ಕೋವಿಡ್ ಅಪ್ಪಳಿಸಿದ ಮೇಲೆ ಇಡೀ ಜಗತ್ತೇ ಸುಸ್ತಾಗಿದೆ. ಇನ್ನೂ ಚೇತರಿಸಿ ಕೊಳ್ಳಲಾಗುತ್ತಿದೆ. ಪ್ರತೀ ಕ್ಷೇತ್ರಗಳೂ ಈಗಲೂ ಪೂರ್ಣ ಸಾಮರ್ಥ್ಯಕ್ಕೆ ಮರಳಲು ಪರ ದಾಡುತ್ತಿವೆ. ಇನ್ನು ಕ್ರೀಡಾಕ್ಷೇತ್ರ ಅದರಿಂದ ಹೊರತು ಎನ್ನಲಾದೀತೇ? ಜಪಾನಿನ ಟೋಕಿಯೊದಲ್ಲಿ ನಡೆಯಬೇಕಿದ್ದ ಒಲಿಂಪಿಕ್ಸ್ ಮುಂದಿನ ವರ್ಷಕ್ಕೆ ಮುಂದೂಡಲ್ಪಟ್ಟಿದೆ. ಆಗಲೂ ಅದು ನಡೆಯಲಿದೆ ಎಂಬ ವಿಶ್ವಾಸವೇನಿಲ್ಲ. ಲಕ್ಷಾಂತರ ಕೋಟಿ ರೂ. ವೆಚ್ಚ ಮಾಡಿ ಕೂಟ ಸಂಘಟಿಸಲು ಸಿದ್ಧತೆ ಮಾಡಿಕೊಂಡ ಜಪಾನ್‌ಗೆ ಇದೊಂದು ಭಾರೀ ಹೊಡೆತ. ಸಮಯಕ್ಕೆ ಸರಿಯಾಗಿ ನಡೆದಿದ್ದರೆ ಆ ಹಣವನ್ನು ವಾಪಸ್ ಪಡೆಯಲು ಅದಕ್ಕೆ ಸಾಧ್ಯವಾಗುತ್ತಿತ್ತು. ಮುಂದಿನ ವರ್ಷದಷ್ಟೊತ್ತಿಗೆ ಖರ್ಚು ಹೆಚ್ಚಾಗಲಿದೆ. ಪರಿಸ್ಥಿತಿ ಕಷ್ಟವಾಗಲಿದೆ. ಇನ್ನು ರದ್ದಾದ ರಂತೂ ಕೇಳುವುದೇ ಬೇಡ.
ಬೇರೆ ಬೇರೆ ಕ್ರೀಡೆಗಳಲ್ಲಿ ಇಷ್ಟೆಲ್ಲ ಸಮಸ್ಯೆ ಕಾಡು ತ್ತಿ ದ್ದರೂ ಕ್ರಿಕೆಟ್‌ನಲ್ಲಿ ಮಾತ್ರ ಸದ್ದಿಲ್ಲದೇ ಪರಿಸ್ಥಿತಿ ಬದಲಾಗುತ್ತಿದೆ! ಯುಎಇಯಲ್ಲಿ 60 ದಿನಗಳ ಕಾಲ ಇಡೀ ಐಪಿಎಲ್ ಅನ್ನು ಬಿಸಿಸಿಐ ಪೂರ್ಣ ಜೈವಿಕ ಸುರಕ್ಷ ವಲಯದಲ್ಲೇ ಸಂಘಟಿಸಿ ಜಗತ್ತಿಗೆ ಬೇರೆ ಸಂದೇಶ ನೀಡಿತು. ಟೀವಿ, ಅಂತರ್ಜಾಲ ವೀಕ್ಷಣೆ ದೃಷ್ಟಿಯಲ್ಲಿ ಇದು ದಾಖಲೆ ಮಾಡಿತು. ಬಿಸಿಸಿಐ ಆದಾಯಕ್ಕೂ ಧಕ್ಕೆಯಾಗಲಿಲ್ಲ. ಆದರೆ ಇಲ್ಲಿ ಮೈದಾನಕ್ಕೆ ಪ್ರೇಕ್ಷಕರ ಪ್ರವೇಶವಿರಲಿಲ್ಲ. ಸದ್ಯ ಭಾರತ, ಆಸ್ಟ್ರೇಲಿಯ ಪ್ರವಾಸದಲ್ಲಿದೆ. ಇಲ್ಲಿ ಪ್ರೇಕ್ಷಕರಿಗೂ ಪ್ರವೇಶ ನೀಡಿ ಆಸ್ಟ್ರೇಲಿಯ ಕ್ರಿಕೆಟ್ ಮಂಡಳಿ ಹೊಸತೊಂದು ಸಂದೇಶ ನೀಡಿದೆ. ಇನ್ನೂ ಬಹಳ ಕಾಲ ಕೊರೊನಾಕ್ಕೆ ಹೆದರಿ ಕುಳಿತುಕೊಳ್ಳಲು ಸಾಧ್ಯವಿಲ್ಲ ಎನ್ನುವುದು ಇಲ್ಲಿ ನಿಚ್ಚಳವಾಗಿ ಕಂಡುಬರುತ್ತಿರುವ ಸತ್ಯ.
