಲ್ಲ ಭಾರತದ ಯಶಸ್ವೀ ಅಭಿಯಾನಕ್ಕೆ ಕಾರಣ. ಬೌಲಿಂಗ್ ವಿಚಾರಕ್ಕೆ ಬಂದಾಗ ಶಮಿ, ಕುಲದೀಪ್, ಸೈನಿ ಅವರೆಲ್ಲ ಸರಿಯಾದ ಹೊತ್ತಿನಲ್ಲೇ “ಬ್ರೇಕ್ ಥ್ರೂ’ ಒದಗಿಸಿ ಕಾಂಗರೂಗೆ ಕಡಿವಾಣ ಹಾಕಿದರು. ಮುಂಬಯಿಯಲ್ಲಿ ಬರಿಗೈಯಲ್ಲಿ ಮರಳಿದ್ದ ಭಾರತದ ಬೌಲರ್, ಮುಂದಿನ ಮುಖಾಮುಖೀಯಲ್ಲೇ ಬಲಿಷ್ಠ ಆಸ್ಟ್ರೇಲಿಯವನ್ನು ಆಲೌಟ್ ಮಾಡಿದ್ದು ಸಾಮಾನ್ಯ ಸಾಧನೆಯೇನಲ್ಲ.
Related Articles
ಬೆಂಗಳೂರಿನಲ್ಲಿ ಮೊದಲು ಬ್ಯಾಟಿಂಗ್ ನಡೆಸಿ ಬೃಹತ್ ಮೊತ್ತ ಪೇರಿಸಿದ ತಂಡ ಮೇಲುಗೈ ಸಾಧಿಸುವ ಸಾಧ್ಯತೆ ಅಧಿಕ ಎಂಬುದೊಂದು ಲೆಕ್ಕಾಚಾರ. ಇಲ್ಲಿ ದೊಡ್ಡ ಸ್ಕೋರ್ ಅಸಾಧ್ಯವೇನಲ್ಲ. ಚಿನ್ನಸ್ವಾಮಿ ಸ್ಟೇಡಿಯಂನ ಚಿಕ್ಕ ಬೌಂಡರಿ ಬ್ಯಾಟ್ಸ್‌ಮನ್‌ಗಳ ಪಾಲಿಗೆ ಸ್ವರ್ಗವಾಗಿದೆ. ಭಾರತ-ಆಸ್ಟ್ರೇಲಿಯ ನಡುವೆ ಇಲ್ಲಿ ಆಡಲಾದ ಕಳೆದೆರಡು ಪಂದ್ಯಗಳಲ್ಲಿ ಕ್ರಮವಾಗಿ 709 ಹಾಗೂ 647 ರನ್ ಹರಿದು ಬಂದುದನ್ನು ಮರೆಯುವಂತಿಲ್ಲ.
Advertisement
ಆದರೆ ಭಾರತಕ್ಕೆ ಆರಂಭಿಕರಾದ ಶಿಖರ್ ಧವನ್ ಮತ್ತು ರೋಹಿತ್ ಶರ್ಮ ಅವರ ಫಿಟ್‌ನೆಸ್ ಬಗ್ಗೆ ಸಣ್ಣ ಅನುಮಾನವಿದೆ. ಇಬ್ಬರೂ ರಾಜ್‌ಕೋಟ್ ಪಂದ್ಯದ ವೇಳೆ ಗಾಯಾಳಾಗಿದ್ದಾರೆ. ಧವನ್ ಪಕ್ಕೆಲುಬಿಗೆ ಚೆಂಡು ಬಡಿದರೆ, ರೋಹಿತ್ ಫೀಲ್ಡಿಂಗ್ ವೇಳೆ ಭುಜಕ್ಕೆ ಏಟು ಮಾಡಿ ಕೊಂಡಿದ್ದರು. “ಇಬ್ಬರೂ ಉತ್ತಮ ರೀತಿಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಪಂದ್ಯದ ಆರಂಭಕ್ಕೂ ಮುನ್ನವಷ್ಟೇ ಇವರು ಆಡುವ ಸಾಧ್ಯತೆ ಕುರಿತು ಸೂಕ್ತ ನಿರ್ಧಾರಕ್ಕೆ ಬರಲಾಗುವುದು’ ಎಂಬುದಾಗಿ ಬಿಸಿಸಿಐ ತನ್ನ ಪ್ರಕಟನೆಯಲ್ಲಿ ತಿಳಿಸಿದೆ.
ಐಪಿಎಲ್‌ನಲ್ಲಿ ಆರ್‌ಸಿಬಿಯನ್ನು ಪ್ರತಿನಿಧಿಸುವ ಯಜುವೇಂದ್ರ ಚಹಲ್‌ಗೆ ಇಲ್ಲಿ ಅವಕಾಶ ಸಿಕ್ಕೀತೇ ಎಂಬುದೊಂದು ಕುತೂಹಲ.
