Advertisement

Independence Day: ವೀರ ವನಿತೆ ಕಿತ್ತೂರು ಚೆನ್ನಮ್ಮನ ವಂಶಜರನ್ನು ಕೇಳುವವರೇ ಇಲ್ಲ!

03:12 PM Aug 14, 2024 | Team Udayavani |

ಕಿತ್ತೂರು ಚೆನ್ನಮ್ಮ (1778- 1830)
ಬ್ರಿಟಿಷರ ಕುತಂತ್ರ, ರಾಜ್ಯಾಕಾಂಕ್ಷೆ ಮತ್ತು ದಬ್ಬಾಳಿಕೆಯ ವಿರುದ್ಧ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ವೀರಾಂಗನೆಯರಲ್ಲಿ ಎಲ್ಲಕ್ಕಿಂತ ಮೊದಲಿನ ಹೆಸರು ಕಿತ್ತೂರು ಚೆನ್ನಮ್ಮ. ಝಾನ್ಸಿಯ ರಾಣಿ ಲಕ್ಷ್ಮೀಬಾಯಿಗೂ ಹಿಂದೆ ಬ್ರಿಟಿಷರ ವಿರುದಟಛಿ ಸಡ್ಡು ಹೊಡೆದು ನಿಂತಿದ್ದ ಕಿತ್ತೂರು ಚೆನ್ನಮ್ಮ, ಭಾರತೀಯ ಸ್ವಾತಂತ್ರ್ಯಾಕಾಂಕ್ಷೆಯ ಲಾಂಛನವಾಗಿದ್ದಳು. 1820ರ ಸುಮಾರಿಗೆ “ಈಸ್ಟ್‌ ಇಂಡಿಯಾ ಕಂಪೆನಿ’ ಭಾರತದಲ್ಲಿ ಬ್ರಿಟಿಷ್‌ ಸಾಮ್ರಾಜ್ಯ ಸ್ಥಾಪಿಸಲು ಆರಂಭಿಸಿತ್ತು. ತನ್ನದೇ ನಿಯಮಗಳ ಪ್ರಕಾರ ದೇಶದ ಒಂದೊಂದೇ ಪ್ರದೇಶವನ್ನು ಕಬಳಿಸುತ್ತ, ರಾಜ್ಯವನ್ನು ವಿಸ್ತರಿಸುತ್ತಿತ್ತು. ತನ್ನ ಅಧೀನದಲ್ಲಿದ್ದ ಸಾಮಂತ ರಾಜ್ಯಗಳಲ್ಲಿ ರಾಜ ಗಂಡು ಮಕ್ಕಳಿಲ್ಲದೆ ತೀರಿಕೊಂಡರೆ, ಆ ಪ್ರದೇಶ ಬ್ರಿಟಿಷ್‌ ರಾಜ್ಯಕ್ಕೆ ಸೇರುತ್ತದೆ ಎಂಬುದು ಕಂಪೆನಿ ಸರಕಾರದ ಒಂದು ಅನಧಿಕೃತ ನಿಯಮವಾಗಿತ್ತು. ಕಿತ್ತೂರಿನಲ್ಲಿ ಕಂಪೆನಿ ಸರಕಾರದ ಕಲೆಕ್ಟರ್‌ ಆಗಿದ್ದ ಜಾನ್‌ ಥ್ಯಾಕರೆ ಈ ನಿಯಮದ ಅನ್ವಯ ಕಿತ್ತೂರನ್ನು ಕಬಳಿಸಲು ಸಮಯ ಕಾಯುತ್ತಿದ್ದ .

