ವಿಶ್ವಸಂಸ್ಥೆ: “ಪಾಕಿಸ್ಥಾನದ್ದು ಯಾವತ್ತಿದ್ದರೂ ಮುಕುಟಾಲಂಕಾರದ ಜೀವನ. ಮೇಲೆಲ್ಲಾ ಥಳಕು ತೋರ್ಪಡಿಸುವ ಆ ರಾಷ್ಟ್ರ, ಆಂತರ್ಯದಲ್ಲಿ ಭಯೋತ್ಪಾದನೆಯಂಥ ವಿಷವನ್ನು ತುಂಬಿರುವಂಥ ದೇಶ.”
ಪಾಕಿಸ್ಥಾನದ ಪ್ರಧಾನಿ ಇಮ್ರಾನ್ ಖಾನ್ ಅವರು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಶುಕ್ರವಾರ ಭಾರತದ ವಿರುದ್ಧ ಮಾಡಿದ್ದ ಆರೋಪಗಳಿಗೆ ಭಾರತ, ಶನಿವಾರ ಸಭೆಯಲ್ಲಿ ತಾನು ಸಲ್ಲಿಸಬೇಕಿರುವ ರೈಟ್ ಟು ರಿಪ್ಲೆ„(ಪ್ರತಿಕ್ರಿಯಿಸುವ ಹಕ್ಕು) ಅಡಿ ನೀಡಿದ ಖಡಕ್ ಉತ್ತರವಿದು.
ಶುಕ್ರವಾರದ ಸಭೆಯಲ್ಲಿ ಮಾತನಾಡಿದ್ದ ಪಾಕ್ ಪ್ರಧಾನಿ ಇಮ್ರಾನ್ ಖಾನ್, ಜಮ್ಮು ಕಾಶ್ಮೀರ ವಿಚಾರವನ್ನು ಪ್ರಸ್ತಾವಿಸಿ ಪುಂಖಾನುಪುಖವಾಗಿ ಆರೋಪ ಮಾಡಿದ್ದರು. ಅದರಿಂದ ಕೆರಳಿದ ವಿಶ್ವಸಂಸ್ಥೆಯಲ್ಲಿರುವ ಭಾರತದ ಶಾಶ್ವತ ಪ್ರತಿನಿಧಿಗಳ ತಂಡದ ಕಾರ್ಯದರ್ಶಿಯಾಗಿರುವ ಮಿಜಿಟೊ ವಿನಿಟೊ ಸಭಾತ್ಯಾಗ ನಡೆಸಿದ್ದರಲ್ಲದೆ, ಶನಿವಾರದಂದು ಪ್ರತ್ಯುತ್ತರ ನೀಡುವುದಾಗಿ ತಿಳಿಸಿದ್ದರು.
ಶನಿವಾರದ ಸಮ್ಮೇಳನದಲ್ಲಿ ಮಾತನಾಡಿದ ಅವರು, “”ತಮ್ಮ ರಾಜಕೀಯ ಜೀವನದಲ್ಲಿ ಯಾವುದೇ ಸಾಧನೆ ಮಾಡದವರಿಂದ ಏನನ್ನು ನಿರೀಕ್ಷಿಸಬಹುದೋ, ಅದು ಖಾನ್ ಅವರಿಂದ ವ್ಯಕ್ತವಾಗಿದೆಯಷ್ಟೇ. ಜಾಗತಿಕ ಉಗ್ರರೆಂದು ಪರಿಗಣಿಸಲ್ಪಟ್ಟಿರುವ ಲಷ್ಕರ್ ನಾಯಕ, ಉಗ್ರ ಹಫೀಜ್ ಸಯೀದ್, ಜೈಶ್ ಉಗ್ರ ಮಸೂದ್ ಅಜರ್‌ಗೆ ಆ ದೇಶ ಆಶ್ರಯತಾಣವಾಗಿದೆ” ಎಂದರು.
