ಹೊಸದಿಲ್ಲಿ/ಮುಂಬಯಿ: ಹಲವು ದಿನಗಳಿಂದ ಸೊರಗಿದ್ದ ಬಾಂಬೆ ಷೇರುಪೇಟೆಯಲ್ಲಿ ಬುಧವಾರ ಮತ್ತೆ ಸೂಚ್ಯಂಕ ನೆಗೆದಿದೆ.ಕೇಂದ್ರ ಸಂಪುಟ ಸಭೆಯಲ್ಲಿ ದೂರಸಂಪರ್ಕ ವಲಯದಲ್ಲಿ ಸ್ವಯಂಚಾಲಿತವಾಗಿ ಮತ್ತು ಪೂರ್ವಾನುಮತಿ ಇಲ್ಲದೆ ಶೇ. 100 ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅನುಮೋದನೆ, ಎಜಿಆರ್ ಪಾವತಿಗೆ ಅವಧಿ ವಿಸ್ತರಣೆ, ಅಟೋಮೊಬೈಲ್ ಮತ್ತು ಡ್ರೋನ್ ಕ್ಷೇತ್ರಕ್ಕೆ ಉತ್ಪಾದನ ಆಧಾರಿತ ಪ್ರೋತ್ಸಾಹ ಧನ ನೀಡುವ ಬಗ್ಗೆ ನಿರ್ಧಾರ ಕೈಗೊಂಡದ್ದು ಷೇರು ಪೇಟೆಯಲ್ಲಿ ಸೂಚ್ಯಂಕ ಮತ್ತೆ ನೆಗೆಯುವಂತೆ ಮಾಡಿತು.
ಬಿಎಸ್‌ಇ ಸೂಚ್ಯಂಕ ದಿನಾಂತ್ಯಕ್ಕೆ 476.11 ಪಾಯಿಂಟ್ಸ್ ಏರಿಕೆಯಾಗಿ ಇದುವರೆಗಿನ ಗರಿಷ್ಠ ಅಂದರೆ 58,723.20ರಲ್ಲಿ ಮುಕ್ತಾಯವಾಯಿತು. ಮಧ್ಯಾಂತರದಲ್ಲಿ 58,777.70ರ ವರೆಗೆ ಏರಿಕೆಯಾಗಿತ್ತು. ಕೇಂದ್ರ ಸಂಪುಟದ ನಿರ್ಧಾರದಿಂದಾಗಿ ಭಾರ್ತಿ ಏರ್‌ಟೆಲ್ ಶೇ.4.53, ವೊಡಾಫೋನ್ ಐಡಿಯಾ ಷೇರು ಶೇ.2.76, ಟಾಟಾ ಕಮ್ಯುನಿಕೇಶನ್ಸ್ ಷೇರು ಶೇ. 1.38ರಷ್ಟು ಏರಿಕೆ ದಾಖಲಿಸಿವೆ. ಎನ್‌ಟಿಪಿಸಿ ಷೇರು ಗಳಿಗೆ ಅತ್ಯಧಿಕ ಅಂದರೆ ಶೇ.7.16ರಷ್ಟು ಬೇಡಿಕೆ ಉಂಟಾಗಿತ್ತು.
ನಿಫ್ಟಿ ಸೂಚ್ಯಂಕ ಕೂಡ 139.45ರಷ್ಟು ಏರಿಕೆ ಯಾಗುವ ಮೂಲಕ 17,519.45ರಲ್ಲಿ ಮುಕ್ತಾಯ ವಾಯಿತು. ಮಧ್ಯಾಂತರದಲ್ಲಿ 17,532.70ರ ವರೆಗೆ ಏರಿಕೆಯಾಗಿತ್ತು. ಶಾಂಘೈ, ಟೋಕಿಯ, ಹಾಂಕಾಂಗ್ ಷೇರು ಪೇಟೆಗಳಲ್ಲಿ ಋಣಾತ್ಮಕ ವಹಿವಾಟು ಕಂಡುಬಂತು. ಐರೋಪ್ಯ ಒಕ್ಕೂಟದಲ್ಲಿ ಮಿಶ್ರ ವಹಿವಾಟು ಇತ್ತು.
18 ಪೈಸೆ ಏರಿಕೆ: ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯ 18 ಪೈಸೆ ಏರಿಕೆಯಾಗಿದೆ. ಹೀಗಾಗಿ ದಿನಾಂತ್ಯಕ್ಕೆ 73.50 ರೂ.ಗಳಲ್ಲಿ ವಹಿವಾಟು ಮುಕ್ತಾಯವಾಗಿದೆ.
ಚಿನ್ನವೂ ಜಿಗಿತ: ಹೊಸದಿಲ್ಲಿ ಚಿನಿವಾರ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ 438 ರೂ. ಏರಿಕೆಯಾಗಿದೆ. ಹೀಗಾಗಿ, ಹತ್ತು ಗ್ರಾಂ ಚಿನ್ನಕ್ಕೆ 46,214 ರೂ.ಆಗಿದೆ. ಸೋಮ ವಾರ 45,776 ರೂ. ಆಗಿತ್ತು. ಪ್ರತಿ ಕೆಜಿ ಬೆಳ್ಳಿಯ ಬೆಲೆ 633 ರೂ. ಏರಿಕೆಯಾದ್ದರಿಂದ 62,140 ರೂ. ಆಗಿದೆ.