Advertisement

ರಾಣಿ ಚೆನ್ನಮ್ಮಳ ಪತಿ ಕಿತ್ತೂರಿನ ರಾಜ ಮಲ್ಲಸರ್ಜ ಪುಣೆಯಲ್ಲಿ ಪೇಶ್ವೆಗಳ ಕಾರಾವಾಸದಲ್ಲಿದ್ದ . ಮಲ್ಲಸರ್ಜನ ಹಿರಿಯ ಪತ್ನಿಯ ಮಗ ಶಿವಲಿಂಗ ಸರ್ಜ ರಾಜ್ಯಭಾರ ನಡೆಸುತ್ತಿದ್ದ . ಶಿವಲಿಂಗಪ್ಪ ಎಂಬ ಹುಡುಗನನ್ನು ದತ್ತು ತೆಗೆದುಕೊಂಡಿದ್ದ. 1824ರಲ್ಲಿ ಶಿವಲಿಂಗ ಸರ್ಜ ಅನಾರೋಗ್ಯದಿಂದ ತೀರಿಕೊಂಡ. ರಾಜ್ಯಸೂತ್ರಗಳು ಚೆನ್ನಮ್ಮನ ಕೈಸೇರಿದವು. ಅವಳು ಶಿವಲಿಂಗಪ್ಪನನ್ನು
ಪಟ್ಟಕ್ಕೇರಿಸಿದಳು. ಥ್ಯಾಕರೆ ಮತ್ತು ಬ್ರಿಟಿಷ್‌ “ಈಸ್ಟ್‌ ಇಂಡಿಯಾ ಕಂಪೆನಿ’ ಶಿವಲಿಂಗಪ್ಪನ ದತ್ತಕವನ್ನು ಮನ್ನಿಸಲಿಲ್ಲ. ದತ್ತು ಪುತ್ರರಿಗೆ ಅಧಿಕಾರ ಇಲ್ಲ ಎಂದು ಘೋಷಿಸಿದ ಕಂಪೆನಿ ಸರಕಾರ ಶಿವಲಿಂಗಪ್ಪನನ್ನು ಕಿತ್ತೂರಿನಿಂದ ಹೊರಹಾಕಲು ಆದೇಶ ಹೊರಡಿಸಿತು. ರಾಣಿ ಬ್ರಿಟಿಷರಿಗೆ ಬಗ್ಗಲಿಲ್ಲ . ಅವಳು ಸೈನ್ಯವನ್ನು ಬಲಪಡಿಸಿ, ಬ್ರಿಟಿಷರ ವಿರುದ್ಧ ಯುದ್ಧಕ್ಕೆ ಇಳಿದಳು. 20,797 ಸೈನಿಕರು, 437 ಬಂದೂಕುಗಳ ಸಹಿತ ಮದ್ರಾಸ್‌ ನೇಟಿವ್‌ ಅಶ್ವಾರೋಹಿ ತೋಪು ದಳದ ಸೈನ್ಯ ಕಿತ್ತೂರಿನ ಮೇಲೆ ಆಕ್ರಮಣ ಮಾಡಿತು. ರಾಣಿ ಬ್ರಿಟಿಷ್‌ ಸೈನ್ಯವನ್ನು ಧೈರ್ಯದಿಂದ ಎದುರಿಸಿದಳು.

1824 ಅಕ್ಟೋಬರ್‌ 22ರಂದು ನಡೆದ ಮೊದಲ ಯುದ್ಧದಲ್ಲಿ ಜಾನ್‌ ಥ್ಯಾಕರೆ ಸತ್ತುಬಿದ್ದ . ಇಬ್ಬರು ಬ್ರಿಟಿಷ್‌ ಅಧಿಕಾರಿಗಳು ಸೆರೆ ಸಿಕ್ಕಿದರು. ಲೆಫ್ಟಿನೆಂಟ್‌ ಕರ್ನಲ್‌ ಡೀಕನ್‌ ನೇತೃತ್ವದಲ್ಲಿ ಇನ್ನಷ್ಟು ದೊಡ್ಡ ಸೈನ್ಯ ಕಿತ್ತೂರಿಗೆ ಆಗಮಿಸಿತು. ಸಂಗೊಳ್ಳಿ ರಾಯಣ್ಣ , ಗುರುಸಿದ್ದಪ್ಪ ಮುಂತಾದ ವೀರ ಸರದಾರರ ಜೊತೆಗೆ ರಾಣಿ ಯುದ್ಧಭೂಮಿಗೆ ಇಳಿದು ವೀರಾವೇಶದಿಂದ ಹೋರಾಡಿದಳು.

ಈ ಯುದ್ಧದಲ್ಲಿ ಶೋಲಾಪುರದ ಸಬ್‌ಕಲೆಕ್ಟರ್‌ ಥಾಮಸ್‌ ಮನ್ರೋ ತೀರಿಕೊಂಡ. ಡಿಸೆಂಬರ್‌ ಎರಡರಂದು ದೇಶದ್ರೋಹಿಗಳ ನೆರವಿನಿಂದ ಬ್ರಿಟಿಷ್‌ ಸೈನ್ಯ ಗುಪ್ತದ್ವಾರದ ಮೂಲಕ ಕಿತ್ತೂರಿನ ಕೋಟೆಯೊಳಗೆ ನುಗ್ಗಿತು. ರಾಣಿ ಚೆನ್ನಮ್ಮ ಉಗ್ರ ಹೋರಾಟದ ಬಳಿಕ ಸೆರೆಸಿಕ್ಕಿದಳು. ಅವಳನ್ನು ಬೈಲಹೊಂಗಲ ಕೋಟೆಯಲ್ಲಿ ಸೆರೆಹಾಕಲಾಯಿತು. ಆರುವರ್ಷ ಸೆರೆವಾಸ ಅನುಭವಿಸಿದ ರಾಣಿ ಸ್ವತಂತ್ರ ಕಿತ್ತೂರಿಗಾಗಿ ಹಾತೊರೆಯುತ್ತ ಅಸುನೀಗಿದಳು.

