Advertisement
ಮಂಗಳವಾರವಷ್ಟೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು “ತಿರಂಗಾ ಉತ್ಸವ’ಕ್ಕೆ ಚಾಲನೆ ನೀಡಿದ್ದಾರೆ. ಸದ್ಯದಲ್ಲೇ ಮನೆ -ಮನೆಗಳಲ್ಲೂ ಧ್ವಜ ಹಾರಾಟ ನಡೆಯಲಿದೆ. ಇದರ ನಡುವೆಯೇ, ದೆಹಲಿಯಲ್ಲಿ ಬುಧವಾರ ಸಂಸದರು ತಿರಂಗಾ ಬೈಕ್ ರ‍್ಯಾಲಿ ನಡೆಸಿದ್ದಾರೆ.
ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಆ.5ರಿಂದ 15ರವರೆಗೆ ದೇಶದ ಎಲ್ಲ ಸಂರಕ್ಷಿತ ಸ್ಮಾರಕಗಳು ಮತ್ತು ಐತಿಹಾಸಿಕ ತಾಣಗಳಿಗೆ ಉಚಿತ ಪ್ರವೇಶ ಕಲ್ಪಿಸುವುದಾಗಿ ಸಂಸ್ಕೃತಿ ಸಚಿವಾಲಯ ಘೋಷಿಸಿದೆ. ಇದೇ ವೇಳೆ, ಜನಪ್ರಿಯ ನಟ ಪ್ರೇಮ್ ವತ್ಸ್ ಅವರನ್ನು “ಅಜಾದಿ ಕಾ ಅಮೃತ್ ಮಹೋತ್ಸವ’ದ ರಾಯಭಾರಿಯನ್ನಾಗಿ ಸಚಿವಾಲಯ ನೇಮಿಸಿದೆ.
Related Articles
ಸಾಮಾಜಿಕ ಜಾಲತಾಣ ಖಾತೆಗಳ ಡೀಪಿ ಬದಲಿಸುವಂತೆ ಪ್ರಧಾನಿ ಮೋದಿ ಕರೆ ನೀಡಿದ ಬೆನ್ನಲ್ಲೇ ಕಾಂಗ್ರೆಸ್ ನಾಯಕರೂ ತಮ್ಮ ಪ್ರೊಫೈಲ್ ಪಿಕ್ಟರ್‌ಗಳನ್ನು ಬದಲಿಸಿದ್ದಾರೆ. ವಿಶೇಷವೇನೆಂದರೆ, ಇವರೆಲ್ಲರೂ ಡೀಪಿಗಳಲ್ಲಿ “ಮಾಜಿ ಪ್ರಧಾನಿ ದಿವಂಗತ ಜವಾಹರಲಾಲ್ ನೆಹರೂ ಅವರು ತ್ರಿವರ್ಣ ಧ್ವಜವನ್ನು ಹಿಡಿದಿರುವಂಥ ಚಿತ್ರ’ವನ್ನು ಹಾಕಿಕೊಂಡಿದ್ದಾರೆ.
Advertisement
“ತ್ರಿವರ್ಣ ಧ್ವಜವು ನಮ್ಮ ದೇಶದ ಹೆಮ್ಮೆ, ಅದು ಪ್ರತಿಯೊಬ್ಬ ಭಾರತೀಯನ ಹೃದಯದಲ್ಲಿರುತ್ತದೆ’ ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ.
ರಾಹುಲ್ ಗಾಂಧಿ, ಪ್ರಿಯಾಂಕಾ ವಾದ್ರಾ, ಜೈರಾಂ ರಮೇಶ್, ಖರ್ಗೆ ಸೇರಿದಂತೆ ಎಲ್ಲ ನಾಯಕರು ಹಾಗೂ ಪಕ್ಷದ ಜಾಲತಾಣಗಳ ಖಾತೆಗಳ ಡೀಪಿಗಳಲ್ಲೂ ತಿರಂಗಾ ಕಾಣಿಸುತ್ತಿವೆ. ಇದನ್ನು ಟೀಕಿಸಿರುವ ಬಿಜೆಪಿ, “ರಾಹುಲ್ ಅವರು ತಮ್ಮ ಕುಟುಂಬದಾಚೆಗೂ ಸ್ವಲ್ಪ ನೋಡಲು ಪ್ರಯತ್ನಿಸಲಿ. ತಿರಂಗಾದೊಂದಿಗೆ ತಮ್ಮ ತಮ್ಮ ಫೋಟೋ ಹಾಕಿಕೊಳ್ಳುವ ಸ್ವಾತಂತ್ರ್ಯವನ್ನು ಪಕ್ಷದ ಸದಸ್ಯರಿಗೆ ನೀಡಲಿ’ ಎಂದು ಹೇಳಿದೆ.
ಹರ್ ಘರ್ ತಿರಂಗಾಗೆ ತಾರೆಯರ ಬೆಂಬಲಪ್ರಧಾನಿ ಮೋದಿ ಅವರು ಘೋಷಿಸಿರುವ ಹರ್ ಘರ್ ತಿರಂಗಾ ಯೋಜನೆಗೆ ಹಲವು ಸಿನಿಮಾ ತಾರೆಯರು ಬೆಂಬಲ ಘೋಷಿಸಿದ್ದಾರೆ. ಅಕ್ಷಯ್ ಕುಮಾರ್, ಆರ್. ಮಾಧವನ್, ಪ್ರಭಾಸ್, ಮಹೇಶ್ ಬಾಬು, ಸುಷ್ಮಿತಾ ಸೇನ್ ಸೇರಿದಂತೆ ಅನೇಕ ನಟ-ನಟಿಯರು ಎಲ್ಲರ ಮನೆಗಳಲ್ಲೂ ತ್ರಿವರ್ಣ ಧ್ವಜ ಹಾರಿಸುವಂತೆ ತಮ್ಮ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ. ನಮ್ಮ ಭಾರತವು ಹಲವು ಸಂಸ್ಕೃತಿ, ವೈವಿಧ್ಯಮಯ ಜನರ ನಾಡು. ಆದರೆ, ತ್ರಿವರ್ಣ ಧ್ವಜವು ಎಲ್ಲ ಭಾರತೀಯರ “ಭಾವ’. ಈ ಸ್ವಾತಂತ್ರ್ಯ ದಿನದಂದು ನಾವೆಲ್ಲರೂ ಒಗ್ಗಟ್ಟಾಗಿ, ಮನೆಗಳಲ್ಲಿ ಧ್ವಜವನ್ನು ಹಾರಿಸೋಣ ಎಂದು ಅವರೆಲ್ಲರೂ ಕರೆ ನೀಡಿದ್ದಾರೆ.