Advertisement
ಈ ಜ್ಞಾನವೆಂಬುದು ಮನುಷ್ಯನಲ್ಲಿಯೇ ಅಡಗಿರುವುದು. ಹೊರಗಿನಿಂದ ಯಾವ ಜ್ಞಾನವೂ ಬರುವುದಿಲ್ಲ. ನ್ಯೂಟನ್ ಗುರುತ್ವಾಕರ್ಷಣೆಯನ್ನು ಕಂಡುಹಿಡಿದನೆಂದು ನಾವು ಹೇಳುತ್ತೇವೆ. ಆದರೆ ಎಲ್ಲಿಯೋ ಒಂದು ಮೂಲೆಯಲ್ಲಿ ಕುಳಿತು ನ್ಯೂಟನ್ ತನ್ನನ್ನು ಕಂಡುಹಿಡಿಯಲು ಬರುವನು ಎಂದು ಅದು ಕಾಯುತ್ತಿತ್ತೇನು? ಅದು ಆತನ ಮನಸ್ಸಿನಲ್ಲಿಯೇ ಇದ್ದದ್ದು. ಸಮಯ ಬಂದಾಗ ಆ ಜ್ಞಾನ ಪ್ರಕಟಗೊಂಡಿತು. ಜಗತ್ತು ಗಳಿಸಿರುವ ಜ್ಞಾನವೆಲ್ಲ ಮನಸ್ಸಿನಿಂದ ಬಂದುದೇ ಆಗಿವೆ. ಜಗತ್ತಿನ ಅನಂತ ಪುಸ್ತಕ ಭಂಡಾರವೆಲ್ಲ ನಿಮ್ಮ ಮನಸ್ಸಿನಲ್ಲಿಯೇ ಇದೆ. ಬಾಹ್ಯ ಪ್ರಪಂಚವೆಂಬುದು ಸೂಚನೆ ಮಾತ್ರ. ಅದು ನಿಮ್ಮ ಮನಸ್ಸು ವಿಚಾರ ಮಾಡುವಂತೆ ಪ್ರೇರೆಪಿಸುವುದು ಎನ್ನುತ್ತಾರೆ ಸ್ವಾಮಿ ವಿವೇಕಾನಂದರು.
Related Articles
Advertisement
ಸಾರ್ವಜನಿಕ ನಂಬಿಕೆ, ಮೌಲ್ಯಗಳನ್ನು ಗಾಳಿಗೆ ತೂರುವ ಭ್ರಷ್ಟಾಚಾರವು ಭಾರತದಲ್ಲಿ ಯೋಜನೆ ಹಾಗೂ ಅಭಿವೃದ್ಧಿ ಪ್ರಕ್ರಿಯೆಗಳನ್ನು ಹಳಿ ತಪ್ಪಿಸಿದೆ. ಭಾರತ ಸಾಧು- ಸಂತರು, ಜ್ಞಾನಿಗಳು, ವಿಜ್ಞಾನಿಗಳೂ ಹಾಗೂ ಸಂಸ್ಕೃತಿ, ಸಂಸ್ಕಾರ ಮತ್ತು ನೈತಿಕ ಮೌಲ್ಯಗಳಿಂದ ಸಮೃದ್ಧವಾದ ದೇಶ. ಆದರೂ ದುರಾಸೆಗಳು, ಭ್ರಷ್ಟಾಚಾರ, ಅನಾಚಾರಗಳು ತಾಂಡವವಾಡುತ್ತಿವೆ. ಆಸೆಯೇ ದುಃಖಕ್ಕೆ ಮೂಲ ಎಂದ ಬುದ್ಧನ ಮೂಲ ಸ್ಥಾನವಿದು. ಆದರೆ ಇತ್ತೀಚೆಗೆ ಭಾರತೀಯ ಮೌಲ್ಯ, ಸಂಸ್ಕೃತಿಗಳ ಮೇಲಿನ ಅಪನಂಬಿಕೆ, ಅನ್ಯ ದೇಶಿಯ ಸಂಸ್ಕೃತಿಗಳ ಅವಲಂಬನೆ, ಆಕರ್ಷಣೆಗಳು ನಮ್ಮ ದೇಶೀಯ ಸಂಸ್ಕಾರ ಸಮೃದ್ಧಿಯನ್ನು ಮಂಕುಗೊಳಿಸಿವೆ. ಜಾಗೃತ ಮತ್ತು ಪ್ರಜ್ಞಾವಂತ ನಾಗರಿಕತೆ ಜಾಗೃತ ಭಾರತವನ್ನು ಮರು ಸ್ಥಾಪಿಸಬಹುದು. ಈ ಜಾಗೃತಿ ಅನಾಗರಿಕತೆಯನ್ನು ಕೊನೆಗಾಣಿಸಿ ಭಾರತದ ಸಮೃದ್ಧತೆಗೆ ಕೊಡುಗೆ ನೀಡಬಹುದು. ಭ್ರಷ್ಟಾಚಾರವೆಂಬ ಹುಳು ಭಾರತವೆಂಬ ಕಲ್ಪವೃಕ್ಷವನ್ನು ಒಳ-ಒಳಗೆ ಕೊರೆಯುತ್ತಿದೆ. ಭಾರತದ ಸಮೃದ್ಧಿಯ ತಿರುಳು ನಶಿಸುತ್ತದೆ. ಇದನ್ನು ಕೇವಲ ಕಾನೂನು, ಶಿಕ್ಷೆಗಳಿಂದ ಕಡಿಮೆಗೊಳಿಸಲು, ನಿರ್ಮೂಲನೆ ಮಾಡಲು ಸಾಧ್ಯವಿಲ್ಲ. ಭಾರತ ಜಾಗೃತವಾಗಬೇಕಿದೆ, ತನ್ನ ಒಡಲ ಅಮೋಘ ಸಮೃದ್ಧ ಜ್ಞಾನ ಸಂಪತ್ತು, ಮೌಲ್ಯಗಳಿಂದ ತುಂಬಿಕೊಳ್ಳಬೇಕಿದೆ.
