Advertisement

ಇಂದಿನಿಂದ ಭಾರತ-ಆಸೀಸ್‌ ಏಕದಿನ ಸರಣಿ ಆರಂಭ: ಮೊದಲ ಪಂದ್ಯಕ್ಕೆ ಹಾರ್ದಿಕ್‌ ನಾಯಕ

11:49 PM Mar 16, 2023 | Team Udayavani |

ಮುಂಬೈ: ಪ್ರವಾಸಿ ಆಸ್ಟ್ರೇಲಿಯ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿ ಶುಕ್ರವಾರದಿಂದ ಆರಂಭವಾಗಲಿದ್ದು, ಟೆಸ್ಟ್‌ ಸರಣಿಯಂತೆ ಇಲ್ಲಿಯ ಭಾರತೀಯ ತಂಡವು ಸರಣಿ ಗೆಲುವಿನ ನಿರೀಕ್ಷೆ ಇಟ್ಟುಕೊಂಡಿದೆ. ಈ ಸರಣಿ ವೇಳೆ ತಾರಾ ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಅವರ ನಾಯಕತ್ವ ಪರೀಕ್ಷೆಗೊಳಪಡಲಿದೆ. ಮುಂಬರುವ ವಿಶ್ವಕಪ್‌ಗೆ ಭಾರತದ ಸಿದ್ಧತೆ ಬಗ್ಗೆ ಗಮನ ಹರಿಸಲಾಗುತ್ತದೆ.

Advertisement

ಕೌಟುಂಬಕ ಬದ್ಧತೆಯಿಂದಾಗಿ ರೋಹಿತ್‌ ಶರ್ಮ ಅವರ ಅನುಪಸ್ಥಿತಿಯಲ್ಲಿ ಹಾರ್ದಿಕ್‌ ತಂಡದ ನಾಯಕತ್ವ ವಹಿಸಲಿದ್ದಾರೆ. ಅಹರ್ನಿಶಿಯಾಗಿ ನಡೆಯುವ ಈ ಪಂದ್ಯವು ನಾಯಕರಾಗಿ ಪಾಂಡ್ಯ ಅವರಿಗಿದು ಮೊದಲನೆಯದು. ಆದರೆ ಅವರು ಟಿ20 ಮಾದರಿಯಲ್ಲಿ ತಂಡದ ನಾಯಕತ್ವ ವಹಿಸಿದ್ದರು.

ಏಕದಿನದತ್ತ ಗಮನ: ಟೆಸ್ಟ್‌ ಸರಣಿ ಗೆದ್ದು ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲಿಗೇರಿದ್ದ ಭಾರತ ಇದೀಗ ತನ್ನ ಗಮನವನ್ನು ಈ ವರ್ಷಾಂತ್ಯ ನಡೆಯುವ ಏಕದಿನ ವಿಶ್ವಕಪ್‌ನತ್ತ ಹರಿಸಬೇಕಾಗಿದೆ. ಅದಕ್ಕಾಗಿ ಈ ಏಕದಿನ ಸರಣಿ ಅತ್ಯಂತ ಮಹತ್ವದ್ದಾಗಿದೆ. ಧೋನಿ ನೇತೃತ್ವದ ಭಾರತೀಯ ತಂಡ 2011ರಲ್ಲಿ ಪ್ರಶಸ್ತಿ ಗೆದ್ದಂತೆ ಈ ಬಾರಿ ರೋಹಿತ್‌ ಪಡೆಯು ಪ್ರಶಸ್ತಿ ಗೆಲ್ಲಲಿ ಎಂಬ ನಿರೀಕ್ಷೆ ಎಲ್ಲರದ್ದು ಆಗಿದೆ.

ಭಾರತವು ಈ ವರ್ಷ ತವರಿನಲ್ಲಿ ಏಕದಿನ ಸರಣಿಯಲ್ಲಿ ಅದ್ಭುತ ಆರಂಭ ಪಡೆದಿದೆ. ಶ್ರೀಲಂಕಾ ಮತ್ತು ನ್ಯೂಜಿಲೆಂಡ್‌ ವಿರುದ್ಧ ನಡೆದ ಏಕದಿನ ಸರಣಿಗಳಲ್ಲಿ ಭಾರತ ಒಟ್ಟು ಆರು ಪಂದ್ಯಗಳನ್ನು ಗೆದ್ದಿದೆ. ಇದೇ ಆತ್ಮವಿಶ್ವಾಸದಲ್ಲಿ ಭಾರತವು ಆಸ್ಟ್ರೇಲಿಯವನ್ನು ಎದುರಿಸಲಿದೆ.

