ಹೊಸದಿಲ್ಲಿ : 1947ರ ಬಳಿಕ ಇದೇ ಮೊದಲ ಬಾರಿಗೆ ವಿಭಿನ್ನ ದೇಶಗಳಾಗಿ ಮೂಡಿ ಬಂದಿರುವ ಭಾರತ ಮತ್ತು ಪಾಕಿಸ್ಥಾನ ಈ ವರ್ಷಾಂತ್ಯ ಜಂಟಿ ಸೇನಾ ಕವಾಯತಿನಲ್ಲಿ ಪಾಲ್ಗೊಳ್ಳಲಿವೆ.
ರಶ್ಯವು ಇದೇ ವರ್ಷ ಸೆಪ್ಟಂಬರ್‌ನಲ್ಲಿ ನಡೆಸಲಿರುವ ಶಾಂತಿ ಅಭಿಯಾನದ ಭಾಗವಾಗಿ ಈ ಸೇನಾ ಕವಾಯತು ನಡೆಯಲಿದ್ದು ಶಾಂಘೈ ಕೋ-ಅಪರೇಶನ್ ಆರ್ಗನೈಸೇಶನ್ (ಎಸ್‌ಸಿಓ) ಅಡಿ ಇತರ ಹಲವು ಭಾಗೀದಾರರೊಂದಿಗೆ ಇದು ನಡೆಯಲಿದೆ.
ಭಾರತವು 2018ರ ಶಾಂತಿ ಅಭಿಯಾನದಲ್ಲಿ ಭಾಗವಹಿಸುವುದೆಂದು ದೇಶದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬೀಜಿಂಗ್ ನಲ್ಲಿ ನಡೆದಿರುವ 15ನೇ ಎಸ್‌ಸಿಓ ರಕ್ಷಣಾ ಸಚಿವರ ಸಭೆಯಲ್ಲಿ ಮಾಡಿರುವ ತಮ್ಮ ಭಾಷಣದಲ್ಲಿ ಪ್ರಕಟಿಸಿದ್ದಾರೆ.
ಹಾಗಿದ್ದರೂ ಸೀತಾರಾಮನ್ ಅವರು ತಮ್ಮ ಭಾಷಣದಲ್ಲಿ ಸೇನಾ ಕವಾಯಿತಿಗೆ ಸಂಬಂಧಿಸಿಯಾಗಲೀ ಭಯೋತ್ಪಾದಕರಿಗೆ ದೊರಕುತ್ತಿರುವ ಮುಂದುವರಿರಿದ ನೆರವಿಗೆ ಸಂಬಂಧಿಸಿಯಾಗಲೀ ನೇರವಾಗಿ ಪಾಕಿಸ್ಥಾನವನ್ನು ಉಲ್ಲೇಖೀಸಿಲ್ಲ.
ಒಟ್ಟಿನಲ್ಲಿ ದಕ್ಷಿಣ ಏಶ್ಯದ ಅಣ್ವಸ್ತ್ರ ಸಜ್ಜಿತ ಎರಡು ದೇಶಗಳಾಗಿರುವ ಭಾರತ ಮತ್ತು ಪಾಕಿಸ್ಥಾನ ಇದೇ ಮೊದಲ ಬಾರಿಗೆ ಸೇನಾ ಕವಾಯತಿನಲ್ಲಿ ಪಾಲ್ಗೊಳ್ಳುತ್ತವೆ. ಎರಡೂ ದೇಶಗಳು ಕಳೆದ ವರ್ಷ ಎಸ್‌ಸಿಓ ಪೂರ್ಣ ಪ್ರಮಾಣದ ಸದಸ್ಯ ದೇಶಗಳಾಗಿವೆ. ರಶ್ಯ, ಚೀನ ಸೇರಿದಂತೆ ಎಲ್ಲ ಎಸ್‌ಸಿಓ ಸದಸ್ಯ ದೇಶಗಳು ಈ ಜಂಟಿ ಸೇನಾ ಕವಾಯತಿನಲ್ಲಿ ಪಾಲ್ಗೊಳ್ಳಲಿವೆ ಎಂದು ವರದಿಗಳು ತಿಳಿಸಿವೆ.