ಹೊಸದಿಲ್ಲಿ: ದೇಶದಲ್ಲಿ ಒಂದರ ಹಿಂದೆ ಮತ್ತೂಂದರಂತೆ ಚುನಾವಣೆಗಳು ನಡೆಯುವುದು ಅಭಿವೃದ್ಧಿಗೆ ತೊಡಕುಂಟು ಮಾಡುತ್ತಿದೆ. ಹಾಗಾಗಿ ಒಂದು ರಾಷ್ಟ್ರ ಒಂದು ಚುನಾವಣೆಯನ್ನು ಜಾರಿಗೊಳಿಸುವ ಅಗತ್ಯವಿದೆ. ಈ ಕನಸನ್ನು ನನಸಾಗಿಸಲು ವಿಪಕ್ಷಗಳೂ ಕೈ ಜೋಡಿಸಬೇಕು ಎಂದು ಪ್ರಧಾನಿ ಮೋದಿ ಕರೆ ನೀಡಿದ್ದಾರೆ.
ಜತೆಗೆ ಹಲವೆಡೆ 6 ತಿಂಗಳಿಗೆ ಒಮ್ಮೆ ಎನ್ನುವಂತೆ ಚುನಾವಣೆಗಳು ನಡೆಯುತ್ತಲೇ ಇರುತ್ತವೆ. ಹೀಗಾಗಿ ಯಾವುದೇ ಯೋಜನೆ, ಅಭಿವೃದ್ಧಿ ಕಾರ್ಯ ಎಲ್ಲವನ್ನೂ ಅವುಗಳ ಜತೆಗೇ ಥಳಕು ಹಾಕಲಾಗುತ್ತಿದೆ. ಪದೇ ಪದೇ ಚುನಾವಣೆ ನಡೆವುದರಿಂದ ಅಭಿವೃದ್ಧಿಗೆ ತೊಡಕಾಗುವುದು ಮಾತ್ರವಲ್ಲದೇ, ಸಂಪನ್ಮೂಲಗಳ ನಷ್ಟವೂ ಆಗುತ್ತಿದೆ. ಇದೆಲ್ಲವನ್ನೂ ಸರಿ ಪಡಿಸಲು ಒಂದು ರಾಷ್ಟ್ರ ಒಂದು ಚುನಾವಣೆ ಜಾರಿಯಾಗಬೇಕು. ಈಗಾಗಲೇ ಈ ಸಂಬಂಧಿಸಿದಂತೆ ರಾಷ್ಟ್ರಾದ್ಯಂತ ಸಮಾಲೋಚನೆಗಳನ್ನು ನಡೆಸಲಾಗಿದೆ.
ಎಲ್ಲ ರಾಜಕೀಯ ಪಕ್ಷಗಳೂ ಅವರವರ ಅಭಿಪ್ರಾಯವನ್ನೂ ನೀಡಿವೆ. ಈ ಕುರಿತು ಉನ್ನತ ಮಟ್ಟದ ಸಮಿತಿಯು ಕೂಡ ಉತ್ತಮ ವರದಿಯನ್ನೇ ನೀಡಿದೆ. ಏಕಕಾಲದ ಚುನಾವಣೆ ಅಭಿವೃದ್ಧಿಯ ಜತೆಗೆ ಸಾಮಾಜಿಕ ಒಗ್ಗಟ್ಟನ್ನು ಬಲಪಡಿಸಿ ಪ್ರಜಾಪ್ರಭುತ್ವದ ಅಡಿಪಾ ಯವನ್ನೂ ಬಲಗೊಳಿಸುತ್ತದೆ, ಭಾರತದ ಆಶೋತ್ತರಗಳ ಈಡೇರಿಕೆಗೂ ನೆರವಾಗುತ್ತದೆ. ಹಾಗಾಗಿ ಈ ಕನಸನ್ನು ಸಾಕಾರಗೊಳಿಸಲು ಎಲ್ಲರೂ ಕೈ ಜೋಡಿಸಬೇಕೆಂದು ಮೋದಿ ಕರೆ ನೀಡಿದ್ದಾರೆ.
ಭ್ರಷ್ಟರು, ಭ್ರಷ್ಟಾಚಾರದ ವಿರುದ್ಧ ಕೇಂದ್ರ ಸರಕಾರ ಹೋರಾಟ
ಭ್ರಷ್ಟಾಚಾರದ ವಿರುದ್ಧ ಕೇಂದ್ರ ಸರಕಾರ ಪೂರ್ಣ ಅಸಹಿಷ್ಣು
ಕೇಂದ್ರ ಸರಕಾರ ಭ್ರಷ್ಟಾಚಾರದ ವಿರುದ್ಧ ಪೂರ್ಣ ಅಸಹಿಷ್ಣುತೆ ಹೊಂದಿದೆ. ಅದರ ವಿರುದ್ಧ ಹೋರಾಟ ನಡೆಸಲಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಭ್ರಷ್ಟರು ಜನಸಾಮಾನ್ಯರಿಗೆ ಮೋಸ ಮಾಡಲು ಧೈರ್ಯ ಮಾಡದಂತೆ ನಾನು ಅವರ ಮನಸ್ಸಿನಲ್ಲಿ ಭಯ ಹುಟ್ಟುಹಾಕಲು ಇಚ್ಛಿಸುತ್ತೇನೆ ಎಂದರು.
ವಿಪಕ್ಷಗಳ ವಿರುದ್ಧ ಪರೋಕ್ಷ ವಾಗ್ಧಾಳಿ ನಡೆಸಿದ ಮೋದಿ “ಈ ದೇಶದಲ್ಲಿ ಇನ್ನೂ ಹಲವರು ಭ್ರಷ್ಟಾಚಾರವನ್ನು ಹಾಡಿ ಹೊಗಳುತ್ತಾರೆ. ಭ್ರಷ್ಟರನ್ನು ಗೌರವಿಸುತ್ತಾರೆ. ಭ್ರಷ್ಟಾಚಾರವನ್ನು ಸಂಪೂರ್ಣವಾಗಿ ತೊಡೆದುಹಾಕಲು ಶೂನ್ಯ ಸಹಿಷ್ಣುತೆಯೊಂದೇ ಮಾರ್ಗ ಎಂದು ಹೇಳಿದ್ದಾರೆ. ನನ್ನ ಮೇಲೆ ಸಾಕಷ್ಟು ವೈಯಕ್ತಿಕ ದಾಳಿಗಳು ನಡೆದಿವೆ. ಆದರೆ ನನಗೆ ನನ್ನ ಘನತೆಗಿಂತ ಈ ದೇಶ ದೊಡ್ಡದು ಎಂದು ನಂಬಿದ್ದೇನೆ. ನಮ್ಮ ಸರಕಾರವು ದೇಶ ಮೊದಲು ನೀತಿಯ ಅನುಸಾರ ಕಾರ್ಯನಿರ್ವಹಿಸುತ್ತಿದೆ ಎಂದರು.