Advertisement

ರಾಣಿಯ ಆಪ್ತ ಸರದಾರ ಸಂಗೊಳ್ಳಿ ರಾಯಣ್ಣ ಬ್ರಿಟಿಷರ ವಿರುದ್ಧ ಕೂಟನೀತಿಯ ಯುದ್ಧ ಮುಂದುವರಿಸಿದ್ದ . ಆದರೆ ಕೊನೆಗೆ 1829ರಲ್ಲಿ ಸೆರೆಸಿಕ್ಕಿ ಗಲ್ಲಿಗೇರಿದ. ಮೂರು ದಶಕಗಳ ಬಳಿಕ 1857ರಲ್ಲಿ ಬ್ರಿಟಿಷರ ವಿರುದ್ಧ ಭಾರತೀಯ ಸಿಪಾಯಿಗಳು ಸ್ವಾತಂತ್ರ್ಯ
ಸಮರ ಸಾರಿದರು. ಕಿತ್ತೂರು ಸಂಸ್ಥಾನದ ಕೊನೆಯ ಕುಡಿ ಶಿವಲಿಂಗಪ್ಪ ಈ ದಂಗೆಯಲ್ಲಿ ಭಾಗವಹಿಸಿದ. ಬ್ರಿಟಿಷರ ವಿರುದ್ಧ ಒಂದು ಸೈನ್ಯ ಸಂಘಟಿಸಿ, ಪೌರುಷದಿಂದ ಹೋರಾಡಿ ಪ್ರಾಣಾರ್ಪಣೆ ಮಾಡಿದ. ಇಂದು ಕಿತ್ತೂರು ಚೆನ್ನಮ್ಮನ ಹೆಸರಿನಲ್ಲಿ ಕರ್ನಾಟಕದ ಸುತ್ತ ಹಲವು ಸ್ಮಾರಕಗಳು, ಪ್ರತಿಮೆಗಳಿವೆ. ಬೆಳಗಾವಿಯ ವಿಶ್ವವಿದ್ಯಾಲಯವನ್ನು “ರಾಣಿ ಚೆನ್ನಮ್ಮ ಯುನಿವರ್ಸಿಟಿ’ ಎಂದು ನಾಮಕರಣ ಮಾಡಲಾಗಿದೆ.

ಆದರೆ, ರಾಣಿಯ ವಂಶಜರನ್ನು ಕೇಳುವವರಿಲ್ಲ. 11 ಕುಟುಂಬಗಳನ್ನು ರಾಣಿ ಚೆನ್ನಮ್ಮನ ವಂಶದ ಉತ್ತರಾಧಿಕಾರಿಗಳಾಗಿ ಗುರುತಿಸಲಾಗಿದೆ. ಇವರು ಕಿತ್ತೂರು, ಖಾನಾಪುರ ಮತ್ತು ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ “ಗಡ್‌ ಹಿಂಗ್ಲಜ್‌’ ಎಂಬಲ್ಲಿ ನೆಲೆಸಿದ್ದಾರೆ. ಇವರಿಗೆ ಸರಕಾರದಿಂದ ಯಾವುದೇ ಸೌಕರ್ಯಗಳು ಸಿಗುವುದಿಲ್ಲ . ಮೈಸೂರಿನ ದಸರೆಯಲ್ಲಿ ಒಡೆಯರ ಕುಟುಂಬ ಇರುತ್ತದೆ, ಕೋಲ್ಕತಾದಲ್ಲಿ ಎಲ್ಲೋ ಇರುವ ಟಿಪ್ಪು ಸುಲ್ತಾನನ ಕುಟುಂಬದ ಸದಸ್ಯರಿಗೂ ಆಮಂತ್ರಣ ಹೋಗುತ್ತದೆ. ಆದರೆ ಕಿತ್ತೂರಿನ ರಾಣಿಯ ವಂಶಜರನ್ನು ಯಾರೂ ಆಮಂತ್ರಿಸುವುದಿಲ್ಲ .

1968ರಲ್ಲಿ ತಾತ್ಯಾಸಾಹೇಬ್‌ ದೇಸಾಯಿ ಎಂಬವರು ಈ ಕುಟುಂಬಗಳ ನಾಯಕತ್ವ ವಹಿಸಿಕೊಂಡಿದ್ದಾಗ ಸರಕಾರ ಈ ಕುಟುಂಬಗಳಿಗೆ ಒಟ್ಟು 11 ಕೋಟಿ ರೂಪಾಯಿಗಳ ಪರಿಹಾರ ಧನ ಕೊಡಲು ಒಪ್ಪಿಕೊಂಡಿತು. ಇದರ ಒಂದು ಚಿಕ್ಕಾಸು ಕೂಡ ಅವರ ಕೈ ಸೇರಿಲ್ಲ ಎಂದು ಇವರ ಗೋಳು. ಇದಕ್ಕಾಗಿ ಇವರು ನ್ಯಾಯಾಲಯದ ಬಾಗಿಲು ತಟ್ಟಬೇಕಾಗಿ ಬಂದಿದೆ.

*ತುಕಾರಾಮ್‌ ಶೆಟ್ಟಿ
ಕೃಪೆ: ತರಂಗ ವಾರಪತ್ರಿಕೆ

Advertisement

Udayavani is now on Telegram. Click here to join our channel and stay updated with the latest news.

Next