ಹುಬ್ಬಳ್ಳಿ: ಶ್ರೀಲಂಕಾ ‘ಎ’ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯವನ್ನು ಅಧಿಕಾರಯುತವಾಗಿ ಗೆಲ್ಲುವ ಮೂಲಕ ಭಾರತ ‘ಎ’ ತಂಡ ದ್ವಿಪಕ್ಷೀಯ ಅನಧೀಕೃತ ಟೆಸ್ಟ್ ಸರಣಿಯನ್ನು ಗೆದ್ದು ಬೀಗಿದೆ.
ಇಲ್ಲಿನ ಕೆಎಸ್ ಎ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಪ್ರಿಯಾಂಕ್ ಪಾಂಚಾಲ್ ನಾಯಕತ್ವದ ಭಾರತ ತಂಡ 152 ರನ್ ಗಳ ಅಂತರದಿಂದ ಜಯ ಸಾಧಿಸುವಲ್ಲಿ ಸಫಲವಾಗಿದೆ.
ದ್ವಿತೀಯ ಇನ್ನಿಂಗ್ಸ್ ನಲ್ಲಿ ಗೆಲ್ಲಲು 430 ರನ್ ಗಳ ಕಠಿಣ ಗುರಿ ಪಡೆದ ಲಂಕಾ 277 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಭಾರತಕ್ಕೆ ಶರಣಾಯಿತು. ಭಾಹುಕ ರಾಜಪಕ್ಷ 110 ರನ್ ಗಳಿಸಿ ತಂಡದ ಪರ ಅತ್ಯಧಿಕ ರನ್ ಕಲೆ ಹಾಕಿದರು. ಉಳಿದಂತೆ ಕಮಿಂದು ಮೆಂಡಿಸ್ 46 ರನ್, ಮತ್ತು ಕೊನೆಯಲ್ಲಿ ವಿಶ್ವ ಫೆರ್ನಾಂಡೊ 32 ರನ್ ಗಳಿಸಿದರು. ಉಳಿದ ಆಟಗಾರ‍್ಯಾರು ಭಾರತದ ದಾಳಿಯನ್ನು ಸಮರ್ಥವಾಗಿ ಎದುರಿಸಲು ವಿಫಲರಾದರು.
ಮೂರನೇ ದಿನದ ಆಟದ ಅಂತ್ಯಕ್ಕೆ ಏಳು ವಿಕೆಟ್ ಕಳೆದುಕೊಂಡು 210 ರನ್ ಗಳಿಸಿದ್ದ ಲಂಕಾ ಆಗಲೇ ಸೋಲಿನ ಅಂಚಿಗೆ ತಲುಪಿತ್ತು. ಕೊನೆಯ ದಿನವಾದ ಸೋಮವಾರ ಕೊನೆಯ ಮೂರು ವಿಕೆಟ್ ಗಳಿಗೆ 67 ರನ್ ಸೇರಿಸಲಷ್ಟೇ ಶಕ್ತವಾಯಿತು.
ಭಾರತ ‘ಎ’ ತಂಡದ ಪರ ಬಿಗು ದಾಳಿ ಸಂಘಟಿಸಿದ ರಾಹುಲ್ ಚಾಹರ್ ಐದು ವಿಕೆಟ್ ಪಡೆದು ಮಿಂಚಿದರು. ಮೊದಲ ಇನ್ನಿಂಗ್ಸ್ ನಲ್ಲಿ 117 ರನ್ ಮತ್ತು ದ್ವಿತೀಯ ಇನ್ನಿಂಗ್ಸ್ ನಲ್ಲಿ 60 ರನ್ ಗಳಿಸಿದ ವಿಕೆಟ್ ಕೀಪರ್ ಬ್ಯಾಟ್ಸಮನ್ ಶ್ರೀಕರ್ ಭರತ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.