ವಿಜಯವಾಡ: ಪ್ರವಾಸಿ ನ್ಯೂಜಿಲ್ಯಾಂಡ್ “ಎ’ ವಿರುದ್ಧದ 2 ಪಂದ್ಯಗಳ ಅನಧಿಕೃತ ಟೆಸ್ಟ್ ಸರಣಿಯನ್ನು ಭಾರತ “ಎ’ 2-0 ಅಂತರದಿಂದ ವಶಪಡಿಸಿ ಕೊಂಡಿದೆ. ಮಂಗಳವಾರ ಇಲ್ಲಿ ಮುಗಿದ ದ್ವಿತೀಯ ಟೆಸ್ಟ್ ಪಂದ್ಯವನ್ನು ಕರುಣ್ ನಾಯರ್ ಪಡೆ ಇನ್ನಿಂಗ್ಸ್ ಹಾಗೂ 26 ರನ್ನುಗಳಿಂದ ಗೆಲ್ಲುವುದರೊಂದಿಗೆ ಕ್ಲೀನ್‌ಸ್ವೀಪ್ ಸಾಧನೆ ಮಾಡಿತು.
ಇಲ್ಲೇ ಆಡಲಾದ ಮೊದಲ ಟೆಸ್ಟ್ ಪಂದ್ಯವನ್ನು ಭಾರತ “ಎ’ ಇನ್ನಿಂಗ್ಸ್ ಹಾಗೂ 31 ರನ್ನುಗಳಿಂದ ಗೆದ್ದಿತ್ತು.
236 ರನ್ನುಗಳ ಹಿನ್ನಡೆಗೆ ಸಿಲುಕಿದ್ದ ನ್ಯೂಜಿಲ್ಯಾಂಡ್ 3ನೇ ದಿನದಾಟದ ಅಂತ್ಯಕ್ಕೆ ಒಂದಕ್ಕೆ 104 ರನ್ ಬಾರಿಸಿ ಹೋರಾಟದ ಸೂಚನೆ ನೀಡಿತ್ತು. ಆದರೆ ಅಂತಿಮ ದಿನದಾಟದಲ್ಲಿ ಕಿವೀಸ್ ಬ್ಯಾಟಿಂಗ್ ಶೋಚನೀಯ ವೈಫಲ್ಯ ಕಂಡು 210 ರನ್ನಿಗೆ ಕುಸಿಯಿತು. ಪ್ರವಾಸಿಗರ ಅಂತಿಮ 9 ವಿಕೆಟ್ 86 ರನ್ ಅಂತರದಲ್ಲಿ ಉರುಳಿತು.
ಸ್ಪಿನ್ನರ್‌ಗಳಾದ ಕಣ್ì ಶರ್ಮ ಹಾಗೂ ಶಾಬಾಜ್ ನದೀಂ ಸೇರಿಕೊಂಡು ಕಿವೀಸ್ ಯೋಜನೆಯನ್ನು ವಿಫಲಗೊಳಿಸಿದರು; ಭಾರತಕ್ಕೆ ಸುಲಭ ಗೆಲುವು ತಂದಿತ್ತರು. ಶರ್ಮ 76ಕ್ಕೆ 5 ವಿಕೆಟ್ ಉರುಳಿಸಿದರೆ, ನದೀಂ 41 ರನ್ನಿಗೆ 4 ವಿಕೆಟ್ ಹಾರಿಸಿದರು. ಕಣ್ì ಶರ್ಮ ಈ ಸರಣಿಯಲ್ಲಿ 5 ಪ್ಲಸ್ ವಿಕೆಟ್ ಉರುಳಿಸಿದ 3ನೇ ದೃಷ್ಟಾಂತ ಇದಾಗಿದೆ. ಈ ಋತುವಿನ ದುಲೀಪ್ ಟ್ರೋಫಿ ಪಂದ್ಯಾವಳಿ ಆರಂಭವಾದ ಬಳಿಕ ಶರ್ಮ 4 ಪ್ರಥಮ ದರ್ಜೆ ಪಂದ್ಯಗಳಿಂದ 31 ವಿಕೆಟ್ ಸಂಪಾ ದಿಸಿದ್ದಾರೆ. ಸರಾಸರಿ 15.29. ನ್ಯೂಜಿಲ್ಯಾಂಡ್ ಪರ ನಾಯಕ ಹೆನ್ರಿ ನಿಕೋಲ್ಸ್ ಉತ್ತಮ ಹೋರಾಟವೊಂದನ್ನು ಪ್ರದರ್ಶಿಸಿ 94 ರನ್ ಹೊಡೆದರು (190 ಎಸೆತ, 11 ಬೌಂಡರಿ, 1 ಸಿಕ್ಸರ್). ಅವರು 55 ರನ್ನಿನಿಂದ ಬ್ಯಾಟಿಂಗ್ ಮುಂದುವರಿಸಿದ್ದರು. 41 ರನ್ ಮಾಡಿ ಬ್ಯಾಟಿಂಗ್ ಕಾಯ್ದುಕೊಂಡಿದ್ದ ಆರಂಭಕಾರ ಜೀತ್ ರಾವಲ್ ಹೆಚ್ಚು ಹೊತ್ತು ನಿಲ್ಲಲಿಲ್ಲ. ಅವರು 47 ರನ್ ಮಾಡಿ ನದೀಂ ಎಸೆತದಲ್ಲಿ ಎಲ್‌ಬಿಡಬ್ಲ್ಯು ಆದರು. ರಾವಲ್ ಪತನದ ಬಳಿಕ ಕಿವೀಸ್ ಪಟಪಟನೆ ವಿಕೆಟ್ ಕಳೆದುಕೊಳ್ಳುತ್ತಲೇ ಹೋಯಿತು. ನಾಯಕ ನಿಕೋಲ್ಸ್‌ಗೆ ಇನ್ನೊಂದು ತುದಿಯಿಂದ ಯಾರಿಂದಲೂ ಬೆಂಬಲ ಸಿಗಲಿಲ್ಲ.
ಎರಡೂ ತಂಡಗಳಿನ್ನು 5 ಪಂದ್ಯಗಳ ಏಕದಿನ ಸರಣಿಯಲ್ಲಿ ಪಾಲ್ಗೊಳ್ಳಲಿವೆ. ಪಂದ್ಯಗಳೆಲ್ಲವೂ ವಿಶಾಖ ಪಟ್ಟದಲ್ಲಿ ನಡೆಯಲಿವೆ (ಅ. 6, 8, 10, 13, 15).
ಸಂಕ್ಷಿಪ್ತ ಸ್ಕೋರ್
ನ್ಯೂಜಿಲ್ಯಾಂಡ್ “ಎ’-211 ಮತ್ತು 210 (ನಿಕೋಲ್ಸ್ 94, ರಾವಲ್ 47, ಕಣ್ì ಶರ್ಮ 78ಕ್ಕೆ 5, ನದೀಂ 41ಕ್ಕೆ 4). ಭಾರತ-447.