Advertisement

ಜಪಾನ್‌-ಭಾರತ ಒಪ್ಪಂದ: ಚೀನಕ್ಕೆ ಪ್ರಬಲ ಸಂದೇಶ

01:09 AM Sep 11, 2020 | mahesh |

ಭಾರತ ಮತ್ತು ಜಪಾನ್‌ ನಡುವಿನ ಮೈತ್ರಿ ಮತ್ತೂಂದು ಸ್ತರಕ್ಕೆ ಏರಿದೆ. ಇಂಡೋ-ಪೆಸಿಫಿಕ್‌ ಪ್ರದೇಶದಲ್ಲಿ ಎರಡೂ ದೇಶಗಳು ಪರಸ್ಪರ ಸೈನ್ಯ ಲಾಜಿಸ್ಟಿಕ್ಸ್‌ ಸಹಕಾರಕ್ಕೆ ಒಪ್ಪಂದ ಮಾಡಿಕೊಂಡಿರುವುದು ಐತಿಹಾಸಿಕ ನಡೆಯೇ ಸರಿ. ಹಿಂದೂ ಮಹಾಸಾಗರದಲ್ಲಿ ತನ್ನ ಬಾಹುಗಳನ್ನು ವಿಸ್ತರಿಸಲು ನಿರಂತರ ಪ್ರಯತ್ನಿಸುತ್ತಲೇ ಇರುವ ಚೀನಕ್ಕೆ ತಕ್ಕ ಪ್ರತ್ಯುತ್ತರ ನೀಡಲು ಇಂಥದ್ದೊಂದು ಒಪ್ಪಂದ ಅಗತ್ಯವಾಗಿತ್ತು. ಎರಡೂ ಸೇನೆಗಳ ನಡುವಿನ ಸಹಕಾರ, ಮಿಲಿಟರಿ ಬೇಸ್‌ಗಳ ಬಳಕೆಗೆ ಅನುಕೂಲ ಸೇರಿದಂತೆ ಅನೇಕ ಪೂರಕ ಅಂಶಗಳನ್ನು ಒಳಗೊಂಡಿರುವ ಈ ಒಪ್ಪಂದವನ್ನು ರಕ್ಷಣಾ ಪರಿಣತರು ಸ್ವಾಗತಿಸುತ್ತಿದ್ದಾರೆ.

Advertisement

ಇತ್ತೀಚಿನ ಕೆಲವು ವರ್ಷಗಳಿಂದ ಭಾರತ ಮತ್ತು ಜಪಾನ್‌ ನಡುವಿನ ಮೈತ್ರಿ ಸದೃಢವಾಗುತ್ತಾ ಸಾಗುತ್ತಿರುವುದನ್ನು ನಾವು ಗಮನಿಸುತ್ತಿದ್ದೇವೆ. ಅದರಲ್ಲೂ ನರೇಂದ್ರ ಮೋದಿ ಮತ್ತು ಶಿಂಜೋ ಅಬೆ ಸರಕಾರ ಎರಡೂ ರಾಷ್ಟ್ರಗಳ ನಡುವಿನ ಸಾಮರಿಕ, ವ್ಯಾವಹಾರಿಕ ನಂಟನ್ನು ಮತ್ತಷ್ಟು ಗಟ್ಟಿಮಾಡುವಲ್ಲಿ ಶ್ರಮಿಸುತ್ತಿದ್ದಾರೆ. ಗಮನಿಸಬೇಕಾದ ಅಂಶವೆಂದರೆ, ಈ ರೀತಿಯ ಒಪ್ಪಂದದ ಹಿಂದೆ ಚೀನದ ಉಪಟಳ, ದುರುದ್ದೇಶಗಳನ್ನು ಕಟ್ಟಿಹಾಕುವ ಉದ್ದೇಶವೂ ಪ್ರಬಲವಾಗಿ ಕೆಲಸ ಮಾಡುತ್ತಿದೆ ಎನ್ನುವುದು. ಕೆಲವು ಸಮಯದಿಂದ ಜಪಾನ್‌ ಸಹ ಭಾರತದೆಡೆಗಿನ ಸಂಬಂಧ ವೃದ್ಧಿಗಾಗಿ ಬಹಳ ಪರಿಶ್ರಮಿಸುತ್ತಿದೆ. ಜಪಾನ್‌ – ಯುನೈಟೆಡ್‌ ಸ್ಟೇಟ್ಸ್‌- ಇಂಡಿಯಾ ಕೂಟ (ಜೆಎಐ) ವಿಷಯದಲ್ಲೇ ಆಗಲಿ ಅಥವಾ ಇತ್ತೀಚೆಗಿನ ಆಸ್ಟ್ರೇಲಿಯಾ – ಭಾರತ-ಜಪಾನ್‌ ಪೂರೈಕೆ ಸರಪಳಿಯ ನಿಟ್ಟಿನಲ್ಲಿ ರಚನೆಯಾದ ಸಹಯೋಗವಿರಲಿ, ಇವುಗಳ ರಚನೆಯಲ್ಲಿ ಜಪಾನ್‌ನ ಪರಿಶ್ರಮ, ಯೋಚನೆ ಬಹಳವೇ ಇದೆ. ನಿಸ್ಸಂಶಯವಾಗಿಯೂ ಟೋಕಿಯೋದ ಈ ನೀತಿ ನಿರೂಪಣೆಯಲ್ಲಿ, ಹೆಚ್ಚುತ್ತಿರುವ ಚೀನದ ಭೂ-ರಾಜಕೀಯ ಅಪಾಯಕ್ಕೆ ಪ್ರತಿರೋಧವೊಡ್ಡುವ ಯೋಚನೆ ಕೆಲಸ ಮಾಡುತ್ತಿದೆ.