ರಾಹುಲ್ ಯಶಸ್ಸುರಾಜ್ಕೋಟ್ನಲ್ಲಿ ಭಾರತಕ್ಕೆ ಲಭಿಸಿದ ಭರ್ಜರಿ ಲಾಭವೆಂದರೆ ಕೆ.ಎಲ್. ರಾಹುಲ್ ಅವರ ಯಶಸ್ಸು. ಮೊದಲ ಸಲ 5ನೇ ಕ್ರಮಾಂಕದಲ್ಲಿ ಬ್ಯಾಟ್ ಹಿಡಿದು ಬಂದ ಅವರು 150 ಪ್ಲಸ್ ಸ್ಟ್ರೈಕ್‌ರೇಟ್‌ನಲ್ಲಿ ರನ್ ಪೇರಿಸಿ ಭಾರತದ ಭಾರೀ ಮೊತ್ತಕ್ಕೆ ಕಾರಣರಾದರು. ಇದರೊಂದಿಗೆ ತಾನು ಯಾವ ಸವಾಲಿಗೂ ಸೈ ಎಂಬುದನ್ನು ಸಾಬೀತುಪಡಿಸಿದರು. ಕಳೆದ 9 ತಿಂಗಳಿಂದ ರಾಹುಲ್ ನಾನಾ ಸವಾಲಿಗೆ ತನ್ನನ್ನು ಒಡ್ಡಿಕೊಳ್ಳಬೇಕಾಯಿತು. ಅವರನ್ನು ಓಪನರ್ ಆಗಿ ಆಡಿಸುವ ಜತೆಗೆ 3, 4 ಹಾಗೂ 5ನೇ ಕ್ರಮಾಂಕದಲ್ಲೂ ಬ್ಯಾಟಿಂಗಿಗೆ ಕಳುಹಿಸಲಾಯಿತು. ಕೀಪಿಂಗ್ ಜವಾಬ್ದಾರಿಯನ್ನೂ ವಹಿಸಲಾಯಿತು. ರಾಹುಲ್ ಎಲ್ಲ ಸವಾಲುಗಳನ್ನೂ ಮೆಟ್ಟಿ ನಿಂತರು. ಪಂತ್ ಗೈರಲ್ಲಿ ಕೀಪಿಂಗ್ ನಡೆಸಿ ಅಪಾಯಕಾರಿ ಫಿಂಚ್ ಅವರನ್ನು ಸ್ಟಂಪ್ಡ್ ಮಾಡಿದ್ದು ರಾಹುಲ್ ಸಾಹಸಕ್ಕೊಂದು ನಿದರ್ಶನ. ಅವರೀಗ, ಸರಣಿಗೂ ಮೊದಲು ಕಾಡುತ್ತಿದ್ದ ಎಲ್ಲ ಪ್ರಶ್ನೆಗಳಿಗೂ ಉತ್ತರವಾಗಿದ್ದಾರೆ. ತಂಡದ ಹಿತದೃಷ್ಟಿಯಿಂದ ಇದೊಂದು ಸಕಾರಾತ್ಮಕ ಬೆಳವಣಿಗೆ ಎಂಬುದು ಕ್ಯಾಪ್ಟನ್ ಕೊಹ್ಲಿಯ ಶಾಬಾಸ್‌ಗಿರಿ. ಹ್ಯಾಝಲ್‌ವುಡ್‌ಗೆ ಅವಕಾಶ?
ಆಸ್ಟ್ರೇಲಿಯ ಮೇಲುಗೈ ಸಾಧಿಸಬೇಕಾದರೆ ಬ್ಯಾಟಿಂಗಿಗಿಂತ ಮಿಗಿಲಾಗಿ ಬೌಲಿಂಗ್‌ನಲ್ಲಿ ಭಾರೀ ಸುಧಾರಣೆ ಕಾಣಬೇಕಿದೆ. ಮುಖ್ಯವಾಗಿ, ರಾಜ್‌ಕೋಟ್‌ನಲ್ಲಿ ದುಬಾರಿಯಾಗಿದ್ದ ಸ್ಟಾರ್ಕ್ ಮತ್ತು ಕಮಿನ್ಸ್ ಲಯ ಸಾಧಿಸಬೇಕಿದೆ. ರಿಚರ್ಡ್‌ಸನ್ ಬದಲು ಹ್ಯಾಝಲ್‌ವುಡ್ ಆಡುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಸಂಭಾವ್ಯ ತಂಡಗಳು
ಭಾರತ
ಶಿಖರ್ ಧವನ್, ರೋಹಿತ್ ಶರ್ಮ, ವಿರಾಟ್ ಕೊಹ್ಲಿ (ನಾಯಕ), ಶ್ರೇಯಸ್ ಅಯ್ಯರ್, ಕೆ.ಎಲ್. ರಾಹುಲ್, ಮನೀಷ್ ಪಾಂಡೆ, ರವೀಂದ್ರ ಜಡೇಜ, ಕುಲದೀಪ್ ಯಾದವ್, ನವದೀಪ್ ಸೈನಿ, ಮೊಹಮ್ಮದ್ ಶಮಿ, ಜಸ್‌ಪ್ರೀತ್ ಬುಮ್ರಾ.
ಆಸ್ಟ್ರೇಲಿಯ
ಆರನ್ ಫಿಂಚ್ (ನಾಯಕ), ಡೇವಿಡ್ ವಾರ್ನರ್, ಮಾರ್ನಸ್ ಲಬುಶೇನ್, ಸ್ಟೀವನ್ ಸ್ಮಿತ್, ಅಲೆಕ್ಸ್ ಕ್ಯಾರಿ, ಆ್ಯಶrನ್ ಟರ್ನರ್, ಆ್ಯಶrನ್ ಅಗರ್, ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್, ಕೇನ್ ರಿಚರ್ಡ್‌ಸನ್/ಜೋಶ್ ಹ್ಯಾಝಲ್‌ವುಡ್, ಆ್ಯಡಂ ಝಂಪ.