ಲಿಂಕನ್: ನ್ಯೂಜಿಲ್ಯಾಂಡ್ ಪ್ರವಾಸವನ್ನು ಭಾರತ “ಎ’ ತಂಡ ಭರ್ಜರಿ ಗೆಲುವಿನೊಂದಿಗೆ ಆರಂಭಿಸಿದೆ. ಶುಕ್ರವಾರ ಇಲ್ಲಿ ನಡೆದ ನ್ಯೂಜಿಲ್ಯಾಂಡ್ ಇಲೆವೆನ್ ಎದುರಿನ ಏಕದಿನ ಅಭ್ಯಾಸ ಪಂದ್ಯವನ್ನು 92 ರನ್ನುಗಳಿಂದ ತನ್ನದಾಗಿಸಿಕೊಂಡಿದೆ.
ಬ್ಯಾಟಿಂಗಿಗೆ ಇಳಿಸಲ್ಪಟ್ಟ ಭಾರತ “ಎ’, ರುತುರಾಜ್ ಗಾಯಕ್ವಾಡ್ (93), ನಾಯಕ ಶುಭಮನ್ ಗಿಲ್ (50) ಮತ್ತು ಸೂರ್ಯಕುಮಾರ್ ಯಾದವ್ (50) ಅವರ ಅರ್ಧ ಶತಕಗಳ ನೆರವಿನಿಂದ 8 ವಿಕೆಟಿಗೆ 279 ರನ್ ಪೇರಿಸಿ ಸವಾಲೊಡ್ಡಿತು. ಜವಾಬಿತ್ತ ಆತಿಥೇಯ ತಂಡ 41.1 ಓವರ್‌ಗಳಲ್ಲಿ 187ಕ್ಕೆ ಆಲೌಟ್ ಆಯಿತು.
ಕಿವೀಸ್ ಆರಂಭ ಉತ್ತಮವಾಗಿಯೇ ಇತ್ತು. ಜೇಕಬ್ ಭುಲ (50) ಮತ್ತು ಜಾಕ್ ಬಾಯ್ಲ (42) ಮೊದಲ ವಿಕೆಟಿಗೆ 82 ರನ್ ಪೇರಿಸಿ ಭಾರತಕ್ಕೆ ಭೀತಿಯೊಡ್ಡಿದ್ದರು. 18ನೇ ಓವರಿನ ಮೊದಲ ಎಸೆತದಲ್ಲಿ ಈ ಜೋಡಿಯನ್ನು ಬೇರ್ಪಡಿಸಿದ ವಿಜಯ್ ಶಂಕರ್ ಭಾರತಕ್ಕೆ ಮೇಲುಗೈ ಒದಗಿಸಿದರು. 105 ರನ್ ಅಂತರದಲ್ಲಿ ಆತಿಥೇಯರ ಅಷ್ಟೂ ವಿಕೆಟ್ ಉರುಳಿತು.
ಖಲೀಲ್ ಅಹ್ಮದ್ 43ಕ್ಕೆ 4 ವಿಕೆಟ್ ಹಾರಿಸಿ ಹೆಚ್ಚಿನ ಯಶಸ್ಸು ಸಾಧಿಸಿದರು. ಮೊಹಮ್ಮದ್ ಸಿರಾಜ್ ಮತ್ತು ಕೃಣಾಲ್ ಪಾಂಡ್ಯ ತಲಾ 2, ವಿಜಯ್ ಶಂಕರ್ ಮತ್ತು ರಾಹುಲ್ ಚಹರ್ ತಲಾ ಒಂದು ವಿಕೆಟ್ ಉರುಳಿಸಿದರು.
ಭಾರತದ ಟೆಸ್ಟ್ ಆರಂಭಕಾರ ಮಾಯಾಂಕ್ ಅಗರ್ವಾಲ್ (8), ಕೀಪರ್ ಸಂಜು ಸ್ಯಾಮ್ಸನ್ (4), ವಿಜಯ್ ಶಂಕರ್ (13) ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು. ಆದರೆ ಕೆಳ ಸರದಿಯಲ್ಲಿ ಆಕ್ರಮಣಕಾರಿಯಾಗಿ ಬ್ಯಾಟ್ ಬೀಸಿದ ಕೃಣಾಲ್ ಪಾಂಡ್ಯ 31 ಎಸೆತಗಳಿಂದ 41 ರನ್ ಸಿಡಿಸಿದರು (2 ಬೌಂಡರಿ, 3 ಸಿಕ್ಸರ್).