ಅಬೆ ಅವಧಿಯಲ್ಲಿ ಜಪಾನ್‌ ಭಾರತದೊಂದಿಗೆ ಬಹು ಆಯಾಮದ ನಂಟು ವಿಸ್ತರಿಸಿಕೊಂಡಿದೆ. ಒಂದರ್ಥದಲ್ಲಿ ಭಾರತದ ಆರ್ಥಿಕ ಆಧುನೀಕರಣದ ಹಾದಿಯಲ್ಲಿ ಜಪಾನ್‌ನ ಕೊಡುಗೆಯನ್ನು ಕಡೆಗಣಿಸಲು ಸಾಧ್ಯವೇ ಆಗುವುದಿಲ್ಲ. ರಾಜತಾಂತ್ರಿಕ ಸಹಕಾರವಷ್ಟೇ ಅಲ್ಲದೇ ಬೃಹತ್‌ ಕೈಗಾರಿಕಾ ಕಾರಿಡಾರ್‌ಗಳು, ರಸ್ತೆ ನಿರ್ಮಾಣ ಯೋಜನೆಗಳು, ಹೈ-ಸ್ಪೀಡ್‌ ರೈಲು ವ್ಯವಸ್ಥೆ ಹಾಗೂ ಮಹಾನಗರಿಗಳಲ್ಲಿನ ಸಂಚಾರ ವ್ಯವಸ್ಥೆಯಲ್ಲಿನ ಆಧುನೀಕರಣದ ಯೋಜನೆಗಳಲ್ಲಿ ಜಪಾನ್‌ನ ಸಹಕಾರ ಹಾಗೂ ಮಹತ್ತರ ಪ್ರಮಾಣದ ಹೂಡಿಕೆಯಿದೆ.

ಇವೆಲ್ಲದರ ನಡುವೆಯೇ, ಎರಡೂ ದೇಶಗಳ ನಡುವಿನ ಮಿಲಿಟರಿ ವಲಯದಲ್ಲಿ ಅಷ್ಟಾಗಿ ಕೊಡುಕೊಳ್ಳುವಿಕೆ ಇಲ್ಲ ಎನ್ನುವ ಚೂರು ಅಸಮಾಧಾನವಂತೂ ಇದ್ದೇ ಇತ್ತು. ಈಗ ಭಾರತ-ಜಪಾನ್‌ ಲಾಜಿಸ್ಟಿಕ್ಸ್‌ ಒಪ್ಪಂದ (ಎಂಎಲ್‌ಎಸ್‌ಎ)ಕ್ಕೆ ಸಹಿ ಹಾಕುವ ಮೂಲಕ, ಈ ಅಭಾವವನ್ನು ತುಂಬುವ ನಿಟ್ಟಿನಲ್ಲಿ ಜಪಾನ್‌ ಹಾಗೂ ಭಾರತ ಬೃಹತ್‌ ಹೆಜ್ಜೆಯಿಟ್ಟಿವೆ. ನಿಸ್ಸಂಶಯವಾಗಿಯೂ ಈ ಬೆಳವಣಿಗೆಗಳೆಲ್ಲ ನೆರೆಯ ಚೀನಕ್ಕೆ ಕಳವಳ ಹುಟ್ಟಿಸಿರಲಿಕ್ಕೂ ಸಾಕು. ತನ್ನ ವಿಸ್ತರಣಾವಾದದ ಹುಚ್ಚು ಪ್ರಯತ್ನಗಳನ್ನು ಯಾರೂ ತಡೆಯರು ಎಂಬ ಭ್ರಮೆಯಲ್ಲಿರುವ ಜಿನ್‌ಪಿಂಗ್‌ ಆಡಳಿತಕ್ಕೆ ಇದೊಂದು ಪ್ರಬಲ ಸಂದೇಶವೇ ಸರಿ.

Advertisement

Udayavani is now on Telegram. Click here to join our channel and stay updated with the latest news.

Next