Advertisement

ಪಾಂಡೆ ಶತಕ; ಭಾರತ “ಎ’ಸರಣಿ ಜಯಭೇರಿ

09:35 AM Dec 10, 2018 | Harsha Rao |

ಮೌಂಟ್‌ ಮೌಂಗನುಯಿ: ಕರ್ನಾಟಕದ ಭರವಸೆಯ ಬ್ಯಾಟ್ಸ್‌ಮನ್‌ ಮನೀಷ್‌ ಪಾಂಡೆ ಸಿಡಿಸಿದ ಅಮೋಘ ಶತಕದ ನೆರವಿನಿಂದ ಭಾರತ “ಎ’ ತಂಡ ಆತಿಥೇಯ ನ್ಯೂಜಿಲ್ಯಾಂಡ್‌ “ಎ’ ವಿರುದ್ಧದ 2ನೇ ಏಕದಿನ ಪಂದ್ಯವನ್ನೂ ಗೆದ್ದು ಸರಣಿ ವಶಪಡಿಸಿಕೊಂಡಿದೆ.

Advertisement

ರವಿವಾರ ಇಲ್ಲಿ ನಡೆದ ದೊಡ್ಡ ಮೊತ್ತದ ಮೇಲಾಟದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ನ್ಯೂಜಿಲ್ಯಾಂಡ್‌ “ಎ’ 50 ಓವರ್‌ಗಳಲ್ಲಿ 9 ವಿಕೆಟಿಗೆ 299 ರನ್‌ ಪೇರಿಸಿ ಸವಾಲೊಡ್ಡಿತು. ಈ ಮೊತ್ತವನ್ನು ಬೆನ್ನಟ್ಟಿದ ಭಾರತ “ಎ’ 49 ಓವರ್‌ಗಳಲ್ಲಿ ಐದೇ ವಿಕೆಟಿಗೆ 300 ರನ್‌ ಪೇರಿಸಿ ಜಯ ಸಾಧಿಸಿತು. 3 ಪಂದ್ಯಗಳ ಸರಣಿಯಲ್ಲೀಗ ಭಾರತ 2-0 ಮುನ್ನಡೆಯಲ್ಲಿದೆ. 

ಆರಂಭಿಕರಾದ ಶುಭಮನ್‌ ಗಿಲ್‌ (25), ಮಾಯಾಂಕ್‌ ಅಗರ್ವಾಲ್‌ (25), ವನ್‌ಡೌನ್‌ ಬ್ಯಾಟ್ಸ್‌ಮನ್‌ ಶ್ರೇಯಸ್‌ ಅಯ್ಯರ್‌ (59) ಅವರ ಜವಾಬ್ದಾರಿಯುತ ಬ್ಯಾಟಿಂಗ್‌ ಬಳಿಕ ಕಪ್ತಾನನ ಆಟವಾಡಿದ ಮನೀಷ್‌ ಪಾಂಡೆ ಅಜೇಯ 111 ರನ್‌ ಬಾರಿಸಿ ತಂಡವನ್ನು ದಡ ತಲುಪಿಸಿದರು. ಮೊದಲ ಪಂದ್ಯದಲ್ಲಿ ಮಿಂಚಿದ ಆಲ್‌ರೌಂಡರ್‌ ವಿಜಯ್‌ ಶಂಕರ್‌ 59 ರನ್‌ ಕೊಡುಗೆ ಸಲ್ಲಿಸಿದರು. ಪಾಂಡೆ-ಶಂಕರ್‌ 4ನೇ ವಿಕೆಟ್‌ ಜತೆಯಾಟದಲ್ಲಿ 123 ರನ್‌ ಒಟ್ಟುಗೂಡಿತು. 
ಮನೀಷ್‌ ಪಾಂಡೆ 109 ಎಸೆತಗಳನ್ನೆದುರಿಸಿ ಸೊಗಸಾದ ಇನ್ನಿಂಗ್ಸ್‌ ಕಟ್ಟಿದರು. ಇದರಲ್ಲಿ 5 ಬೌಂಡರಿ, 3 ಸಿಕ್ಸರ್‌ ಒಳಗೊಂಡಿತ್ತು. 

ವಿಲ್‌ ಯಂಗ್‌ ಸೆಂಚುರಿ
ನ್ಯೂಜಿಲ್ಯಾಂಡ್‌ “ಎ’ ಸರದಿಯಲ್ಲೂ ಶತಕವೊಂದು ದಾಖಲಾಗಿತ್ತು. ವನ್‌ಡೌನ್‌ ಬ್ಯಾಟ್ಸ್‌ಮನ್‌ ವಿಲ್‌ ಯಂಗ್‌ 102 ರನ್‌ ಬಾರಿಸಿ ತಂಡದ ದೊಡ್ಡ ಮೊತ್ತಕ್ಕೆ ಕಾರಣರಾದರು (106 ಎಸೆತ, 6 ಬೌಂಡರಿ, 3 ಸಿಕ್ಸರ್‌). ಆರಂಭಕಾರ ಜಾರ್ಜ್‌ ವರ್ಕರ್‌ ಕೇವಲ ಒಂದು ರನ್ನಿನಿಂದ ಶತಕ ತಪ್ಪಿಸಿಕೊಳ್ಳಬೇಕಾಯಿತು.

ಭಾರತ “ಎ’ ಪರ ಖಲೀಲ್‌ ಅಹ್ಮದ್‌ ಮತ್ತು ನಮದೀಪ್‌ ಸೈನಿ ತಲಾ 2 ವಿಕೆಟ್‌ ಕಿತ್ತರು. ಮೊದಲ ಪಂದ್ಯದಲ್ಲಿ ಭಾರತ 300 ಪ್ಲಸ್‌ ರನ್‌ ಬೆನ್ನಟ್ಟಿ ಜಯಶಾಲಿಯಾಗಿತ್ತು. ಸರಣಿಯ 3ನೇ ಹಾಗೂ ಅಂತಿಮ ಪಂದ್ಯ ಮಂಗಳವಾರ ಇದೇ ಅಂಗಳದಲ್ಲಿ ನಡೆಯಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next