ಹೊಸದಿಲ್ಲಿ: ಏಷ್ಯಾದ ರಾಷ್ಟ್ರಗಳಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲೊಂದು ಎಂಬ ಹೆಗ್ಗಳಿಕೆ ಪಡೆದಿರುವ ಭಾರತ, ಗುರುವಾರ ಬಿಡುಗಡೆಯಾಗಿರುವ 2017ರ “ಜಾಗತಿಕ ಹಸಿವು ಸೂಚ್ಯಂಕ’ ಪಟ್ಟಿಯಲ್ಲಿ ಒಟ್ಟು 31.4 ಅಂಕ ಗಳಿಕೆಯ ಮೂಲಕ ನೂರನೇ ಸ್ಥಾನ ಗಳಿಸಿದೆ. ವಾಷಿಂಗ್ಟನ್ ನಲ್ಲಿರುವ “ಇಂಟರ್ ನ್ಯಾಷನಲ್ ಫುಡ್ ಪಾಲಿಸಿ ರಿಸರ್ಚ್ ಇನ್ಸ್ಟಿಟ್ಯೂಟ್’ (ಐಎಫ್ಪಿಆರ್‌ಐ) ಈ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಅಪೌಷ್ಟಿಕತೆ ಹಾಗೂ ಅದರಿಂದುಂಟಾಗುವ ಬಾಧೆಗಳಿಗೆ ಒಳಗಾಗಿರುವ ಶಿಶುಗಳ ಅಂಕಿ- ಅಂಶ ಗಳ ನ್ನಿಟ್ಟುಕೊಂಡು ಈ ವರದಿಯನ್ನು ತಯಾರಿಸಲಾಗಿದೆ. ಆಘಾತಕಾರಿ ವಿಚಾರವೆಂದರೆ, ಮೂರು ವರ್ಷಗಳ ಹಿಂದೆ, ಅಂದರೆ, 2014ರಲ್ಲಿ ಬಿಡುಗಡೆಯಾಗಿದ್ದ ಇದೇ ಪಟ್ಟಿಯಲ್ಲಿ 55ನೇ ಸ್ಥಾನದಲ್ಲಿದ್ದ ಭಾರತ, ಈಗ ಬಿಡುಗಡೆಯಾಗಿರುವ ಪರಿಷ್ಕೃತ ಪಟ್ಟಿಯಲ್ಲಿ 45 ಸ್ಥಾನಗಳ ಕುಸಿತ ಕಂಡು ಒಟ್ಟು 119 ದೇಶಗಳಿರುವ ಈ ಪಟ್ಟಿಯಲ್ಲಿ 100ನೇ ಸ್ಥಾನಕ್ಕಿಳಿದಿದೆ. ಆದರೆ, 2014 ಹಾಗೂ ಈ ವರ್ಷದ ಪಟ್ಟಿ ತಯಾರಿಕಾ ಮಾನದಂಡದಲ್ಲಿ ಸ್ವಲ್ಪಮಟ್ಟಿನ ಬದಲಾವಣೆ ಮಾಡಲಾಗಿದೆ ಎಂದು ಐಎಫ್ಪಿಆರ್‌ಐ ಹೇಳಿದೆ.
ಬಾಂಗ್ಲಾಗಿಂತಲೂ ಕೆಳಮಟ್ಟದಲ್ಲಿ: ಏಷ್ಯಾದ ಇತರ ದೇಶಗಳಾದ ನೇಪಾಲ (72ನೇ ಸ್ಥಾನ), ಮ್ಯಾನ್ಮಾರ್ (77), ಬಾಂಗ್ಲಾದೇಶ (88), ಶ್ರೀಲಂಕಾ (84), ಚೀನ (29) ದೇಶಗಳು ಈ ಶಿಶುಗಳ ಅಪೌಷ್ಟಿಕತೆ ನಿವಾರಿ ಸುವ ದೃಷ್ಟಿಯಲ್ಲಿ ಭಾರತಕ್ಕಿಂತ ಸಾಕಷ್ಟು ಮುಂದಿವೆ. ಸರ್ವಾಧಿಕಾರಿ ಆಡಳಿತ ಜಾರಿಯಲ್ಲಿರುವ ಉತ್ತರ ಕೊರಿಯಾ (93), ಇರಾಕ್ (78) ದೇಶಗಳೂ ಪಟ್ಟಿ ಯ ಲ್ಲಿ ಭಾರತಕ್ಕಿಂತ ಮೇಲೆಯೇ ಇವೆ. ಆದರೆ, ಭಾರತ ಈ ವಿಚಾರದಲ್ಲಿ ಕಳಪೆ ರಾಷ್ಟ್ರವೆಂದು ಪರಿಗಣಿಸಲ್ಪಟ್ಟಿದೆ.
ಪಾಕಿಸ್ಥಾನ (106), ಅಫ್ಘಾನಿಸ್ಥಾನಗಳಿಂತ ಭಾರತ ಉತ್ತಮ ಸ್ಥಾನದಲ್ಲಿರುವುದರಿಂದ ಈ ವಿಚಾರಕ್ಕೆ ಮಾತ್ರ ಭಾರತ ಸಮಾಧಾನ ಪಟ್ಟುಕೊಳ್ಳಬೇಕಿದೆ. ಆದರೂ, ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿ ಆಹಾರ ಭದ್ರತೆಯನ್ನು ಅತ್ಯಂತ ಕಳಪೆ ಮಟ್ಟದಲ್ಲಿ ನಿರ್ವಹಿಸುತ್ತಿರುವ ಮೂರು ರಾಷ್ಟ್ರಗಳೆಂಬ ಹಣೆಪಟ್ಟಿ ಪಾಕಿಸ್ಥಾನ, ಅಫ್ಘಾನಿ ಸ್ಥಾನದೊಂದಿಗೆ ಭಾರತಕ್ಕೂ ಅಂಟಿಕೊಂಡಿ ರು ವುದು ವಿಷಾದನೀಯ ಎನ್ನಲಾಗಿದೆ.
ಚಿಲಿ, ಕ್ಯೂಬಾ, ಟರ್ಕಿ ದೇಶಗಳು ಟಾಪ್ 5ರಲ್ಲಿ ಕಾಣಿಸಿಕೊಂಡಿದ್ದು, ಚಾದ್ ಹಾಗೂ ಮಧ್ಯ ಆಫ್ರಿಕಾದ ರಾಷ್ಟ್ರಗಳು ಪಟ್ಟಿಯ ಕೊನೆಯ ಸ್ಥಾನಗಳಲ್ಲಿವೆ.