ಶುಭಮನ್‌ ಶ್ರೇಷ್ಠ ನಿರ್ವಹಣೆ: ಈ ವರ್ಷ ಆಡಿದ ಆರು ಪಂದ್ಯಗಳಲ್ಲಿ ಮೂರು ಶತಕ ಸೇರಿದಂತೆ 113.40 ಸರಾಸರಿಯೊಂದಿಗೆ 567 ರನ್‌ ಗಳಿಸಿರುವ ಶುಭಮನ್‌ ಗಿಲ್‌ ಪ್ರಚಂಡ ಲಯದಲ್ಲಿದ್ದಾರೆ. ರೋಹಿತ್‌ ಶರ್ಮ ಅವರ ಅನುಪಸ್ಥಿತಿಯಲ್ಲಿ ಅವರು ಇನಿಂಗ್ಸ್‌ ಆರಂಭಿಸಿ ತಂಡವನ್ನು ಆಧರಿಸುವ ಸಾಧ್ಯತೆಯಿದೆ. ಸೂರ್ಯಕುಮಾರ್‌ ಯಾದವ್‌, ವಿರಾಟ್‌ ಕೊಹ್ಲಿ, ರವೀಂದ್ರ ಜಡೇಜ ಅವರಿಂದಲೂ ಉತ್ತಮ ನಿರ್ವಹಣೆ ನಿರೀಕ್ಷೆ ಮಾಡಲಾಗಿದೆ. ಕೊಹ್ಲಿ ಅವರು ಆಸ್ಟ್ರೇಲಿಯದ ಲೆಗ್‌ಸ್ಪಿನ್ನರ್‌ ಆ್ಯಡಂ ಝಂಪ ಅವರನ್ನು ಹೇಗೆ ಎದುರಿಸುತ್ತಾರೆ ಎಂಬುದನ್ನು ನೋಡಬೇಕಾಗಿದೆ.

Advertisement

ಬುಧವಾರ ನಡೆದ ತರಬೇತಿ ಅವಧಿಯಲ್ಲಿ ಕುಲದೀಪ್‌ ಯಾದವ್‌ ಮತ್ತು ಯಜುವೇಂದ್ರ ಚಹಲ್‌ ಬಹಳಷ್ಟು ಹೊತ್ತು ಬೌಲಿಂಗ್‌ ಅಭ್ಯಾಸ ನಡೆಸಿದ್ದಾರೆ. ಅವರಿಬ್ಬರ ವಿಕೆಟ್‌ ಪಡೆಯುವ ಕೌಶಲ ಮತ್ತು ಬಿಳಿಯ ಚೆಂಡಿನ ಕ್ರಿಕೆಟ್‌ನಲ್ಲಿ ಅವರ ಪ್ರಾಬಲ್ಯವನ್ನು ಗಮನಿಸಿದರೆ ಈ ಸರಣಿಯಲ್ಲೂ ಅವರು ತಂಡದ ಪ್ರಮುಖ ಅಸ್ತ್ರವಾಗಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಕಳೆದ ಐದು ಪಂದ್ಯಗಳಿಂದ ಅವರು 11 ವಿಕೆಟ್‌ ಕಿತ್ತಿರುವ ಅವರು ಉತ್ತಮ ಸ್ಪಿನ್ನರ್‌ ಆಗಿದ್ದರೆ ಮೊಹಮ್ಮದ್‌ ಸಿರಾಜ್‌ 14 ವಿಕೆಟ್‌ ಪಡೆದು ಯಶಸ್ವಿ ವೇಗಿ ಎಂದೆನಿಸಿಕೊಂಡಿದ್ದಾರೆ.

ಆಸ್ಟ್ರೇಲಿಯ ಬಲಿಷ್ಠ: ಐದು ಬಾರಿ ವಿಶ್ವಕಪ್‌ ಗೆದ್ದಿರುವ ಆಸ್ಟ್ರೇಲಿಯ ಏಕದಿನ ಕ್ರಿಕೆಟ್‌ನ ಬಲಿಷ್ಠ ತಂಡಗಳಲ್ಲಿ ಒಂದಾಗಿದೆ. ನಾಯಕ ಪ್ಯಾಟ್‌ ಕಮಿನ್ಸ್‌ ಅವರ ಅನುಪಸ್ಥಿತಿಯ ಹೊರತಾಗಿಯೂ ಪ್ರವಾಸಿ ತಂಡ ಕೆಲವು ಸ್ಫೋಟಕ ಆಟಗಾರರನ್ನು ಹೊಂದಿದೆ. ಹೀಗಾಗಿ ಭಾರತ ತಂಡ ಎಚ್ಚರಕೆ ವಹಿಸಿ ಆಡಬೇಕಾಗಿದೆ. ಅನುಭವಿ ಸ್ಟೀವನ್‌ ಸ್ಮಿತ್‌ ತಂಡವನ್ನು ಮುನ್ನಡೆಸಲಿದ್ದಾರೆ. ಅವರಲ್ಲದೇ ಡೇವಿಡ್‌ ವಾರ್ನರ್‌, ಟ್ರ್ಯಾವಿಸ್‌ ಹೆಡ್‌, ಮಾರ್ನಸ್‌ ಲಬುಶೇನ್‌, ಮಾರ್ಕಸ್‌ ಸ್ಟಾಯಿನಿಸ್‌ ಬ್ಯಾಟಿಂಗ್‌ನಲ್ಲಿ ಮಿಂಚುವ ಸಾಧ್ಯತೆಯಿದೆ.

