Advertisement

ಬ್ರಿಟಿಷರ ವಿರುದ್ಧ ಚಳವಳಿ; ಕರಾವಳಿಯ ಮೊದಲ ದಂಪತಿ; ತಾಯಿ ಮಡಿಲಿಗೆ ಮಗುವನ್ನೊಪ್ಪಿಸಿ ಜೈಲಿಗೆ!

11:27 AM Aug 15, 2023 | Team Udayavani |

ಕಾರ್ಕಳ: ಬ್ರಿಟಿಷರ ವಿರುದ್ಧದ ಚಳವಳಿಯಲ್ಲಿ ಭಾಗವಹಿಸಿದ ಕರಾವಳಿ ಜಿಲ್ಲೆಯ ಮೊದಲ ದಂಪತಿಯೆಂಬ ಹೆಗ್ಗಳಿಕೆ ಕಾರ್ಕಳದ ಎಂ.ಡಿ. ಅಧಿಕಾರಿ- ಕಮಲಾವತಿ ದಂಪತಿಯದ್ದು. ಮಗುವಿಗೆ ಒಂದು ವರ್ಷವಿರುವಾಗಲೇ ತಮ್ಮ ತಾಯಿಯ ಮಡಿಲಿಗೆ ಮಗುವನ್ನು ಒಪ್ಪಿಸಿ ಜೈಲು ಸೇರಿದ್ದರು ಹೋರಾಟಗಾರ್ತಿ ಕಮಲಾವತಿಯವರು.

Advertisement

ಹುಟ್ಟಿದ್ದು 1921ರಲ್ಲಿ. ಪುತ್ತೂರು ಪಡುಕುಡೂರು ಬೀಡು ನಿವಾಸಿ ಅಂತಪ್ಪ ಕೊಂಡೆ. ತಾಯಿ ಪುತ್ತೂರು ಪಡಾಯೂರುಗುತ್ತು ನಿವಾಸಿ ಚೆಲುವಮ್ಮ. ಕಲಿತದ್ದು ಪುತ್ತೂರಿನಲ್ಲಿ ಎಂಟನೇ ತರಗತಿ. 17ನೇ ವಯಸ್ಸಿನಲ್ಲಿ ಸ್ವಾತಂತ್ರ್ಯ ಹೋರಾಟಗಾರ ಮುದ್ರಾಡಿ ಬೀಡು ನಿವಾಸಿ ಎಂ. ಧರ್ಮರಾಜ (ಎಂ.ಡಿ.) ಅಧಿಕಾರಿ ಅವರ ಜತೆ ವಿವಾಹ. 18ನೇ ವಯಸ್ಸಿನಲ್ಲಿ ಗಂಡು ಮಗುವಿಗೆ ಜನ್ಮ. ಎಂ.ಡಿ. ಅಧಿಕಾರಿ ಗಾಂಧೀಜಿ ಜತೆಗೆ ದೂರವಾಣಿಯಲ್ಲಿ ಒಮ್ಮೆ ಸತ್ಯಾಗ್ರಹದ ಕುರಿತು ಮಾತನಾಡುತ್ತಿದ್ದಾಗ, ಮಹಿಳೆಯರೂ ಭಾಗವಹಿಸಬೇಕು ಎಂದಿದ್ದನ್ನು ಕೇಳಿಸಿಕೊಂಡ ಕಮಲಾವತಿ ಪುತ್ತೂರಿನಲ್ಲೇ ಮಹಿಳಾ ಸಂಘಟನೆ ಹುಟ್ಟು ಹಾಕಿ ಹೋರಾಟಕ್ಕೆ ಇಳಿದರು. ಪೊಲೀಸರು ಅವರನ್ನು ಬಂಧಿಸಿ ವೆಲ್ಲೂರು ಜೈಲಿಗೆ ಕಳುಹಿಸಿದರು. 6 ತಿಂಗಳು ಜೈಲಿನಲ್ಲಿದ್ದರು.

ಎಂ.ಡಿ. ಅಧಿಕಾರಿ ಕಾರ್ಕಳ ತಾಲೂಕಿನ ಮುದ್ರಾಡಿಯಲ್ಲಿ 1913 ಆ. 1ರಂದು ಜನನ. ಸೂಡಿ ಭೋಜಪ್ಪ ಹೆಗ್ಗಡೆ ಮತ್ತು ಶಿವದೇವಿ ದಂಪತಿಯ ಪುತ್ರ. ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದ ಅವರು 1942ರಲ್ಲಿ ಮಂಗಳೂರಿನಲ್ಲಿ ನಡೆದ ಸಭೆಯಲ್ಲಿ ಭಾಷಣ ಮಾಡಿ ಪೊಲೀಸರ ಲಾಠಿ ಏಟು ತಿಂದಿದ್ದರು. ತಲೆಗೆ ಬಲವಾದ ಗಾಯಗಳಾಗಿದ್ದವು. ಪ್ರಜ್ಞೆ ತಪ್ಪಿತು.

ಬಿಟ್ಟರೇ ಈಗಲೇ ಮೈದಾನಕ್ಕೆ ಹೋಗುವೆ
ಲಾಠಿ ಏಟು ತಿಂದ ಎಂ.ಡಿ. ಅಧಿಕಾರಿಯವರಿಗೆ ಪ್ರಜ್ಞೆ ಮರಳಿದಾಗ ಚಿಕಿತ್ಸೆ ನೀಡಿದ ವೈದ್ಯರು, ಮರಳಿ ಮೈದಾನಕ್ಕೆ ಹೋಗುತ್ತೀರಾ ಎಂದು ಕೇಳಿದ್ದರಂತೆ. “ನೀವು ಬಿಟ್ಟರೆ ಈಗಲೇ ಹೋಗುವೆ’ ಎಂದಿದ್ದರಂತೆ ಅವರು. ಚೇತರಿಸಿಕೊಂಡ ಅಧಿಕಾರಿಯವರನ್ನು ಮತ್ತೆ ಬಂಧಿಸಿ ಬಳ್ಳಾರಿ ಜೈಲಿಗೆ ಕಳುಹಿಸಲಾಯಿತು. ಒಂದು ವರ್ಷ ಕಠಿನ ಶಿಕ್ಷೆ ಅನುಭವಿಸಿದ್ದರು. ಅನಂತರದ ದಿನಗಳಲ್ಲಿ ಕೇಂದ್ರ ಸರಕಾರ ಸ್ವಾತಂತ್ರ್ಯ ಹೋರಾಟಗಾರರಿಗೆ ಕೊಡಮಾಡಿದ ಗೌರವಧನವನ್ನು ದೇಶಭಕ್ತಿಯಿಂದ ನಿರಾಕರಿಸಿದ್ದ ಶ್ರೇಷ್ಠ ಸ್ವಾತಂತ್ರ್ಯ ಹೋರಾಟಗಾರರು ಇವರು.

Advertisement

Udayavani is now on Telegram. Click here to join our channel and stay updated with the latest news.

Next