Advertisement
ದುಬೈನಲ್ಲಿ ನಡೆದ ಡಬ್ಲ್ಯೂಐಓಎನ್ ಜಾಗತಿಕ ಶೃಂಗಸಭೆಯಲ್ಲಿ ಭಾಗವಹಿಸಿ ಮಾತನಾಡಿದ ವಿ ವಿ ಎಸ್ ಲಕ್ಷ್ಮಣ್, ಹಲವು ವರ್ಷಗಳಿಂದ ಸ್ಥಿರ ನಿರ್ವಹಣೆ ನೀಡುತ್ತಿರುವ ಭಾರತ ಮತ್ತು ಆತಿಥೇಯ ಇಂಗ್ಲೆಂಡ್ ತಂಡಗಳು ಈ ವರ್ಷದ ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡಗಳು ಎಂದು ಅಭಿಪ್ರಾಯಪಟ್ಟರು.
ಅಂಬಾಟಿ ರಾಯುಡು ಈ ವಿಶ್ವಕಪ್ ನಲ್ಲಿ ನಾಲ್ಕನೇ ಸ್ಥಾನದಲ್ಲಿ ಆಡಬೇಕು. ರಾಯುಡು ನ್ಯೂಜಿಲ್ಯಾಂಡ್ ವಿರುದ್ಧ ಅಗತ್ಯ ಸಮಯದಲ್ಲಿ ಆಡಿದ 90 ರನ್ ಇನ್ನಿಂಗ್ಸ್ ತಂಡದಲ್ಲಿ ಅವರ ಸ್ಥಾನವನ್ನು ಗಟ್ಟಿಗೊಳಿಸಿದೆ ಎಂದರು. ಟೀಂ ಇಂಡಿಯಾದ ಬಹುಚರ್ಚಿತ ವಿಷಯ, ಧೋನಿ ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ಕೇಳಿದಾಗ ಲಕ್ಷ್ಮಣ್, ಧೋನಿ ಐದನೇ ಕ್ರಮಾಂಕದಲ್ಲಿ ಆಡಬೇಕು. ಧೋನಿ ಇನ್ನಿಂಗ್ಸ್ ಕಟ್ಟುವ ಮತ್ತು ಕೊನೆಯಲ್ಲಿ ಉತ್ತಮ ಫಿನಿಶರ್ ಆಗಿ ಕೆಲಸ ಮಾಡುತ್ತಾರೆ . ಹಾರ್ದಿಕ್ ಪಾಂಡ್ಯ ಮತ್ತು ಕೇದಾರ್ ಜಾಧವ್ ಉತ್ತಮವಾಗಿ ಆಡುತ್ತಿರುವುದರಿಂದ ನನ್ನ ಪ್ರಕಾರ ವಿಶ್ವಕಪ್ ನಲ್ಲಿ ಆಡುವ ಭಾರತ ತಂಡ ಸಿದ್ದವಾಗಿದೆ ಎಂದರು. ವಿಶ್ವಕಪ್ ನಲ್ಲಿ ಪಾಕ್ ವಿರುದ್ಧ ಆಟ?: ಇತ್ತೀಚಿಗೆ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಭಾರತೀಯ ಯೋಧರ ಮೇಲೆ ಉಗ್ರ ದಾಳಿಯ ನಂತರದ ಬೆಳವಣಿಗೆಯಲ್ಲಿ ವಿಶ್ವಕಪ್ ನಲ್ಲಿ ಭಾರತೀಯ ತಂಡ ಪಾಕಿಸ್ಥಾನ ವಿರುದ್ಧ ಆಟವಾಡಬಾರದು ಎಂಬ ಮಾತು ಕೇಳಿ ಬರುತ್ತಿರುವ ಬಗ್ಗೆ ಕೇಳಿದಾಗ ಲಕ್ಷ್ಮಣ್, ದೇಶದಲ್ಲಿ ಇಂತಹ ಘಟನೆಗಳು ನಡೆದಾಗ ನಮ್ಮ ಮನಸ್ಸಿಗೆ ಕ್ರಿಕೆಟ್ ನ ವಿಷಯ ಕೊನೆಯದಾಗಿ ಬರುತ್ತದೆ. ನಾವು ಭಯೋತ್ಪಾದನೆಯ ವಿರುದ್ದ ಸಮರ ಸಾರ ಬೇಕಿದೆ. ಮಡಿದ ಯೋಧರ ಪರಿವಾರದ ಪರವಾಗಿ ನಿಲ್ಲಬೇಕಿದೆ. ಕ್ರಿಕೆಟ್ ನ ಬಗ್ಗೆ ಕೊನೆಯದಾಗಿ ಚಿಂತಿಸಬೇಕು ಎಂದರು.