Advertisement

Pak Election Results: ಜೈಲಿನಲ್ಲಿರುವ ಇಮ್ರಾನ್‌ ಬೆಂಬಲಿತ ಪಕ್ಷೇತರ ಅಭ್ಯರ್ಥಿಗಳ ಮೇಲುಗೈ!

11:55 AM Feb 09, 2024 | Team Udayavani |

ಇಸ್ಲಾಮಾಬಾದ್:‌ ಮತದಾನದ ವೇಳೆ ಮೋಸ ಎಸಗಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಫಲಿತಾಂಶ ಘೋಷಣೆ ವಿಳಂಬವಾಗಿರುವ ನಡುವೆಯೇ ಪಾಕಿಸ್ತಾನದ ಚುನಾವಣೆಯಲ್ಲಿ ಜೈಲಿನಲ್ಲಿರುವ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಬೆಂಬಲಿತ ಪಕ್ಷೇತರ ಅಭ್ಯರ್ಥಿಗಳು ಮುನ್ನಡೆ ಸಾಧಿಸಿರುವುದಾಗಿ ವರದಿ ತಿಳಿಸಿದೆ.  ಆದರೆ ನಿಖರ ಫಲಿತಾಂಶ ಇನ್ನಷ್ಟೇ ತಿಳಿದು ಬರಬೇಕಾಗಿದೆ.

Advertisement

ಗುರುವಾರ ಪಾಕಿಸ್ತಾನದಲ್ಲಿ ನಡೆದ ಚುನಾವಣೆಯಲ್ಲಿ ಇಮ್ರಾನ್‌ ಖಾನ್‌ ನೇತೃತ್ವದ ಪಾಕಿಸ್ತಾನ್‌ ತೇಹ್ರಿಕ್‌ ಇನ್ಸಾಫ್‌ (ಪಿಟಿಐ0 ಪಕ್ಷ ಸ್ಪರ್ಧಿಸಲು ನಿಷೇಧ ಹೇರಿತ್ತು. ಆದರೆ ಸ್ಥಳೀಯ ಟಿವಿ ಚಾನೆಲ್‌ ಗಳ ಅನಧಿಕೃತ ವರದಿಯ ಪ್ರಕಾರ, ಬಹುತೇಕ ಕ್ಷೇತ್ರಗಳಲ್ಲಿ ಖಾನ್‌ ಬೆಂಬಲಿತ ಪಕ್ಷೇತರ ಅಭ್ಯರ್ಥಿಗಳು ಮುನ್ನಡೆ ಸಾಧಿಸಿರುವುದಾಗಿ ಹೇಳಿದೆ.

ಚುನಾವಣೆ ಮುಗಿದು 16 ಗಂಟೆಗಳ ಕಾಲ ಮುಗಿದ ನಂತರವೂ ಪಾಕಿಸ್ತಾನದ ಚುನಾವಣಾ ಆಯೋಗ ಕೇವಲ 13 ಸ್ಥಾನಗಳ ಫಲಿತಾಂಶವನ್ನು ಮಾತ್ರ ಘೋಷಿಸಿದೆ.  ಐವರು ಪಕ್ಷೇತರ ಅಭ್ಯರ್ಥಿಗಳು, ಪಿಎಂಎಲ್‌ (ಎನ್)‌ ಪಕ್ಷದ ನಾಲ್ವರು ಹಾಗೂ ಪಾಕಿಸ್ತಾನ್‌ ಪೀಪಲ್ಸ್‌ ಪಕ್ಷದ ನಾಲ್ವರು ಅಭ್ಯರ್ಥಿಗಳು ಜಯಗಳಿಸಿರುವುದಾಗಿ ತಿಳಿಸಿದೆ.

