ಶಿವಮೊಗ್ಗ : ನೊಂದ ಬಿಜೆಪಿ ಕಾರ್ಯಕರ್ತರ ದನಿಯಾಗಿ ನಾನು ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ನಾನು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಮಾಜಿ ಡಿಸಿಎಂ, ಹಿರಿಯ ಬಿಜೆಪಿ ನಾಯಕ ಕೆ.ಎಸ್. ಈಶ್ವರಪ್ಪ ಘೋಷಿಸಿದ್ದಾರೆ.
ಕೆ.ಇ. ಕಾಂತೇಶ್ ಅವರಿಗೆ ಬಿಜೆಪಿಯಿಂದ ಹಾವೇರಿ ಲೋಕಸಭಾ ಕ್ಷೇತ್ರದ ಟಿಕೆಟ್ ತಪ್ಪಿದ ವಿಚಾರಕ್ಕೆ ಸಂಬಂಧಿಸಿ ಶಿವಮೊಗ್ಗ ನಗರದ ಬಂಜಾರ್ ಭವನದಲ್ಲಿ ಸ್ವಪ್ರತಿಷ್ಠೆಯ ಪ್ರದರ್ಶನವಲ್ಲ ಸ್ವಾಭಿಮಾನದ ಸಂಘರ್ಷ ಎನ್ನುವ ಘೋಷವಾಕ್ಯದಲ್ಲಿ ಮುಂದಿನ ರಾಜಕೀಯ ನಡೆ ಕುರಿತು ಮಹತ್ವದ ಸಭೆಯಲ್ಲಿ ಈಶ್ವರಪ್ಪ ಘೋಷಣೆ ಮಾಡಿದ್ದಾರೆ.
ಉದ್ವೇಗದ ತೀರ್ಮಾನ ಅಲ್ಲ, ಒಂದೇ ನಿಮಿಷದಲ್ಲಿ ನಾನು ಚುನಾವಣೆಗೆ ನಿಲ್ಲುವುದಿಲ್ಲ ಎಂದು ಪತ್ರ ಕೊಟ್ಟಿದ್ದೆ. ಹಿಂದುತ್ವಕ್ಕೆ ಅನ್ಯಾಯ ಆಗಬಾರದು, ಒಂದೇ ಕುಟುಂಬದ ಕೈಯಲ್ಲಿ ಪಕ್ಷ ಇರಬಾರದು ನೊಂದ ಸಾವಿರಾರು ಕಾರ್ಯಕರ್ತರ ದನಿಯಾಗಿ ನಾನು ಈ ನಿರ್ಧಾರ ಕೈಗೊಂಡಿದ್ದೇನೆ ಎಂದು ಆಕ್ರೋಶದ ಮಾತುಗಳನ್ನಾಡಿದರು.
ನಾನು ಮೋದಿ ವಿರುದ್ಧ ಹೋಗುತ್ತಿಲ್ಲ. ನನ್ನ ಹೃದಯದಲ್ಲಿ ರಾಮ ಮತ್ತು ಮೋದಿ ಅವರು ಇದ್ದಾರೆ. ಯಡಿಯೂರಪ್ಪ ಅವರ ಹೃದಯದಲ್ಲಿ ಇಬ್ಬರು ಮಕ್ಕಳು ಮತ್ತು ಶೋಭಾ ಇರುವುದು ಎಂದು ಕಿಡಿ ಕಾರಿದರು.
ಯಡಿಯೂರಪ್ಪ ಅವರೇ ಮನೆಗೆ ಹೋದಾಗ ಹಾವೇರಿ ಟಿಕೆಟ್ ಕೊಡಿಸಿ ಗೆಲ್ಲಿಸಲು ಓಡಾಡುತ್ತೇನೆ ಎಂದು ಭರವಸೆ ನೀಡಿದ್ದರು.ಆದರೆ ಬೊಮ್ಮಾಯಿ ಅವರಿಗೆ ಟಿಕೆಟ್ ಕೊಡಬೇಕು ಎಂದು ಹಠ ಹಿಡಿದಿದ್ದಾರೆ ಎಂಬ ವರದಿ ಬಂತು. ಇನ್ನೊಂದೆಡೆ ಶೋಭಾ ಕರಂದ್ಲಾಜೆ ಅವರಿಗೆ ಉಡುಪಿ-ಚಿಕ್ಕಮಗಳೂರು ಟಿಕೆಟ್ ಕೊಡಿಸಲು ಹಠ ಹಿಡಿದಿದ್ದಾರೆ ಎಂದು ಟಿವಿಗಳಲ್ಲಿ ವರದಿ ಬಂತು. ಕುಟುಂಬ ರಾಜಕಾರಣ ಬೇಡ ಎಂಬ ನರೇಂದ್ರ ಮೋದಿಯವರ ಮಾತು ಕೇಳಬೇಕೋ ಬೇಡವೋ ನೀವು ತೀರ್ಮಾನ ಮಾಡಿ, ಪ್ರಾಣ ಹೋದರೂ ನಾನು ಮೋದಿಯವರನ್ನು ವಿರೋಧ ಮಾಡಲು ಸಾಧ್ಯವಿಲ್ಲ ಎಂದರು.
