Advertisement

India A.I.ಮಿಷನ್‌ಗೆ ಕೇಂದ್ರ ಅಸ್ತು: ಏನಿದು ಯೋಜನೆ?ಅನುಕೂಲವೇನು?

12:43 AM Mar 08, 2024 | Team Udayavani |

ಹೊಸದಿಲ್ಲಿ: ಕೃತಕ ಬುದ್ಧಿಮತ್ತೆ ಕ್ಷೇತ್ರಕ್ಕೆ ಉತ್ತೇಜನ ನೀಡುವುದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ “ಇಂಡಿಯಾ ಎ.ಐ. ಮಿಷನ್‌’ಗೆ ಗುರುವಾರ ಅನುಮೋದನೆ ನೀಡಿದೆ. ಇದಕ್ಕಾಗಿ ಮುಂದಿನ ಐದು ವರ್ಷಗಳಿಗೆ 10,372 ಕೋಟಿ ರೂ.ವೆಚ್ಚ ಮಾಡಲಾಗುತ್ತದೆ ಎಂದು ಕೇಂದ್ರ ಸಚಿವ ಪಿಯೂಷ್‌ ಗೋಯಲ್‌ ಸಂಪುಟ ಸಭೆಯ ಬಳಿಕ ತಿಳಿಸಿದ್ದಾರೆ.

Advertisement

ದೇಶದ ಕೃತಕ ಬುದ್ಧಿಮತ್ತೆ (ಎ.ಐ.) ಕಂಪ್ಯೂಟಿಂಗ್‌ ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸಲು ಹಾಗೂ ಕೃತಕ ಬುದ್ಧಿಮತ್ತೆ ಕ್ಷೇತ್ರವನ್ನು ವಿಸ್ತರಿಸಲು ಉದ್ದೇಶಿಸಿದೆ ಎಂದಿದ್ದಾರೆ.

ಎಐ ಮಿಷನ್‌ ಅನ್ವಯ ವ್ಯವಸ್ಥೆಗೆ ಪೂರಕ ವಾಗು­ವಂಥ 10,000 ಗ್ರಾಫಿಕ್‌ ಪ್ರೊಸೆಸಿಂಗ್‌ ಘಟಕಗಳನ್ನು (ಜಿಪಿಯು) ಸ್ಥಾಪಿಸಿ, ಸೂಪರ್‌ ಕಂಪ್ಯೂಟಿಂಗ್‌ ಸಾಮರ್ಥ್ಯವನ್ನು ಹೆಚ್ಚಿಸಲು ಹಣವನ್ನು ವಿನಿಯೋಗಿಸುವುದಾಗಿ ಸರಕಾರ ಹೇಳಿದೆ. ನವೋದ್ಯಮಿಗಳಿಗೆ, ಸಂಶೋಧಕರಿಗೆ ಹಾಗೂ ವೃತ್ತಿಪರರಿಗೆ ಈ ಎ.ಐ. ಸೂಪರ್‌ ಕಂಪ್ಯೂಟಿಂಗ್‌ ಮೂಲಸೌಕರ್ಯ ಬಳಕೆಗೆ ಅನು ಮತಿ ನೀಡುವ ಮೂಲಕ ಕೃಷಿ, ವೈದ್ಯಕೀಯ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿಯೂ ಎಐ ಆ್ಯಪ್ಲಿಕೇಶನ್‌ಗಳ ಸ್ಥಾಪನೆಯನ್ನು ಉತ್ತೇಜಿಸಲಿದೆ.

