Advertisement

ಜನ ಮೆಚ್ಚುವ ಚಿಹ್ನೆಗಾಗಿ ಪಕ್ಷೇತರರ ತಡಕಾಟ

07:48 AM Mar 30, 2019 | Team Udayavani |

ಹಾವೇರಿ: “ಕಲ್ಲಂಗಡಿ ಬೇಕೋ, ದ್ರಾಕ್ಷಿ ಸಾಕೋ, ಲ್ಯಾಪ್‌ಟಾಪ್‌ ಬೇಕೋ, ಕಂಪ್ಯೂಟರ್‌ ಸಾಕೋ, ಟಿವಿ ರಿಮೋಟ್‌ ಇರೊ, ಮೌಸ್‌, ಹೆಡ್‌ಫೋನ್‌ಗಳೇ ಬೇಕೋ..’ ಇದು ಮಾರುಕಟ್ಟೆಗೆ ಹೋದವರು ವಸ್ತು ಖರೀದಿಗಾಗಿ ಮಾಡುತ್ತಿರುವ ಚರ್ಚೆಯಲ್ಲ, ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತಿರುವ ಪಕ್ಷೇತರ ಅಭ್ಯರ್ಥಿಗಳು ತಮ್ಮ ಚಿಹ್ನೆ ಆಯ್ಕೆಗಾಗಿ ಮಾಡುತ್ತಿರುವ ಚರ್ಚೆ!

Advertisement

ನೂಲು- ಸೂಜಿ, ತೆರೆದ ಬಾವಿ, ವಿಸಿಲ್‌, ಕೈಗಾಡಿ, ಪರ್ಸ್‌…ಹೀಗೆ 198 ವಸ್ತುಗಳನ್ನು ಚುನಾವಣಾ ಆಯೋಗ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಪಕ್ಷೇತರ ಅಭ್ಯರ್ಥಿ
ಗಳಿಗಾಗಿ ಚಿಹ್ನೆಯಾಗಿ ನೀಡಿದೆ.

ಮೊದಲೆಲ್ಲಾ ಹಳೆಯ ಕಾಲದ ಮನೆ ಬಳಕೆ ವಸ್ತುಗಳನ್ನೇ ಪಕ್ಷೇತರರಿಗೆ ಚಿಹ್ನೆಯಾಗಿ ನೀಡುತ್ತಿದ್ದ ಚುನಾವಣಾ ಆಯೋಗ, ಹಳೆಯ ಕಾಲದ ವಸ್ತುಗಳ ಜತೆಗೆ ಆಧುನಿಕ ದಿನಬಳಕೆ ವಸ್ತುಗಳನ್ನೂ ಚಿಹ್ನೆಗಳ ಪಟ್ಟಿಯಲ್ಲಿ ಹೆಚ್ಚುವರಿಯಾಗಿ ಸೇರಿಸಿದೆ. ಹೀಗಾಗಿ,
ರೊಬೋಟ್‌, ಏರ್‌ ಕೂಲರ್‌, ಪೆನ್‌ ಡ್ರೈವ್‌, ಸಿಸಿ ಕ್ಯಾಮರಾ ಸೇರಿದಂತೆ
ಹಲವು ಆಧುನಿಕ ವಸ್ತುಗಳು ಈ ಬಾರಿ ಪಕ್ಷೇತರರಿಗೆ ಚಿಹ್ನೆಗಳಾಗಿವೆ. ಕಳೆದ
ಚುನಾವಣೆಗಳಲ್ಲಿ 80-90 ಚಿಹ್ನೆಗಳನ್ನು ನೀಡುತ್ತಿದ್ದ ಆಯೋಗ, ಈಗ
ಬರೋಬ್ಬರಿ 198 ಚಿಹ್ನೆಗಳನ್ನು ಪಕ್ಷೇತರರಿಗಾಗಿ ನಿಗದಿಪಡಿಸಿದೆ.

ತೆರೆದ ಬಾವಿ, ಸಿಲಿಂಡರ್‌, ಕೊಡ, ನೀರಿನ ಟ್ಯಾಂಕ್‌, ಟಿಲ್ಲರ್‌, ಟ್ರಾಕ್ಟರ್‌
ಗಳಿಗೆ ಬೇಡಿಕೆ ಹೆಚ್ಚಾಗಿದೆ. ಯಾವ ಚಿಹ್ನೆ ಇಟ್ಟುಕೊಂಡರೆ ಉತ್ತಮ ಎಂಬ ಬಗ್ಗೆ
ಆಪ್ತರಲ್ಲಿ ಚರ್ಚೆ ನಡೆಸುತ್ತಿದ್ದು, ಇಂಥದ್ದೇ ಚಿಹ್ನೆ ಸಿಕ್ಕರೆ ಸಾಕಪ್ಪ ಎಂದು ಆಸೆ
ವ್ಯಕ್ತಪಡಿಸುತ್ತಿದ್ದಾರೆ. ಪಕ್ಷೇತರ ಅಭ್ಯರ್ಥಿಗಳು ಚುನಾವಣಾ ಆಯೋಗ ಮಾನ್ಯ
ಮಾಡಿರುವ 198 ಚಿಹ್ನೆಗಳಲ್ಲಿ ಮೂರು ಚಿಹ್ನೆಗಳನ್ನು ಆಯ್ಕೆ ಮಾಡಿಕೊಳ್ಳಬಹು
ದಾಗಿದ್ದು, ಆಯೋಗವು ಆದ್ಯತೆ ಮೇರೆಗೆ ಒಂದು ಚಿಹ್ನೆ ನೀಡಲಿದೆ.

