ಮಂಗಳೂರು: ದಿಲ್ಲಿಯ ಕೆಂಪುಕೋಟೆಯಲ್ಲಿ ಗುರುವಾರ ಜರಗಿದ 78ನೇ ಸ್ವಾತಂತ್ರ್ಯೋತ್ಸವದ ಕಾರ್ಯಕ್ರಮದಲ್ಲಿ ಮಂಗಳೂ ರಿನ ಶಕ್ತಿನಗರ ನಾಲ್ಯಪದವು ಕುವೆಂಪು ಶತಮಾನೋತ್ಸವ ಉನ್ನತೀಕರಿಸಿದ ಮಾದರಿ ಸ.ಹಿ.ಪ್ರಾ. ಶಾಲೆಯ 8ನೇ ತರಗತಿ ವಿದ್ಯಾರ್ಥಿನಿ ಪೂರ್ವಿ ಯು. ಶೆಟ್ಟಿ ಹಾಗೂ ಶಿಕ್ಷಕಿ ಶ್ವೇತಾ ಕೆ. ಅವರು ವಿಶೇಷ ಆಹ್ವಾನದ ಹಿನ್ನೆಲೆಯಲ್ಲಿ ಭಾಗವಹಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಧ್ವಜಾರೋಹಣ ನೆರವೇರಿಸಿದ್ದು, ಬಳಿಕ ನೆರೆದಿದ್ದ ಆಹ್ವಾನಿತರ ಬಳಿಗೆ ಬಂದು ಅವರು ಸ್ವಾತಂತ್ರ್ಯ ದಿನದ ಶುಭಾಶಯ ಕೋರಿದರು. ಆ ಕ್ಷಣ ರೋಮಾಂಚನವಾಗಿತ್ತು ಎಂದು ಭಾಗವಹಿಸಿದ ವಿದ್ಯಾರ್ಥಿನಿ ಪೂರ್ವಿ ತನ್ನ ಅನುಭವ ಹಂಚಿಕೊಂಡಿದ್ದಾರೆ.
ನಸುಕಿನ ವೇಳೆ 2 ಗಂಟೆಗೆ ಎದ್ದು ಕಾರ್ಯಕ್ರಮಕ್ಕಾಗಿ ಸಿದ್ಧಗೊಂಡು, 4 ಗಂಟೆಗೆ ಉಪಾಹಾರ ಸೇವಿಸಿ ಬೆಳಗ್ಗೆ 6 ಗಂಟೆಗೆ ನಿಗದಿಪಡಿಸಿದ ಆಸನಗಳಿಗೆ ತೆರಳಿದೆವು. 7.30ರ ಸುಮಾರಿಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಿ ಸರಿಸುಮಾರು 8 ಗಂಟೆಗೆ ಧ್ವಜಾರೋಹಣ ನೆರವೇರಿಸಿದರು. ಈ ಕ್ಷಣ ನಿಜಕ್ಕೂ ಅವಿಸ್ಮರಣೀಯವಾಗಿತ್ತು ಎಂದು ಅವರು ತಿಳಿಸಿದ್ದಾರೆ.
“78ನೇ ಸ್ವಾತಂತ್ರ್ಯೋತ್ಸವ ಮರೆಯಲಾಗದ ಕ್ಷಣ. ಹೊಸದಿಲ್ಲಿಯ ಸಮಾರಂಭ ದಲ್ಲಿ ಭಾಗವಹಿಸಿದ್ದು ಜೀವನ ಸಾರ್ಥಕವಾದ ಅನುಭವ ಸಿಕ್ಕಿತು. ನಾಲ್ಯಪದವು ಶಾಲೆಗೆ ದೊರೆತ ಗೌರವ ಇದಾಗಿದೆ’ ಎಂದು ಶಿಕ್ಷಕಿ ಶ್ವೇತಾ ತಿಳಿಸಿದ್ದಾರೆ.