ಕನ್ನಡದಲ್ಲೂ ದತ್ತಾಂಶ?: ಆರೋಗ್ಯ, ಕೃಷಿ ಮತ್ತು ಆಡಳಿತದಂಥ ಆದ್ಯತೆಯ ಕ್ಷೇತ್ರಗಳಿಗಾಗಿ ಕನ್ನಡವೂ ಸೇರಿದಂತೆ ಭಾರತೀಯ ಭಾಷೆಗಳನ್ನು ಒಳಗೊಂಡಿರುವ ದತ್ತಾಂಶಗಳನ್ನು ಆಧರಿಸಿ ತರಬೇತಿ ಪಡೆದಿರುವ 100 ಶತಕೋಟಿ ಪ್ಯಾರಾ ಮೀಟರ್‌ ಸಾಮರ್ಥ್ಯದೊಂದಿಗೆ ಈ ಕ್ಷೇತ್ರಗಳಿಗೆ ಪೂರಕವಾದ ಅಡಿಪಾಯಗಳ ಮಾದರಿಗಳನ್ನು ರೂಪಿಸಲೂ ಉದ್ದೇಶಿಸಲಾಗಿದೆ.

ಮಾರುಕಟ್ಟೆ ವ್ಯವಸ್ಥೆ: ಎ.ಐ. ಆ್ಯಪ್ಲಿಕೇಶನ್‌ಗಳಿಗಾಗಿ ಕೆಲಸ ಮಾಡುವವರಿಗೆ ಎ.ಐ. ಸೇವೆ ಮತ್ತು ಪೂರ್ವ-ತರಬೇತಿ ಪಡೆದ ಮಾದರಿ ಗಳನ್ನು ಒದಗಿಸಬಲ್ಲ ಮಾರುಕಟ್ಟೆಯನ್ನು ಸ್ಥಾಪಿ ಸಲೂ ಪ್ರಸ್ತಾಪಿಸಲಾಗಿದೆ. ಜತೆಗೆ ಎ.ಐ. ನಾವೀ ನ್ಯತೆ ಮತ್ತು ಸಂಶೋಧನೆ ಕೇಂದ್ರದ ಸ್ಥಾಪನೆಗೂ ಯೋಜಿಸಲಾಗಿದ್ದು, ಎಐ ಮೂಲಸೌಕರ್ಯ ಗಳನ್ನು ಸರಕಾರಿ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ನಿರ್ವಹಿಸಲು ಯೋಜಿಸಲಾಗಿದೆ ಎಂದು ಗೋಯಲ್‌ ಹೇಳಿದ್ದಾರೆ.
ಇದಲ್ಲದೆ ದತ್ತಾಂಶಗಳ ಗುಣಮಟ್ಟವನ್ನು ಸುಧಾರಿಸಲು ರಾಷ್ಟ್ರೀಯ ದತ್ತಾಂಶ ನಿರ್ವಹಣ ಅಧಿಕಾರಿಯೂ ಇರಲಿದ್ದಾರೆ.

Advertisement

300 ರೂ. ಉಜ್ವಲ ಸಬ್ಸಿಡಿ 2025ರ ಎಪ್ರಿಲ್‌ ವರೆಗೆ ವಿಸ್ತರಣೆ

ಉಜ್ವಲ ಯೋಜನೆ ಅನ್ವಯ ಬಡ ಮಹಿಳೆಯರಿಗೆ ನೀಡಲಾಗುತ್ತಿರುವ ಎಲ್‌ಪಿಜಿ ಸಿಲಿಂಡರ್‌ಗಳ ಮೇ ಲಿನ 300 ರೂ.ಸಬ್ಸಿಡಿಯನ್ನು 2025ರ ಎ.1ರ ವರೆಗೆ ವಿಸ್ತರಿಸಲು ಸಂಪುಟ ಅನುಮೋದನೆ ನೀಡಿದೆ. ಕಳೆ ದ ಅಕ್ಟೋಬರ್‌ನಲ್ಲಿ ಸಬ್ಸಿಡಿ ಮೊತ್ತವನ್ನು 200 ರೂ.ಗಳಿಂದ 300 ರೂ.ಗಳಿಗೆ ಸರಕಾರ ಏರಿಕೆ ಮಾಡಿತ್ತು.

