Advertisement
ಸುಳ್ಯ: ಪಿಯುಸಿಯಲ್ಲಿರುವ ಸಂದರ್ಭದಲ್ಲೇ ಸೇನೆಗೆ ಆಯ್ಕೆಯಾಗಿ ಬಳಿಕದ ದಿನಗಳಲ್ಲಿ ಗಡಿಯಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡರು. ಅಧಿಕಾರಿ ಯಾಗಬೇಕೆಂಬ ಬಯಕೆಯಿಂದ ವೃತ್ತಿ ಯೊಂದಿಗೆ ಕಲಿಕೆಯನ್ನೂ ಮುಂದುವರಿಸಿ ಇನ್ನೇನು ಅಧಿಕಾರಿ ತರಬೇತಿಗೆ ಸೇರಲು ವಾರವಿರುವ ಮೊದಲೇ ಗಡಿಯಲ್ಲಿ ವೈರಿ ಪಡೆಯ ಗುಂಡೇಟು ತಗಲಿ ವೀರ ಮರಣವನ್ನಪ್ಪಿದ್ದರು ಸುಳ್ಯದ ಈ ವೀರ ಯೋಧ.
ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿರುವಾಗ ಮಂಗಳೂರಿನಲ್ಲಿ ನಡೆದ ಶಿಬಿರದಲ್ಲಿ ಪಾಲ್ಗೊಂಡು ಸೇನೆಗೆ ನೇಮಕಗೊಂಡರು. ಬಳಿಕ ದೂರಶಿಕ್ಷಣದ ಮೂಲಕ ಪಿಯುಸಿ ಪೂರ್ಣಗೊಳಿಸಿದರು. ಬೆಂಗಳೂರು, ಬೆಳಗಾವಿ ಮೊದಲಾದೆಡೆ ತರಬೇತಿ ಪಡೆದು ಭಾರತೀಯ ಭೂ ಸೇನೆಯಲ್ಲಿ ಯೋಧನಾಗಿ ಸೇವೆ ಮುಂದುವರಿಸಿದರು.
ಅವರ ಪಿಯುಸಿಯ ಸಹಪಾಠಿ ಪೆರಾಜೆಯ ವಿಶ್ವನಾಥ ಕೂಡ ಸೇನೆ ಯಲ್ಲಿ ಜತೆಗೆ ಇರುತ್ತಾರೆ. 1984-85ರಲ್ಲಿ ಜಮ್ಮುವಿನ ನೌಷಾರದ ರುಂಬುಲಿದಾರ ಗಡಿ ಪ್ರದೇಶದಲ್ಲಿ ಕರ್ತವ್ಯದಲ್ಲಿದ್ದರು. ಆಗ ಅಲ್ಲಿ ಸದಾ ಗುಂಡಿನ ದಾಳಿ ನಡೆಯುತ್ತಲೇ ಇತ್ತು. ನಡೆದಾಡುವಾಗಲೂ ಎಚ್ಚರಿಕೆ ವಹಿಸಬೇಕಿತ್ತು. 1987ರಲ್ಲಿ ಗುಂಡಿನ ಚಕಮಕಿ ಜಾಸ್ತಿಯಾಗುತ್ತದೆ. ರಾತ್ರಿ ಕಟ್ಟೆಚ್ಚರದಿಂದ ಇರುವಂತೆ ಹಿರಿಯ ಅಧಿಕಾರಿಗಳು ಸೂಚಿಸುತ್ತಾರೆ. 1987ರ ಸೆಪ್ಟಂಬರ್ 9ರಂದು ಯೋಧರು ಸ್ನಾನಕ್ಕೆ ತೆರಳಿದ್ದ ವಿಶ್ವಂಭರ ಸೇನಾ ಕ್ಯಾಂಪ್‌ಗೆ ಮರಳುತ್ತಿದ್ದಾಗ ವಿರೋಧಿಗಳ ಗುಂಡು ತಗಲಿತು. ಅವರ ಆಕ್ರಂದನ ಆಲಿಸಿದ ಭಾರತೀಯ ಯೋಧರು ಸಮೀಪಕ್ಕೆ ತೆರಳಿ ನೋಡಿದಾಗ ಪಾಕಿಸ್ಥಾನದ ನೆಲದಲ್ಲಿ ಬಿದ್ದಿರುವುದು ಕಾಣಿಸುತ್ತದೆ. ಬಹಳ ಸಾಹಸದಿಂದ ಸಹಯೋಧರು ಅವರನ್ನು ಭಾರತದ ನೆಲಕ್ಕೆ ಕರೆತಂದರು.