ಭಾರತ ವಿರುದ್ಧ ಆಸ್ಟ್ರೇಲಿಯ ಇಲ್ಲಿ ಈ ಹಿಂದೆ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯ 10 ವಿಕೆಟ್‌ಗಳ ಜಯ ಸಾಧಿಸಿತ್ತು. ವಾರ್ನರ್‌ ಮತ್ತು ಏರಾನ್‌ ಫಿಂಚ್‌ ಅವರ ಅಜೇಯ ಶತಕದ ನೆರವಿನಿಂದ ಆಸ್ಟ್ರೇಲಿಯ ಭರ್ಜರಿ ಗೆಲುವು ದಾಖಲಿಸಿತ್ತು.

ಉಭಯ ತಂಡಗಳು
ಭಾರತ: ಹಾರ್ದಿಕ್‌ ಪಾಂಡ್ಯ (ನಾಯಕ), ಶುಭಮನ್‌ ಗಿಲ್‌, ವಿರಾಟ್‌ ಕೊಹ್ಲಿ, ಶ್ರೇಯಸ್‌ ಐಯ್ಯರ್‌, ಸೂರ್ಯಕುಮಾರ್‌ ಯಾದವ್‌, ಕೆ.ಎಲ್‌.ರಾಹುಲ್‌, ಇಶಾನ್‌ ಕಿಶನ್‌, ರವೀಂದ್ರ ಜಡೇಜ, ಕುಲದೀಪ್‌ ಯಾದವ್‌, ವಾಷಿಂಗ್ಟನ್‌ ಸುಂದರ್‌, ಯುಜವೇಂದ್ರ ಚಹಲ್‌, ಮೊಹಮ್ಮದ್‌ ಶಮಿ, ಮೊಹಮ್ಮದ್‌ ಸಿರಾಜ್‌, ಉಮ್ರಾನ್‌ ಮಲಿಕ್‌, ಶಾರ್ದೂಲ್‌ ಠಾಕೂರ್‌, ಅಕ್ಷರ್‌ ಪಟೇಲ್‌, ಜೈದೇವ್‌ ಉನಾದ್ಕಟ್‌.
ಆಸ್ಟ್ರೇಲಿಯ: ಸ್ಟೀವನ್‌ ಸ್ಮಿತ್‌ (ನಾಯಕ), ಡೇವಿಡ್‌ ವಾರ್ನರ್‌, ಟ್ರ್ಯಾವಿಸ್‌ ಹೆಡ್‌, ಮಾರ್ನಸ್‌ ಲಬುಶೇನ್‌, ಮಿಚೆಲ್‌ ಮಾರ್ಷ್‌, ಮಾರ್ಕಸ್‌ ಸ್ಟಾಯಿನಿಸ್‌, ಅಲೆಕ್ಸ್‌ ಕ್ಯಾರೀ, ಗ್ಲೆನ್‌ ಮ್ಯಾಕ್ಸ್‌ವೆಲ್‌, ಕ್ಯಾಮೆರಾನ್‌ ಗ್ರೀನ್‌, ಜೋಶ್‌ ಇಂಗ್ಲಿಷ್‌, ಶಾನ್‌ ಅಬೋಟ್‌, ಆಸ್ಟನ್‌ ಅಗರ್‌, ಮಿಚೆಲ್‌ ಸ್ಟಾರ್ಕ್‌, ನಥನ್‌ ಇಲ್ಲಿಸ್‌, ಆ್ಯಡಂ ಝಂಪ.
ಪಂದ್ಯಾರಂಭ: ಮ.1.30
ನೇರಪ್ರಸಾರ: ಸ್ಟಾರ್‌ ನ್ಪೋರ್ಟ್ಸ್

Advertisement

Udayavani is now on Telegram. Click here to join our channel and stay updated with the latest news.

Next