Advertisement
ಡಿಆರ್‌ಎಸ್ ವಿವಾದ ಇದೀಗ ಬಹುತೇಕ ತಣ್ಣಗಾಗಿದ್ದು ಎಲ್ಲರ ಗಮನ ಪಿಚ್ ಮತ್ತು ಟೆಸ್ಟ್‌ಗೆ ಹರಿದಿದೆ. ಚೊಚ್ಚಲ ಟೆಸ್ಟ್ ಪಂದ್ಯವೊಂದರ ಆತಿಥ್ಯ ತಾಣವಾಗಿರುವ ಝಾರ್ಖಂಡ್ ಕ್ರಿಕೆಟ್ ಅಸೋಸಿಯೇಶನ್‌ನ ಈ ಪಿಚ್ ಹೇಗೆ ವರ್ತಿಸಬಹುದೆಂಬುದೇ ಕುತೂಹಲದ ವಿಷಯವಾಗಿದೆ. ಈ ಪಿಚ್ ಸ್ಪಿನ್‌ಗೆ ಹೆಚ್ಚಿನ ಮಹತ್ವ ನೀಡಬಹುದೆಂದು ಭಾವಿಸಲಾಗಿದೆ.
ಪುಣೆಯಲ್ಲಿ ನಡೆದ ಮೊದಲ ಟೆಸ್ಟ್‌ನ ಪಿಚ್ ಕಳಪೆಯೆಂದು ಹೇಳಲಾಗಿತ್ತು. ದ್ವಿತೀಯ ಪಂದ್ಯ ನಡೆದ ಬೆಂಗಳೂರು ಪಿಚ್ ಸಾಧಾರಣ ಮಟ್ಟಕ್ಕಿಂತಲೂ ಕಡಿಮೆಯಿತ್ತು ಎಂದು ಮ್ಯಾಚ್ ರೆಫ್ರಿ ಕ್ರಿಸ್ ಬ್ರಾಡ್ ಹೇಳಿದ್ದರು. ಹಾಗಾಗಿ ನೂತನ ತಾಣವಾದ ರಾಂಚಿ ಪಿಚ್ ಹೇಗಿರುತ್ತದೆ ಎಂಬುದನ್ನು ಎಲ್ಲರೂ ಕಾತರದಿಂದ ನೋಡುತ್ತಿದ್ದಾರೆ. ಪುಣೆಯಲ್ಲಿ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿ 331 ರನ್ನುಗಳಿಂದ ಹೀನಾಯವಾಗಿ ಸೋತಿದ್ದ ಭಾರತ ಬೆಂಗಳೂರು ಟೆಸ್ಟ್‌ನಲ್ಲಿ ಹೊಸ ಉತ್ಸಾಹದಿಂದ ಆಡಿ ಅದ್ಭುತ ರೀತಿಯಲ್ಲಿ ಪಂದ್ಯ ಗೆದ್ದು ಸಮಬಲ ಸಾಧಿಸಿತ್ತು. ಇದೀಗ ರಾಂಚಿಯಲ್ಲಿಯೂ ಗೆಲುವಿನ ವಿಶ್ವಾಸದಲ್ಲಿ ಕೊಹ್ಲಿ ಪಡೆ ಹೊಂದಿದೆ. ಧೋನಿ ಊರಲ್ಲಿ ಜಯಭೇರಿ ಬಾರಿಸುವ ಉತ್ಸಾಹದಲ್ಲಿದೆ.
Related Articles
ಈ ಸರಣಿಗಿಂತ ಮೊದಲು ನಡೆದ ಮೂರು ಇನ್ನಿಂಗ್ಸ್‌ಗಳಲ್ಲಿ 600 ಪ್ಲಸ್ ರನ್ ಪೇರಿಸಿದ್ದ ಭಾರತ ಆಸ್ಟ್ರೇಲಿಯ ವಿರುದ್ಧ ಬ್ಯಾಟಿಂಗ್‌ನಲ್ಲಿ ಮಿಂಚಲು ವಿಫಲವಾಗಿದೆ. ಭಾರತದ ಯಾವುದೇ ಪ್ರಮುಖ ಆಟಗಾರ ಇನ್ನೂ ಶತಕ ದಾಖಲಿಸಿಲ್ಲ. ಈ ಸರಣಿಯಲ್ಲಿ ಇಷ್ಟರವರೆಗೆ ಮೂರು ಅರ್ಧಶತಕ ದಾಖಲಿಸಿರುವ ಕರ್ನಾಟಕದ ಕೆಎಲ್ ರಾಹುಲ್ ಗರಿಷ್ಠ ರನ್ ಗಳಿಸಿದ ಆಟಗಾರ ಆಗಿದ್ದಾರೆ. ಅವರಿಂದ ರಾಂಚಿಯಲ್ಲೂ ಉತ್ತಮ ಆಟವನ್ನು ನಿರೀಕ್ಷಿಸಲಾಗಿದೆ. ಆಸ್ಟ್ರೇಲಿಯ ವಿರುದ್ಧ ಕೊಹ್ಲಿ ಅವರ ರನ್ ಬರ ಅಂತ್ಯಗೊಳ್ಳುವ ನಿರೀಕ್ಷೆ ಮಾಡಲಾಗಿದೆ.
