ವಿಜಯಪುರ : ಇಂಡಿ ತಾಲೂಕಾ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿಯಿಂದಲೇ ಆನ್ಲೈನ್ ಮೂಲಕ ಲಂಚ ಪಡೆದ ಆರೋಪದ ಮೇಲೆ ಕಚೇರಿ ಅಧೀಕ್ಷಕ ಶಿವಾನಂದ ದೇವರ ಸೇವೆಯಿಂದ ಅಮಾನತ್ತು ಮಾಡಲಾಗಿದೆ.
ಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿರುವ ಡಿ ದರ್ಜೆ ನೌಕರರ ಬಳಿ ಲಂಚ ಸ್ವೀಕಾರ ಮಾಡಿದ್ದ ಅರೋಪ ಸಾಬೀತಾಗಿದೆ. ಕಾರಣ ಶಿವಾನಂದ ಅವರನ್ನು ಸೇವೆಯಿಂದ ಅಮಾನತ್ತು ಮಾಡಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ ರಾಜಕುಮಾರ ಯರಗಲ್ ಆದೇಶಿಸಿದ್ದಾರೆ.
ಇಂಡಿ ತಾಲೂಕಾ ಆಸ್ಪತ್ರೆಯ ಕಚೇರಿ ಅಧೀಕ್ಷಕ ಶಿವಾನಂದ ದೇವರ 2020-21 ರ ಕೊರೊನಾ ರಿಸ್ಕ್ ಅಲೋವೆನ್ಸ್ ಹಣ ನೀಡಲು ಡಿ ದರ್ಜೆಯ 9 ಜನ ನೌಕರರಿಂದ 1 ಲಕ್ಷ ರೂ. ಲಂಚ ಪಡೆದಿದ್ದು ಸಾಬೀತಾಗಿದೆ. ಸದರಿ ಆರೋಪ ಕುರಿತು ಜಿಲ್ಲಾಧಿಕಾರಿ ಡಾ.ವಿ.ಬಿ. ದಾನಮ್ಮನವರ ಇಂಡಿ ಉಪ ವಿಭಾಗಾಧಿಕಾರಿಗಳಿಗೆ ತನಿಖೆ ನಡೆಸಲು ಸೂಚಿಸಿದ್ದರು.
ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಎಸಿ ನೇತೃತ್ವದಲ್ಲಿ ನಡೆದ ತನಿಖೆಯಲ್ಲಿ ಆರೋಪಿ ಶಿವಾನಂದ ಡಿ ದರ್ಜೆ ನೌಕರರಿಂದ ಪೋನ್ ಪೇ ಹಾಗೂ ಬ್ಯಾಂಕ್ ಅಕೌಂಟ್ ಅಧೀಕ್ಷಕ ಶಿವಾನಂದ ಲಂಚದ ಹಣ ಪಡೆದಿರುವುದು ದಾಖಲೆಗಳಲ್ಲಿ ಸಾಬೀತಾಗಿದೆ.
ತಮ್ಮ ಹಣ ವಾಪಸ್ ಕೇಳಿದ್ದ ನೌಕರರ ವಿರುದ್ದ ಜಾತಿನಿಂದನೆ ಕೇಸ್ ಹಾಕುವುದಾಗಿ ಬೆದರಿಕೆ ಹಾಕಿದ್ದ ಕಚೇರಿ ಅಧೀಕ್ಷಕ ಶಿವಾನಂದ ದೇವರ ಅವರನ್ನು
ಇಲಾಖಾ ವಿಚಾರಣೆ ಬಾಕಿ ಇರಿಸಿ ಸೇವೆಯಿಂದ ಅಮಾನತ್ತು ಮಾಡಲಾಗಿದೆ.