Related Articles
ವಿಶ್ವಂಭರ ಅವರ ಕಂಕುಳಿಗೆ ಗುಂಡು ತಾಗಿ, ಭುಜದ ಮೂಲಕ ಹೊರ ಬಂದಿತ್ತು. ತೀವ್ರ ಗಾಯಗೊಂಡಿದ್ದ ಅವರು ನೀವೆಲ್ಲ ಹುಷಾರಾಗಿರಿ, ಈ ವಿಷಯ ಮನೆಗೆ ತಿಳಿಸಬೇಡಿ ಎಂದು ಸಹಯೋಧರಿಗೆ ತಿಳಿಸಿ ಪ್ರಾಣತ್ಯಾಗ ಮಾಡುತ್ತಾರೆ. ಅಂದು ಯೋಧರ ದೇಹವನ್ನು ಊರಿಗೆ ಕಳುಹಿಸುವ ನಿಯಮ ಇಲ್ಲದೇ ಇದ್ದುದರಿಂದ ಅಲ್ಲೇ ಅಂತ್ಯಕ್ರಿಯೆ ನಡೆಸಿ 11 ದಿನದ ಬಳಿಕ ಚಿತಾಭಸ್ಮವನ್ನು ಸಕಲ ಗೌರವದೊಂದಿಗೆ ಅಜ್ಜಾವರದ ಮನೆಗೆ ತಲುಪಿಸಲಾಗುತ್ತದೆ.
Advertisement
ಮೂರನೇ ದಿನ ಮನೆಗೆ ಮಾಹಿತಿಅಂದು ಸಂಪರ್ಕಕ್ಕೆ ಟೆಲಿಗ್ರಾಂ ವ್ಯವಸ್ಥೆ ಇದ್ದಿದ್ದು, ಸೇನೆಯ ಕಡೆಯಿಂದ ಮನೆಯವರಿಗೆ ಮೊದಲಿಗೆ ವಿಶ್ವಂಭರ ಗಾಯಗೊಂಡಿದ್ದಾರೆ ಎಂದು ಟೆಲಿಗ್ರಾಂ ಮಾಡಲಾಗುತ್ತದೆ. ಎರಡನೇಯದಾಗಿ ಗಂಭೀರ ಸ್ಥಿತಿಯಲ್ಲಿದ್ದಾರೆ, ಕೊನೆಯಲ್ಲಿ ಮೃತಪಟ್ಟಿದ್ದಾರೆ ಎಂಬ ಮಾಹಿತಿ ನೀಡಲಾಗುತ್ತದೆ. ಘಟನೆ ಸಂಭವಿಸಿ 3 ದಿನಗಳ ಬಳಿಕ ಮನೆಯವರಿಗೆ ಈ ಮಾಹಿತಿ ತಲುಪುತ್ತದೆ. ಅಂತಿಮ ದರ್ಶನ ಸಾಧ್ಯವಾಗದಿದ್ದರೂ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದನೆಂಬ ಹೆಮ್ಮೆ ಮನೆಮಂದಿಗೆ. ಈ ಘಟನೆಯ ಬಳಿಕ ಭಾರತೀಯ ಯೋಧರ ಗುಂಡಿನ ದಾಳಿಗೆ 8 ಮಂದಿ ಪಾಕಿಸ್ಥಾನಿ ಸೈನಿಕರು ಮೃತಪಟ್ಟಿದ್ದು, ಜೀವಭಯದಿಂದ ತತ್ತರಿಸಿ ಬಿಳಿ ಧ್ವಜ ಪ್ರದರ್ಶಿಸಿ ಶಾಂತಿಮಂತ್ರ ಪಠಿಸಿದ್ದರು ಎಂದು ತಿಳಿಸುತ್ತಾರೆ ಎನ್ನುತ್ತಾರೆ ಮಾಜಿ ಯೋಧ ವಿಶ್ವನಾಥ ಪೆರಾಜೆ. ವಿಶ್ವಂಭರ ಅವರ ಸಹೋದರ ಚಂದ್ರಹಾಸ ಕೂಡ ಯೋಧರಾಗಿದ್ದು, ನಿವೃತ್ತರಾಗಿದ್ದಾರೆ. ಪಿಯುಸಿಯಲ್ಲಿರುವಾಗಲೇ ಸಹೋದರ ಸೇನೆಗೆ ಸೇರಿದ್ದನು. 1987ರಲ್ಲಿ ಗಡಿಯಲ್ಲಿ ಗುಂಡೇಟಿಗೆ ಮೃತರಾಗಿರುವ ವಿಚಾರ ನಮಗೆ ಮೂರು ದಿನಗಳ ಬಳಿಕ ತಿಳಿಯಿತು. ಬಳಿಕ ಮನೆಗೆ ಚಿತಾಭಸ್ಮವನ್ನು ಮನೆಗೆ ತಲುಪಿತ್ತು. ಸರಕಾರ ಹುತಾತ್ಮ ಯೋಧರ ಬಗ್ಗೆ ಉತ್ತಮ ನಿರ್ಧಾರ ಕೈಗೊಂಡಿದೆ. ಇದರಿಂದ ಮುಂದಿನ ಜನರಿಗೂ ಹುತಾತ್ಮ ಯೋಧರ ಬಗ್ಗೆ ತಿಳಿಯಲಿದೆ.
– ರಾಧಾಕೃಷ್ಣ, ದಿ| ವಿಶ್ವಂಭರ ಅವರ ಸಹೋದರ -ದಯಾನಂದ ಕಲ್ನಾರ್