Advertisement
ವರ್ಷವಿಡೀ ರನ್ ಹೊಳೆ ಹರಿಸಿದ್ದ ವಿರಾಟ್ ಕೊಹ್ಲಿ ಆಸ್ಟ್ರೇಲಿಯ ವಿರುದ್ಧದ ನಾಲ್ಕು ಇನ್ನಿಂಗ್ಸ್‌ಗಳಲ್ಲಿ ಕೇವಲ 40 ರನ್ ಹೊಡೆದಿದ್ದರು. ಕೊಹ್ಲಿ ಅವರಿಂದ ಪ್ರಚಂಡ ಬ್ಯಾಟಿಂಗನ್ನು ಮತ್ತೆ ಅಭಿಮಾನಿಗಳು ನಿರೀಕ್ಷಿಸುತ್ತಿದ್ದಾರೆ. ಭುಜದ ಗಾಯದಿಂದಾಗಿ ಬೆಂಗಳೂರು ಪಂದ್ಯ ಕಳೆದುಕೊಂಡಿದ್ದ ಮುರಳಿ ವಿಜಯ್ ರಾಂಚಿಯಲ್ಲಿ ಮತ್ತೆ ತಂಡವನ್ನು ಸೇರಿಕೊಳ್ಳಲಿದ್ದು ರಾಹುಲ್ ಜತೆ ಇನ್ನಿಂಗ್ಸ್ ಆರಂಭಿಸುವ ಸಾಧ್ಯತೆಯಿದೆ. ಇದರಿಂದಾಗಿ ಅಭಿನವ್ ಮುಕುಂದ್ ಹೊರಗುಳಿಯಲಿದ್ದಾರೆ.
ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ, ಕರುಣ್ ನಾಯರ್ ಮತ್ತು ವೃದ್ಧಿಮಾನ್ ಸಾಹ ಉತ್ತಮ ಬ್ಯಾಟಿಂಗ್ ನಡೆಸಿದರೆ ಭಾರತ ಗೆಲುವಿನ ನಿರೀಕ್ಷೆ ಮಾಡ ಬಹುದು. ಬೌಲಿಂಗ್‌ನಲ್ಲಿ ತಂಡವು ಇಶಾಂತ್ ಶರ್ಮ, ಉಮೇಶ್ ಯಾದವ್, ಅಶ್ವಿನ್ ಮತ್ತು ರವೀಂದ್ರ ಜಡೇಜ ಅವರನ್ನು ಅವಲಂಭಿಸಿದೆ.
ಬೆಂಗಳೂರು ಟೆಸ್ಟ್‌ನಲ್ಲಿ ಮ್ಯಾಜಿಕ್ ದಾಳಿ ನಡೆಸಿದ ಜಡೇಜ ಐಸಿಸಿ ನೂತನ ರ್‍ಯಾಂಕಿಂಗ್‌ನಲ್ಲಿ ಅಶ್ವಿನ್ ಜತೆ ಜಂಟಿ ನಂಬರ್ ವನ್ ಸ್ಥಾನ ಅಲಂಕರಿಸಿದ್ದಾರೆ. ಸ್ಪಿನ್ ಯೋಗ್ಯ ಪಿಚ್‌ನಲ್ಲಿ ಜಡೇಜ ಮತ್ತೆ ಮ್ಯಾಜಿಕ್ ದಾಳಿ ಸಂಘಟಿಸಿದರೆ ಭಾರತ ಮೇಲುಗೈ ಸಾಧಿಸಬಹುದು.