ಭ್ರಷ್ಟಾಚಾರದಂತಹ ಅನಾಚಾರಗಳನ್ನು ತಡೆಯಲು ಭ್ರಷ್ಟಾಚಾರ ನಿಯಂತ್ರಣ ದಳಗಳ ದಾಳಿಯಿಂದ ಸಾಧ್ಯವಿಲ್ಲ. ಅದು ಕೇವಲ ಆ ವಿಷದ ಮುಳ್ಳಿನ ರೆಂಬೆ ಕೊಂಬೆಗಳನ್ನು ಕಡಿದಂತೆ ಆಗುತ್ತದೆ ಹೊರತು ಬುಡ ಸಮೇತ ನಾಶವಾಗದು. ಅವು ಆಮಿಷಗಳ ನೀರು ಬಿದ್ದಾಗ ಮತ್ತೆ ಚಿಗುರಿಕೊಳ್ಳುತ್ತವೆ. ಭಾರತೀಯ ಸಮೃದ್ಧಿಯ ಸಂಪತ್ತೆಂಬ ಅಂತರ್ಜಲವನ್ನು ಹೀರುತ್ತದೆ. ಇದರ ನಿರ್ಮೂಲನೆಗೆ ಉತ್ತಮ ನೈತಿಕ ಶಿಕ್ಷಣವೆಂಬ ಸಮೃದ್ಧಿ, ಸಾಮಾಜಿಕ ಕಳಕಳಿ ಮತ್ತು ಸ್ವಂತ ಹೊಣೆಗಾರಿಕೆಯಿಂದ ಮೂಡುವ ಪ್ರಜ್ಞಾಪೂರ್ವಕ ಜಾಗೃತಿಯಿಂದ ಸಾಧ್ಯ. ಇಂತಹ ಜಾಗೃತಿ ಮೂಡಲು ವಿಶ್ವ ಗುರು ಭಾರತದಲ್ಲಿ ನೈಸರ್ಗಿಕ ಸಂಪತ್ತಿನ ಜತೆಗೆ ನೈತಿಕ ಮತ್ತು ಜ್ಞಾನ ಸಂಪತ್ತಿಗೇನು ಕಡಿಮೆಯಿಲ್ಲ. ಭಾರತೀಯ ಸಮೃದ್ಧತೆ ಕೊಳ್ಳೆ ಹೊಡೆಯುವುದನ್ನು ಮತ್ಸ್ಯದ ಹೆಜ್ಜೆಯಂತೆ ಅದರ ಜಾಡು ಹಿಡಿಯುವುದು ಕಠಿನ. ಆದರೆ ಮತ್ಸ್ಯ ಯಂತ್ರ ಭೇದಿಸಿದ ಚರಿತ್ರೆಯುಳ್ಳ ದೇಶ ನಮ್ಮದು. ಜಾಗೃತ ಮನಸ್ಸು ಅಸಾಧ್ಯವನ್ನೂ ಸಾಧಿಸಬಲ್ಲದು ಎಂಬುದನ್ನು ಮರೆಯುವಂತಿಲ್ಲ. ಜಾಗೃತ ಭಾರತ ಸಮೃದ್ಧ ಭಾರತವನ್ನು ಕಟ್ಟಬಲ್ಲದು.
ದಿನೇಶ ಎಂ.
ಎಸ್.ಡಿ.ಎಂ. ಸ್ನಾತಕೋತ್ತರ ಪದವಿ ಕಾಲೇಜು, ಉಜಿರೆ