ಮೋದಿ ಪ್ರಧಾನಿಯಾಗುವ ಮೊದಲು ವಿಚಿತ್ರ ಪರಿಸ್ಥಿತಿ ದೇಶದಲ್ಲಿತ್ತು, ಪ್ರಪಂಚದ ಹೆಚ್ಚಿನ ರಾಷ್ಟ್ರಗಳು ಪಾಕಿಸ್ಥಾನ ದೊಂದಿಗೆ ಇದ್ದವು, ವೀಸಾ ರದ್ದು ಮಾಡಿದವರೂ ಸೇರಿ ಎಲ್ಲ ರಾಷ್ಟ್ರಗಳೂ ನಮ್ಮ ದೇಶಕ್ಕೆ ಬನ್ನಿ ಎಂದು ಮೋದಿ ಅವರನ್ನು ಕರೆಯುತ್ತಿದ್ದಾರೆ. ಮುಸ್ಲಿಂ ರಾಷ್ಟ್ರಗಳೂ ಮೋದಿಯವರನ್ನು ಸ್ವಾಗತಿಸುತ್ತಿವೆ. ಪಾಕಿಸ್ಥಾನ ಈಗ ಒಂಟಿಯಾಗಿದೆ ಎಂದರು.
ಬಿಜೆಪಿಯಲ್ಲೂ ಕಾಂಗ್ರೆಸ್ ಸಂಸ್ಕೃತಿ ಬಂದಿದೆಯಾ? ಎಂದು ಪ್ರಶ್ನಿಸಿದರು. ನೊಂದ ಕಾರ್ಯಕರ್ತರು ಇದ್ದಾರೆ. ಚುನಾವಣೆಗೆ ನಿಲ್ಲಬೇಡ ಎಂದಾಗ ಮೋದಿ ಅವರು ಕರೆ ಮಾಡಿದ್ದರು. ಒಂದು ಕುಟುಂಬದ ಹಿಡಿತದಲ್ಲಿ ಕರ್ನಾಟಕ ಬಿಜೆಪಿ ಸಿಗಬಾರದು , ಹಿಂದುತ್ವದ ಹೋರಾಟಗಾರಿಗೆ ನ್ಯಾಯ ಸಿಗಬೇಕು. ನನಗಾಗಿ ನೀವು ಸಮಯ ನೀಡಬೇಕು ಎಂದು ಬೆಂಬಲಿಗರಿಗೆ ಮನವಿ ಮಾಡಿದರು.ಟಿಕೆಟ್ ಕೊಟ್ಟ ಬಿಜೆಪಿ ಅಭ್ಯರ್ಥಿಗಳಿಗೂ, ನನಗೂ ಹೋಲಿಕೆ ಮಾಡಿ, ಎಲ್ಲರಿಗಿಂತ ಮೋದಿ ಅವರ ಮೇಲೆ ನನ್ನ ಅಭಿಮಾನ ಗುಲಗಂಜಿಗಿಂತ ಸ್ವಲ್ಪ ಹೆಚ್ಚಿರಬಹುದು ಎಂದು ಹೇಳಿದರು.
ಮಾತಿನ ಕೊನೆಯಲ್ಲಿ ನನ್ನನ್ನು ಗೆಲ್ಲಿಸಿ ಮೋದಿ ಅವರಿಗೆ ಬೆಂಬಲ ಸೂಚಿಸಿ,ನೊಂದ ಬಿಜೆಪಿ ಹಿಂದೂ ಪರ ಕಾರ್ಯಕರ್ತರ ದನಿಯಾಗಿ ಎಂದು ನರೇಂದ್ರ ಮೋದಿ, ಭಾರತ್ ಮಾತಾಕಿ ಜೈ ಎಂದು ಘೋಷಣೆ ಕೂಗಿದರು.
ನೂರಾರು ಮುಖಂಡರು, ವಿವಿಧ ಸಮುದಾಯದ ಮುಖಂಡರು ಹಾಗೂ ಮಾಜಿ ಪಾಲಿಕೆ ಸದಸ್ಯರು ಸಭೆಯಲ್ಲಿ ಹಾಜರಿದ್ದು ಈಶ್ವರಪ್ಪ ಅವರಿಗೆ ಬೆಂಬಲ ಸೂಚಿಸಿದರು.