ಮಾರ್ಷ್, ಸ್ಟಾರ್ಕ್ ಅನುಪಸ್ಥಿತಿ: ಆಲ್‌ರೌಂಡರ್ ಮಿಚೆಲ್ ಮಾರ್ಷ್ ಮತ್ತು ಮಿಚೆಲ್ ಸ್ಟಾರ್ಕ್ ಅವರ ಅನುಪಸ್ಥಿತಿಯಿಂದ ಆಸ್ಟ್ರೇಲಿಯಕ್ಕೆ ದೊಡ್ಡ ಹೊಡೆತ ಬೀಳುವ ಸಾಧ್ಯತೆಯಿದೆ. ಭುಜದ ಗಾಯದಿಂದಾಗಿ ಅವರು ತವರಿಗೆ ಮರಳಿದ್ದಾರೆ. ಆದರೆ ಅವರು ಮೊದಲೆರಡು ಟೆಸ್ಟ್‌ನಲ್ಲಿ ಗಮನಾರ್ಹ ನಿರ್ವಹಣೆ ನೀಡಿಲ್ಲ. ಬಲ ಪಾದದ ಸೆಳೆತದಿಂದ ಮಿಚೆಲ್ ಸ್ಟಾರ್ಕ್ ಕೂಡ ತವರಿಗೆ ತೆರಳಲಿದ್ದಾರೆ. ಅವರು ಪುಣೆ ಮತ್ತು ಬೆಂಗಳೂರು ಟೆಸ್ಟ್‌ನಲ್ಲಿ ಭಾರತದ ಕುಸಿತಕ್ಕೆ ನಾಂದಿ ಹಾಡಿದ್ದರು. ಅವರಿಬ್ಬರ ಬದಲಿಗೆ ಮಾರ್ಕಸ್ ಸ್ಟಾಯಿನಿಸ್ ಮತ್ತು ಪ್ಯಾಟ್ ಕಮ್ಮಿನ್ಸ್ ಒಳಬರುವ ಸಾಧ್ಯತೆಯಿದೆ. ಇವರಿಬ್ಬರ ಜತೆ ಗ್ಲೆನ್ ಮ್ಯಾಕ್ಸ್‌ವೆಲ್, ಉಸ್ಮಾನ್ ಖ್ವಾಜ ಮತ್ತು ಆ್ಯಸ್ಟನ್ ಅಗರ್ ಕೂಡ ಸ್ಪರ್ಧೆಯಲ್ಲಿದ್ದಾರೆ.
ಸಂಭಾವ್ಯ ತಂಡಗಳುಭಾರತ: ಕೆಎಲ್ ರಾಹುಲ್, ಮುರಳಿ ವಿಜಯ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ, ಕರುಣ್ ನಾಯರ್, ವೃದ್ಧಿಮಾನ್ ಸಾಹ, ಆರ್. ಅಶ್ವಿನ್, ರವೀಂದ್ರ ಜಡೇಜ, ಇಶಾಂತ್ ಶರ್ಮ, ಉಮೇಶ್ ಯಾದವ್. ಆಸ್ಟ್ರೇಲಿಯ: ಡೇವಿಡ್ ವಾರ್ನರ್, ಮ್ಯಾಟ್ ರೆನ್‌ಶಾ, ಸ್ಟೀವನ್ ಸ್ಮಿತ್ (ನಾಯಕ), ಶಾನ್ ಮಾರ್ಷ್, ಪೀಟರ್ ಹ್ಯಾಂಡ್ಸ್‌ಕಾಂಬ್, ಗ್ಲೆನ್ ಮ್ಯಾಕ್ಸ್‌ವೆಲ್/ಮಾರ್ಕಸ್ ಸ್ಟಾಯಿನಿಸ್/ಉಸ್ಮಾನ್ ಖ್ವಾಜ/ಆ್ಯಸ್ಟನ್ ಅಗರ್, ಮ್ಯಾಥ್ಯೂ ವೇಡ್, ಸ್ಟೀವ್ ಓ’ಕೀಫ್, ಪ್ಯಾಟ್ ಕಮ್ಮಿನ್ಸ್, ನಥನ್ ಲಿಯೋನ್, ಜೋಶ್ ಹ್ಯಾಝೆಲ್‌ವುಡ್. ಪಂದ್ಯ ಆರಂಭ: ಬೆಳಗ್ಗೆ 9.30
ಪ್ರಸಾರ: ಸ್ಟಾರ್ ನ್ಪೋರ್ಟ್ಸ್