ಯಾವುದು ಅರ್ಥಪೂರ್ಣ?
ಆಯೋಗ ಈ ಬಾರಿ ಹೆಚ್ಚು ಚಿಹ್ನೆಗಳನ್ನು ನೀಡಿರುವುದರಿಂದ ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬುದೇ ಅಭ್ಯರ್ಥಿಗಳಿಗೆ ದೊಡ್ಡ ಸವಾಲು. ಬ್ಲೇಡ್‌ ಚಿಹ್ನೆ ಪಡೆದರೆ ಮತದಾರರು ತಮ್ಮ ಬಗ್ಗೆ ಬೇರೆ ಅರ್ಥ ಕಲ್ಪಿಸುವರೊ ಏನೋ, ಗಾಜಿನ ಲೋಟದ ಚಿಹ್ನೆ ಪಡೆದರೆ ಜನರು ತಮ್ಮನ್ನು ಯಾವ ದೃಷ್ಟಿ ಯಿಂದ ನೋಡುತ್ತಾರೋ ಏನೋ, ಟೋಪಿ ಚಿಹ್ನೆ ಬಳಸಿಕೊಂಡರೆ ಮತದಾರರು ತಮ್ಮ ಬಗ್ಗೆ ಏನೆಂದುಕೊಳ್ಳುತ್ತಾರೋ ಏನೋ ಎಂಬೆಲ್ಲ ಚಿಂತೆ ಯಲ್ಲಿ ಮುಳುಗಿದ್ದು, ಯಾವುದೇ ಅರ್ಥ ಕಲ್ಪಿಸಿದರೂ ತಮ್ಮ ವ್ಯಕ್ತಿತ್ವಕ್ಕೆ ಧಕ್ಕೆ ಬಾರದ ರೀತಿಯ ಚಿಹ್ನೆ ಆಯ್ಕೆ ಮಾಡಿಕೊಳ್ಳಬೇಕು ಎಂದು ತಡಕಾಡುತ್ತಿದ್ದಾರೆ.

Advertisement

ಕೈ ಬಿಟ್ಟ ಚಿಹ್ನೆಗಳು
ವಿವಿಧ ರಾಜ್ಯಗಳಲ್ಲಿ ಕೆಲ ಪ್ರಾದೇಶಿಕ ಪಕ್ಷಗಳು ಕೆಲ ದಿನ ಬಳಕೆ ವಸ್ತುಗಳನ್ನೇ ತಮ್ಮ ಚಿಹ್ನೆಯನ್ನಾಗಿಸಿಕೊಂಡಿರುವುದರಿಂದ ಚುನಾವಣಾ ಆಯೋಗ ಪಕ್ಷೇತರ ಅಭ್ಯರ್ಥಿಗಳಿಗಾಗಿ ನೀಡುತ್ತಿದ್ದ ಅನೇಕ ಚಿಹ್ನೆಗಳನ್ನು ಕೈಬಿಟ್ಟಿದೆ. ಕಾರು, ಸೈಕಲ್‌, ಫ್ಯಾನ್‌, ಮೆಕ್ಕೆಜೋಳದ ತೆನೆ, ನೇಗಿಲು, ಬಾಣ, ಮನೆ, ಲ್ಯಾಂಪ್‌, ತೆಂಗಿನಕಾಯಿ, ಸಿಂಹ, ಬಾಳೆಹಣ್ಣು, ಬಿಲ್ಲುಬಾಣ, ಬಾಚಣಿಕೆ, ಏಣಿ, ಗುದ್ದಲಿ-ಸಲಿಕೆ, ಕೋಳಿ, ಪುಸ್ತಕ, ತಬಲಾ, ಮೇಣದಬತ್ತಿ, ಬಲ್ಬ್, ಪೊರಕೆ, ಶಂಖ, ಸೂರ್ಯ, ತಕ್ಕಡಿ, ಛತ್ರಿ, ಗಾಳಿಪಟ, ಹ್ಯಾಂಡ್‌ ಪಂಪ್‌ ಸೇರಿದಂತೆ ಪಕ್ಷೇತರರಿಗೆ ನೀಡುತ್ತಿದ್ದ 68 ಚಿಹ್ನೆಗಳನ್ನು ಈ ಬಾರಿ ಚುನಾವಣಾ ಆಯೋಗ ಕೈಬಿಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next