ಬೆಂಗಳೂರು: ಕೇಂದ್ರ ತನಿಖಾ ಸಂಸ್ಥೆ (ಸಿಬಿಐ)ಯು ಸ್ವತಂತ್ರ ಮತ್ತು ಸ್ವಾಯತ್ತವಾಗಿರಬೇಕು. ಈ ನಿಟ್ಟಿನಲ್ಲಿ ಕೇಂದ್ರ ಸರಕಾರಕ್ಕೆ ಅಗತ್ಯ ನಿರ್ದೇಶನ ನೀಡಬೇಕು ಎಂದು ಕೋರಿ ಬೀದರ್ ಜಿಲ್ಲೆಯ ಸಾಮಾಜಿಕ ಕಾರ್ಯಕರ್ತ ಗುರುನಾಥ ವದ್ದೆ ಅವರು ಹೈಕೋರ್ಟಿಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.
ಅರ್ಜಿಯು ನ್ಯಾ| ಬಿ.ಎಂ. ಶ್ಯಾಮ್‌ಪ್ರಸಾದ್ ಹಾಗೂ ನ್ಯಾ| ಎಂ.ಜಿ.ಎಸ್. ಕಮಾಲ್ ಅವರಿದ್ದ ರಜಾಕಾಲದ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು. ಕೇಂದ್ರ ಸರಕಾರ ಹಾಗೂ ಸಿಬಿಐ ನಿರ್ದೇಶಕರನ್ನು ಅರ್ಜಿಯಲ್ಲಿ ಪ್ರತಿವಾದಿಯನ್ನಾಗಿ ಮಾಡಲಾಗಿದೆ.
ಅರ್ಜಿ ಪರಿಶೀಲಿಸಿದ ನ್ಯಾಯಪೀಠ, ಅರ್ಜಿಯಲ್ಲಿ ಎತ್ತಿರುವ ಅಂಶಗಳು ಅದಕ್ಕೆ ಪೂರಕವಾಗಿ ಲಗತ್ತಿಸಿರುವ ದಾಖಲೆಗಳನ್ನು ಪರಿಗಣಿಸಿ ಈ ಅರ್ಜಿಯು ರಜಾಕಾಲದ ಬಳಿಕದ ನಿಯಮಿತ (ರೆಗ್ಯುಲರ್) ನ್ಯಾಯಪೀಠದ ಮುಂದೆ ವಿಚಾರಣೆಗೆ ನಿಗದಿಯಾಗುವುದು ಉತ್ತಮ ಎಂದು ಹೇಳಿತು. ಅದರಂತೆ, ಅರ್ಜಿಯನ್ನು ರಜಾ ಅವಧಿ ಮುಗಿದ ಮೊದಲ ವಾರದಲ್ಲಿ ವಿಚಾರಣೆಗೆ ನಿಗದಿಪಡಿಸುವಂತೆ ಸೂಚಿಸಿ ವಿಚಾರಣೆ ಮುಂದೂಡಿತು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ, ಸಂವಿಧಾನದ ಹಿತಾಸಕ್ತಿಯಿಂದ ಸ್ವತಂತ್ರ ತನಿಖಾ ಸಂಸ್ಥೆ ಇರುವುದು ಅತ್ಯಗತ್ಯ. ಸಾಂವಿಧಾನಿಕ ಸ್ವತಂತ್ರ ತನಿಖಾ ಸಂಸ್ಥೆಗಳಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಸ್ತಕ್ಷೇಪ ಮಾಡುವಂತಿರಬಾರದು. ಹಾಗಾಗಿ, ಸಿಬಿಐ ಅನ್ನು ಸ್ವತಂತ್ರ ಸಾಂವಿಧಾನಿಕ ತನಿಖಾ ಸಂಸ್ಥೆಯಾಗಿ ರೂಪಿಸುವಂತೆ ಕೋರಿ ತಾವು 2022ರ ಏ.8ರಂದು ಸಲ್ಲಿಸಿರುವ ಮನವಿ ಪತ್ರ ಪರಿಗಣಿಸಿ ಕೂಡಲೇ ಅಗತ್ಯ ಕ್ರಮ ಜರುಗಿಸುವಂತೆ ಕೇಂದ್ರ ಗೃಹ ಇಲಾಖೆ ಕಾರ್ಯದರ್ಶಿಗೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.
ದೆಹಲಿ ಪೊಲೀಸ್ ಎಸ್ಟ್ರಾಬ್ಲಿಸ್ಮೆಂಟ್ ಕಾಯ್ದೆ (ಡಿಎಸ್‌ಪಿಇ)-1946ರ ಅಡಿಯಲ್ಲಿ ಸಿಬಿಐ ರಚಿಸಲಾಗಿದೆ. ಅದು ಕೇಂದ್ರ ಸರ್ಕಾರದ ನಿಯಂತ್ರಣದಲ್ಲಿದೆ. ಇದರಿಂದ ಸ್ವತಂತ್ರ ಹಾಗೂ ನಿಸ್ಪಕ್ಷಪಾತವಾಗಿ ಕಾರ್ಯ ನಿರ್ವಹಿಸಲು ಸಿಬಿಐಗೆ ಸಾಧ್ಯವಾಗುತ್ತಿಲ್ಲ. ಕೇಂದ್ರದ ಒತ್ತಡದಲ್ಲಿಯೇ ಸಿಬಿಐ ಕಾರ್ಯ ನಿರ್ವಹಿಸಬೇಕಿದೆ. ಸಿಬಿಐ ಕೇಂದ್ರ ಸರ್ಕಾರದ ನಿಯಂತ್ರಣದಲ್ಲಿದೆ ಎಂದು ರಾಜ್ಯ ಸರ್ಕಾರ ಮತ್ತು ರಾಜಕೀಯ ಪಕ್ಷಗಳು ಆಗಾಗ ಆರೋಪ ಮಾಡುತ್ತವೆ. ಈ ಹಿನ್ನೆಲೆಯನ್ನು ಸಿಬಿಐ ಸ್ವತಂತ್ರ ಹಾಗೂ ಸ್ವಾಯತ್ತ ಸಂಸ್ಥೆ ಆಗಬೇಕಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.