ಸೆಣಬಿನ ಬೆಂಬಲ ಬೆಲೆ ಏರಿಕೆ
2024-25ನೇ ಸಾಲಿಗೆ ಕಚ್ಚಾ ಸೆಣಬಿನ ಬೆಂಬಲ ಬೆಲೆಯನ್ನು 285 ರೂ.ಗಳಷ್ಟು ಹೆಚ್ಚಿಸಲು ಕೇಂದ್ರ ಸಂಪುಟ ಅನುಮೋದನೆ ನೀಡಿದೆ. ಇದರೊಂದಿಗೆ ಪ್ರತೀ ಕ್ವಿಂಟಾಲ್‌ ಕಚ್ಚಾ ಸೆಣಬಿಗೆ ನೀಡಲಿರುವ ಬೆಂಬಲ ಬೆಲೆ 5,335ರೂ.ಗಳಿಗೆ ತಲುಪಿದೆ. ಇದು ಪೂರ್ವ ರಾಜ್ಯಗಳಿಗೆ ಲಾಭ ತರಲಿದೆ.

ಈಶಾನ್ಯ ರಾಜ್ಯಗಳಿಗೆ “ಉನ್ನತಿ’
ಈಶಾನ್ಯ ರಾಜ್ಯಗಳಲ್ಲಿ ಹೊಸ ಕೈಗಾರಿಕೆ ಅಭಿವೃದ್ಧಿಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ 10,037 ಕೋಟಿ ರೂ.ಗಳ ಉತ್ತರ-ಪೂರ್ವ ಪರಿವರ್ತನ ಕೈಗಾರೀಕರಣ ಯೋಜನೆ (ಉನ್ನತಿ )ಗೆ ಅನುಮೋದನೆ ನೀಡಿದೆ. ಲಾಭದಾಯಕ ಉದ್ಯೋಗ ಸೃಷ್ಟಿ ಇದರ ಉದ್ದೇಶ.

ಏನಿದು ಯೋಜನೆ?

ದೇಶದಲ್ಲಿ ಕೃತಕ ಬುದ್ಧಿಮತ್ತೆ
ಕ್ಷೇತ್ರಕ್ಕೆ ಉತ್ತೇಜನ ಕೊಡುವ ನಿಟ್ಟಿನಲ್ಲಿ ಪ್ರಯತ್ನ
2023ರಲ್ಲಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದ ಯೋಜನೆ

ಅನುಕೂಲವೇನು?
ಆರೋಗ್ಯ, ಕೃಷಿ ಸೇರಿದಂತೆ ಹಲವು ಆದ್ಯತೆಯ ಕ್ಷೇತ್ರಗಳಿಗಾಗಿ ಡೇಟಾ ಸೆಟ್‌ಗಳ ಅಭಿವೃದ್ಧಿ
10,000ಕ್ಕೂ ಹೆಚ್ಚು ಗ್ರಾಫಿಕ್‌ ಪ್ರೊಸೆಸಿಂಗ್‌ ಯುನಿಟ್‌(ಜಿಪಿಯು)ಗಳ ಸ್ಥಾಪನೆ
50 ಸಚಿವಾಲಯಗಳಲ್ಲಿ ಎಐ ಕ್ಯೂರೇಶನ್‌ ಯುನಿಟ್‌
(ಎಸಿಯು)ಗಳ ಅಭಿವೃದ್ಧಿ
ಎ.ಐ. ಆ್ಯಪ್ಲಿಕೇಶನ್‌ ಕ್ಷೇತ್ರದಲ್ಲಿ ಕೆಲಸ ಮಾಡುವವರ ಅನುಕೂಲಕ್ಕೆ ಮಾರುಕಟ್ಟೆ ಸ್ಥಾಪನೆ
ಕನ್ನಡ ಸೇರಿದಂತೆ ಸ್ಥಳೀಯ ಭಾಷೆಗಳಲ್ಲಿ ಡೇಟಾ ಸೆಟ್‌ಗಳ ಅಭಿವೃದ್ಧಿ

Advertisement

Udayavani is now on Telegram. Click here to join our channel and stay updated with the latest news.

Next