ಅಸೆಂಬ್ಲಿ ಚುನಾವಣೆಯಲ್ಲಿ ಪಿಟಿಐ ಬೆಂಬಲಿತ ಪಕ್ಷೇತರ ಅಭ್ಯರ್ಥಿಗಳು ಮೇಲುಗೈ ಸಾಧಿಸಿರುವುದಾಗಿ ಇಂಗ್ಲಿಷ್‌ ದೈನಿಕ ಎಕ್ಸ್‌ ಪ್ರೆಸ್‌ ಟ್ರಿಬ್ಯೂನ್‌ ಶುಕ್ರವಾರ (ಫೆ.09) ವರದಿ ಮಾಡಿದೆ. ನಿಖರ ಫಲಿತಾಂಶ ಇನ್ನಷ್ಟೇ ಹೊರಬೀಳಬೇಕಾಗಿದೆ ಎಂದು ಯಾಲೆ ಯೂನಿರ್ವಸಿಟಿಯ ಅಸಿಸ್ಟೆಂಟ್‌ ಪ್ರೊಫೆಸರ್‌ ಸಾರಾ ಖಾನ್‌ ಎಎಫ್‌ ಪಿಗೆ ತಿಳಿಸಿದ್ದಾರೆ.

ಪಾಕಿಸ್ತಾನ್‌ ತೇಹ್ರಿಕ್‌ ಇ ಇನ್ಸಾಫ್‌ ಬೆಂಬಲಿತ ಪಕ್ಷೇತರ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದು, ಪಾಕ್‌ ನಲ್ಲಿ ಮುಂದಿನ ಸರ್ಕಾರ ರಚನೆ ಮಾಡುವ 3/2ರಷ್ಟು ಬಹುಮತ ಪಡೆಯುವುದು ಸ್ಪಷ್ಟ ಎಂದು ಪಿಟಿಐ ಮುಖ್ಯ ಸಂಘಟಕ ಓಮರ್‌ ಅಯೂಬ್‌ ಖಾನ್‌ ಬಿಡುಗಡೆಗೊಳಿಸಿರುವ ವಿಡಿಯೋದಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Advertisement

ಪಾಕ್‌ ಚುನಾವಣೆಯಲ್ಲಿ ಮಾಜಿ ಪ್ರಧಾನಿ ನವಾಜ್‌ ಷರೀಫ್‌ ನೇತೃತ್ವದ ಪಿಎಂಎಲ್‌ ಎನ್‌ ಪಕ್ಷ ಬಹುತೇಕ ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು, ನವಾಜ್‌ ಮತ್ತು ಇಮ್ರಾನ್‌ ಖಾನ್‌ ಪಕ್ಷಗಳ ನಡುವೆ ಭಾರೀ ಪೈಪೋಟಿ ಏರ್ಪಟ್ಟಿರುವುದಾಗಿ ವರದಿ ವಿವರಿಸಿದೆ.

ನಮ್ಮ ನಿರೀಕ್ಷೆ ಮೀರಿ ಪಾಕಿಸ್ತಾನ್‌ ಪೀಪಲ್ಸ್‌ ಪಾರ್ಟಿ ಗೆಲುವು ಸಾಧಿಸುತ್ತಿದೆ ಎಂದು ಪಕ್ಷದ ಮುಖಂಡ ಬಿಲಾವಲ್‌ ಭುಟ್ಟೋ ಝರ್ದಾರಿ ತಿಳಿಸಿರುವುದಾಗಿ ವರದಿ ಹೇಳಿದೆ.

ಚುನಾವಣೆ ಹಿನ್ನೆಲೆಯಲ್ಲಿ ಪಾಕಿಸ್ತಾನದಾದ್ಯಂತ ಸೇನೆ, ಮಿಲಿಟರಿ ಹಾಗೂ ಪೊಲೀಸ್‌ ಸೇರಿದಂತೆ 6,50,000 ಅಧಿಕ ಸಿಬಂದಿಯನ್ನು ನಿಯೋಜಿಸಲಾಗಿದೆ ಎಂದು ವರದಿ ತಿಳಿಸಿದೆ. ಬಿಗಿ ಭದ್ರತೆಯ ನಡುವೆಯೇ ದೇಶಾದ್ಯಂತ ಒಟ್ಟು 51 ದಾಳಿ ನಡೆದಿದ್ದು, 10 ಭದ್ರತಾ ಸಿಬಂದಿಗಳು ಸಾವನ್ನಪ್ಪಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next