Advertisement

ಚೀನದ ರಣೋತ್ಸಾಹಕ್ಕೆ ಇಂದು ಭಾರತ ತಣ್ಣೀರು? ; 4 ಷರತ್ತುಗಳೊಂದಿಗೆ ಮಾತುಕತೆಗೆ ಸಜ್ಜು

07:42 AM Jun 06, 2020 | Hari Prasad |

ಹೊಸದಿಲ್ಲಿ: ದೇಶದ ಗಡಿ ರೇಖೆಯೆಂದರೆ ಯುದ್ಧಕಣವಲ್ಲ; ರಣೋತ್ಸಾಹಕ್ಕೆ ವೇದಿಕೆ ಅಲ್ಲ; ಅದು ಶಾಂತಿ- ನೆಮ್ಮದಿಗಳ ತಾಣ ಎಂದು ಚೀನಕ್ಕೆ ಬುದ್ಧಿ ಹೇಳುವ ದಿನ ಬಂದಿದೆ.

Advertisement

ಪ್ಯಾಂಗ್ಯಾಂಗ್‌ ಸರೋವರ ತೀರದಲ್ಲಿ ಶನಿವಾರ ಬೆಳಗ್ಗೆ 8ಕ್ಕೆ ನಡೆಯಲಿರುವ ಉಭಯ ದೇಶಗಳ ಲೆಫ್ಟಿನೆಂಟ್‌ ಜನರಲ್‌ಗ‌ಳ ಸಭೆಗೆ ಭಾರತ ಶಾಂತಿಯ ಸಂದೇಶ ಮತ್ತು ನಾಲ್ಕು ದಿಟ್ಟ ಷರತ್ತುಗಳೊಂದಿಗೆ ಸಜ್ಜಾಗಿದೆ.

ಪೂರ್ವ ಲಡಾಖ್‌ನ ಚುಶುಲ್‌- ಮೊಲ್ಡೊ ಗಡಿಯ ಬಿಪಿಎಂ ಪಾಯಿಂಟ್‌ನಲ್ಲಿ ಭಾರತೀಯ ಸೇನಾ ಪ್ರತಿನಿಧಿಯಾಗಿ ಲೆ| ಜ| ಹರಿಂದರ್‌ ಸಿಂಗ್‌ ಅವರು ಚೀನದ ಸೇನಾ ಕಮಾಂಡರ್‌ ಜತೆಗೆ ಮಾತುಕತೆ ನಡೆಸಲಿದ್ದಾರೆ.

ಪ್ಯಾಂಗ್ಯಾಂಗ್‌ ಸರೋವರದ ಸುತ್ತಮುತ್ತ ಯಥಾಸ್ಥಿತಿ ಕಾಯ್ದುಕೊಂಡು ಯಾವುದೇ ಮಿಲಿಟರಿ ಪುನಃಸ್ಥಾಪನೆ ನಡೆಸದಂತೆ ಚೀನಕ್ಕೆ ಭಾರತ ಕಠಿನವಾಗಿ ಸೂಚಿಸುವ ಸಾಧ್ಯತೆ ಇದೆ.

ಮಾತುಕತೆಗೂ ಮುನ್ನವೇ ಮೆತ್ತಗಾದ ಚೀನ
ಪೂರ್ವ ಲಡಾಖ್‌ ಗಡಿಯಲ್ಲಿ ಉದ್ಭವಿಸಿರುವ ಬಿಕ್ಕಟ್ಟನ್ನು ಪರಿಹರಿಸಲು ನಾವು ಬದ್ಧ. ಪ್ರಸ್ತುತ ಗಡಿ ಸ್ಥಿತಿ ನಿಯಂತ್ರಣದಲ್ಲಿದೆ. ರಾಜತಾಂತ್ರಿಕ ಮತ್ತು ಮಿಲಿಟರಿ ಮುಖ್ಯಸ್ಥರ ಮೂಲಕ ಪೂರ್ಣ ಪ್ರಮಾಣದಲ್ಲಿ ಸಮಸ್ಯೆ ಬಗೆಹರಿಸಲು ಸಿದ್ಧ ಎಂದು ಚೀನದ ವಿದೇಶಾಂಗ ಸಚಿವಾಲಯದ ವಕ್ತಾರ ಗೆಂಗ್‌ ಶುವಾಂಗ್‌ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

Advertisement

ಎಲ್‌ಎಸಿ ಉದ್ದಕ್ಕೂ ಐಎಎಫ್ ಹಾರಾಟ
ಎಲ್‌ಎಸಿಯುದ್ದಕ್ಕೂ ಭಾರತೀಯ ಫೈಟರ್‌ ಜೆಟ್‌ಗಳ ಹಾರಾಟ ಬಿರುಸಾಗಿದೆ. ಕೆಲವು ದಿನಗಳಿಂದ ಅಕ್ಸಾಯ್‌ ಚಿನ್‌ ವಲಯದಲ್ಲಿ ಚೀನದ ಫೈಟರ್‌ ಜೆಟ್‌ಗಳು ಹಾರಾಡುತ್ತಿವೆ. ಇವುಗಳ ಮೇಲೆ ನಿಗಾ ಇರಿಸುವ ಕೆಲಸವನ್ನು ಭಾರತೀಯ ವಾಯುದಳ ಮಾಡುತ್ತಿದೆ. ನೋ ಫ್ಲೈ ಝೋನ್‌ ನಿಯಮಗಳನ್ನು ಭಾರತ ಉಲ್ಲಂಘಿಸಿಲ್ಲವಾದರೂ ಲಡಾಖ್‌ನ ಗಡಿಯಲ್ಲಿ ತನ್ನ ಬಲವರ್ಧನೆಗೆ ಮುಂದಾಗಿದೆ. ವಾಸ್ತವವಾಗಿ ಇಲ್ಲಿ ಚೀನದ ವಾಯುದಳಕ್ಕಿಂತ ಐ.ಎ.ಎಫ್.ಗೆ ಹೆಚ್ಚು ಅನುಕೂಲಗಳಿವೆ.

ಷರತ್ತುಗಳೇನು?
1.ಎಲ್‌ಎಸಿಯ ಪ್ರಮುಖ ನಾಲ್ಕೈದು ಸ್ಥಳಗಳಲ್ಲಿ ಇರುವ ಸೈನಿಕರನ್ನು ಚೀನ ಹಿಂಪಡೆಯಬೇಕು.

2. ‘ಫಿಂಗರ್‌ 4’ ವಲಯದವರೆಗೆ ಬಂದಿರುವ ಚೀನ ಅಲ್ಲಿಂದ ಹಿಂದೆ ಸರಿಯಬೇಕು.

3.ಎಲ್‌ಎಸಿಯ ಬದಿಯಲ್ಲಿ ಮೂಲ ಸೌಕರ್ಯ ಯೋಜನೆಗಳಿಗೆ ಚೀನ ತಕರಾರು ಎತ್ತುವಂತಿಲ್ಲ.

4. ಚೀನೀ ಸೈನಿಕರು ಸಂಯಮದಿಂದ ಗಡಿ ನಿಯಮಗಳನ್ನು ಪಾಲಿಸಬೇಕು.

Advertisement

Udayavani is now on Telegram. Click here to join our channel and stay updated with the latest news.

Next