ಬೆಂಗಳೂರು: ಸಂಸದೆ ಸುಮಲತಾ ಅವರಿಗೆ ಮತ್ತೊಮ್ಮೆ ಮಂಡ್ಯ ಲೋಕಸಭಾ ಕ್ಷೇತದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಅಭಿಮಾನಿಗಳು ಒತ್ತಾಯಿಸಿದ್ದಾರೆ. ಸುಮಲತಾ ಅವರ ಜೆಪಿ ನಗರದ ನಿವಾಸದ ಮುಂದೆ ಶನಿವಾರ ನೂರಾರು ಅಭಿಮಾನಿಗಳು ಜಮಾಯಿಸಿದ್ದರು.
ಪ್ರಮುಖ ಬೆಂಬಲಿಗರೊಂದಿಗೆ ಚರ್ಚೆ ನಡೆಸಿ ಅಭಿಮಾನಿಗಳನ್ನುದ್ದೇಶಿಸಿ ಮಾತನಾಡಿದ ಸಂಸದೆ ಸುಮಲತಾ, ‘ನಿಮ್ಮನ್ನ ನೋಯಿಸುವ ನಿರ್ಧಾರ ನಾನು ತೆಗೆದುಕೊಳ್ಳುವುದಿಲ್ಲ. ಏಪ್ರಿಲ್ 3ರಂದು ಮಂಡ್ಯದಲ್ಲಿ ಸಭೆ ಮಾಡಿ ನನ್ನ ನಿರ್ಧಾರ ತಿಳಿಸುತ್ತೇನೆ ಎಂದು ಮತ್ತಷ್ಟು ಕುತೂಹಲ ಮೂಡಿಸಿದ್ದಾರೆ.
”ಬಿಜೆಪಿ ನನಗೆ ಬೇರೆ ಕ್ಷೇತ್ರದಲ್ಲಿ ಸ್ಪರ್ಧಿಸಲು ಆಫರ್ ನೀಡಿತ್ತು, ಆದರೆ ಮಂಡ್ಯದ ಜನರೇ ನನಗೆ ಶಕ್ತಿ.ಮಂಡ್ಯ ಜನ ಯಾವುದನ್ನೂ ಲೆಕ್ಕಿಸದೆ ಅಂಬರೀಶ್ ಅವರ ಮೇಲಿಟ್ಟಿರುವ ಪ್ರೀತಿಯಿಂದ ಕಳೆದ ಚುನಾವಣೆಯಲ್ಲಿ ಪ್ರಭಾವಿಗಳ ಬೆಂಬಲವಿಲ್ಲದೆ ನಾನು ಗೆಲುವು ಸಾಧಿಸಲು ಸಾಧ್ಯವಾಯಿತು”ಎಂದರು.
”ಇಲ್ಲಿಯವರೆಗೆ ನಾನು ನುಡಿದಂತೆ ನಡೆದುಕೊಂಡಿದ್ದೇನೆ. ಮಂಡ್ಯಕ್ಕೆ ಕೈಲಾದಷ್ಟು ಪ್ರಾಮಾಣಿಕ ಸೇವೆ ಮಾಡಿ ಜಿಲ್ಲೆಯ ಘನತೆಯನ್ನು ಸಂಸತ್ತಿನಲ್ಲೂ ಎತ್ತಿ ಹಿಡಿದಿದ್ದೇನೆ. ಮಂಡ್ಯದೊಂದಿಗೆ ನನ್ನದು ಕೇವಲ ರಾಜಕೀಯ ಸಂಬಂಧವಲ್ಲ, ಭಾವನೆ ಮತ್ತು ಪ್ರೀತಿ ಇದೆ. ನನ್ನ ಸ್ವಾರ್ಥ ಅನ್ನವುದಾದರೆ ನನಗೆ ಮಂಡ್ಯವೇ ಬೇಕು” ಎಂದು ಹೇಳಿಕೆ ನೀಡಿ ಪಕ್ಷೇತರರಾಗಿ ಕಣಕ್ಕಿಳಿಯುವ ಸುಳಿವು ನೀಡಿದ್ದಾರೆ.
”ನಿಮ್ಮ ಋಣ ಬಿಡುವ ಪ್ರಶ್ನೆಯೇ ಇಲ್ಲ. ರಾಜಕೀಯ ಬರುತ್ತದೆ, ಹೋಗುತ್ತದೆ. ನನ್ನ ನಿರ್ಧಾರ ಮಂಡ್ಯದ ಜನರೊಂದಿಗೆ ಇರುತ್ತದೆ. ಒಂದಷ್ಟು ಚರ್ಚೆ ಮಾಡಬೇಕಾಗಿದೆ” ಎಂದರು.