ನವೆಂಬರ್ 27ರಿಂದ ಭಾರತ- ಆಸ್ಟ್ರೇಲಿಯ ನಡುವೆ ಮೂರು ಏಕದಿನ ಪಂದ್ಯಗಳು ನಡೆದವು. ಸಿಡ್ನಿಯಲ್ಲಿ ನಡೆದ ಮೊದಲೆರಡು ಪಂದ್ಯಗಳಲ್ಲಿ ಸಾಮಾಜಿಕ ಅಂತರದ ಲೆಕ್ಕಾಚಾರದಲ್ಲಿ ಶೇ.50ರಷ್ಟು ಪ್ರೇಕ್ಷ ಕರಿಗೆ ಪ್ರವೇಶ ನೀಡಲಾಗಿತ್ತು. ಕ್ಯಾನ್‌ಬೆರಾದಲ್ಲಿ ನಡೆದ ಮೂರನೇ ಪಂದ್ಯದಲ್ಲಿ ಶೇ.65ರಷ್ಟು ಪ್ರೇಕ್ಷಕರು ಹಾಜರಿದ್ದರು. ಇಲ್ಲಿ ಕಟ್ಟುನಿಟ್ಟಾಗಿ ಸಾಮಾಜಿಕ ಅಂತರವಿರಬೇಕೆಂದು ಹೇಳಲಾಗಿದ್ದರೂ ಪಂದ್ಯ ನಡೆಯುವಾಗ ಆಗಿದ್ದೇ ಬೇರೆ. ಪ್ರೇಕ್ಷಕರು ಎಲ್ಲವನ್ನೂ ಮರೆತು ಮೈಗೆ ಮೈ ತಾಗಿಸಿ ಕುಣಿದು ಕುಪ್ಪಳಿಸಿದರು. ಅದನ್ನು ಗಮನಿಸಿಯೂ ಆಸ್ಟ್ರೇಲಿಯದ ಸ್ಥಳೀಯ ಸರಕಾರಗಳು ಸುಮ್ಮನಿವೆ. ಈ ಬಗ್ಗೆ ಕಠಿನ ಕ್ರಮ ಕೈಗೊಂಡ ಬಗ್ಗೆ ಯಾವುದೇ ವರದಿಗಳು ಬಂದಿಲ್ಲ. ಡಿ.4ರಿಂದ ಟಿ20 ಸರಣಿ ಆರಂಭವಾಗಿದೆ. ಮಂಗಳವಾರ 3ನೇ ಮತ್ತು ಅಂತಿಮ ಪಂದ್ಯವಿದೆ. ಇಲ್ಲೂ ಪ್ರೇಕ್ಷಕರಿಗೆ ಪ್ರವೇಶವಿದೆ. ಪರಿಸ್ಥಿತಿಯೇನೂ ಬದಲಾಗಿಲ್ಲ.
ಇವೆಲ್ಲ ವಿಶ್ವ ಕ್ರೀಡಾ ಜಗತ್ತಿಗೆ ಧೈರ್ಯ, ಸಾಂತ್ವನ, ನೆಮ್ಮದಿಯನ್ನು ನೀಡಿವೆ. ಇದೇ ದಾರಿಯನ್ನು ಹಿಡಿದು ಬೇರೆಬೇರೆ ದೇಶಗಳಲ್ಲಿ ಪ್ರೇಕ್ಷಕರ ಪ್ರವೇಶಕ್ಕೆ ಅನುಮತಿ ನೀಡುವ ಬಗ್ಗೆ ಯೋಚಿಸಬಹುದು. ಭಾರತ ಏನು ಮಾಡಲಿದೆ ಎನ್ನುವುದು ಇಲ್ಲಿನ ಪ್ರಶ್ನೆ. ಸದ್ಯದ ಸ್ಥಿತಿಯಲ್ಲಿ ಬಿಸಿಸಿಐ ಅಂತಹ ಧೈರ್ಯ ಮಾಡಲಾರದು. ಅದು ರಣಜಿ ನಡೆಸಲು ಇನ್ನೂ ಯೋಚಿಸುತ್ತಿದೆ! ಆದರೆ ಈ ಕ್ರಿಕೆಟ್ ಪಂದ್ಯಗಳು ವಿಶ್ವದ ಬೇರೆಬೇರೆ ವರ್ಗಗಳಿಗೆ ಧೈರ್ಯ ಹೇಳಿವೆ. ನೀವು ಮುನ್ನುಗ್ಗಿ ಎಂದು ಪ್ರೋತ್ಸಾಹಿಸಿವೆ. ಜಗತ್ತಿನ ಆರ್ಥಿಕತೆ ಹಳಿಗೆ ಮರಳುವ ದೃಷ್ಟಿಯಿಂದ ಇದು ಮಹತ್ವದ ಬೆಳವಣಿಗೆ.