“ಅಮೆರಿಕದ ಮೇಲಿನ ದಾಳಿಕೋರ ಒಸಾಮಾ ಬಿನ್ ಲಾಡೆನ್‌ನನ್ನು ಹುತಾತ್ಮ ಎಂದು ಪರಿಗಣಿಸಲು ಪಾಕಿಸ್ಥಾನದ ಸಂಸತ್ತು ಜುಲೈನಲ್ಲಿ ನಿರ್ಧಾರ ಕೈಗೊಂಡಿದೆ. 39 ವರ್ಷಗಳ ಹಿಂದೆ ದಕ್ಷಿಣ ಏಷ್ಯಾದಲ್ಲಿ ತನ್ನ ಜನರನ್ನೇ ಬರ್ಬರವಾಗಿ ಕೊಂದು ದೊಡ್ಡ ನರ ಮೇಧ ನಡೆಸಿರುವ ಆ ದೇಶ ಇಂದು ನಾಚಿಕೆ ಇಲ್ಲದಂತೆ ಬೇರೆ ದೇಶಗಳ ಮೇಲೆ ಆರೋಪ ಮಾಡುತ್ತಿದೆ” ಎಂದು ವಿನಿಟೊ, ಕಟುವಾಗಿ ಟೀಕಿಸಿದರು.
“”ವಿಶ್ವ ಸಂಸ್ಥೆಯ ಅಂಗಳದಲ್ಲಿ ಕೇವಲ ವಿಷವನ್ನೇ ಚೆಲ್ಲುವ ಮೂಲಕ ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳಿಗೆ ನಂಜು ಪಸರಿಸುವ ಕೆಲಸ ಮಾಡುತ್ತಿರುವ ಇದೇ ಇಮ್ರಾನ್ ಖಾನ್, 2019ರಲ್ಲಿ ಪಾಕಿಸ್ಥಾನದಲ್ಲಿನ್ನೂ 30,000ದಿಂದ 40,000 ಉಗ್ರರು ಇದ್ದಾರೆಂದು ಹೇಳಿದ್ದರು. ಅವರಲ್ಲಿ ಹಲವಾರು ಉಗ್ರರು ಜಮ್ಮು ಕಾಶ್ಮೀರದಲ್ಲಿ ಸಕ್ರಿಯರಾಗಿದ್ದಾರೆಂದು ಹೇಳಿದ್ದರು. ಸದಾ ಬೇರೆ ರಾಷ್ಟ್ರದ ಕಡೆ ಬೆರಳು ಮಾಡಿ ತೋರಿಸುವ ಪಾಕಿಸ್ಥಾನದಲ್ಲಿ ಅಲ್ಪಸಂಖ್ಯಾಕರ ನಾಶಕ್ಕಾಗಿಯೇ ಸೃಷ್ಟಿಯಾಗಿರುವಂಥ ವಾತಾವರಣವಿದೆ. ಅಷ್ಟೇ ಅಲ್ಲ, ತಮ್ಮದು ಕಟ್ಟಾ ಮುಸ್ಲಿಂ ರಾಷ್ಟ್ರ ಎಂದು ಹೇಳಿಕೊಳ್ಳುವ ಅದು, ತನ್ನದೇ ದೇಶದ ಮುಸ್ಲಿಂ ಪ್ರಜೆಗಳನ್ನು ಅವರು ಇಸ್ಲಾಂ ಧರ್ಮದ ಬೇರೆ ಪಂಗಡದವರು ಎಂಬ ಕಾರಣಕ್ಕಾಗಿ ಕೊಲ್ಲುವ ಹೇಯತನ ಪ್ರದರ್ಶಿಸುತ್ತದೆ” ಎಂದು ವಿನಿ ಟೊ ಝಾಡಿಸಿದರು.
ಅಲ್ಲದೆ, ಜಮ್ಮು ಕಾಶ್ಮೀರ ನಮ್ಮ ಅವಿಭಾಜ್ಯ ಅಂಗ. ತಾನು ಆಕ್ರಮಿಸಿಕೊಂಡಿರುವ ಕಾಶ್ಮೀರದ ಪ್ರಾಂತ್ಯಗಳಿಂದ ಅದು ಹಿಂದೆ ಸರಿಯಬೇಕು” ಎಂದು ಆಗ್ರಹಿಸಿದರು.
ಭಾರತಕ್ಕೆ ಭೂತಾನ್ ಬೆಂಬಲ
ವಿಶ್ವಸಂಸ್ಥೆಯ ಭದ್ರತಾ ಕೌನ್ಸಿಲ್(ಯುಎನ್‌ಎಸ್‌ಸಿ)ನಲ್ಲಿ ಭಾರತ ಶಾಶ್ವತ ರಾಯಭಾರಿಯಾಗಿರುವುದನ್ನು ಭೂತಾನ್ ಸದಾ ಬೆಂಬಲಿಸುತ್ತದೆ ಎಂದು ಆ ದೇಶದ ಪ್ರಧಾನಿ ಲೊಟಾಯ್ ಶೆರಿಂಗ್ ತಿಳಿಸಿದ್ದಾರೆ.